ಬೆಂಗಳೂರು: ಬಿಬಿಎಂಪಿಗೆ ಸಂಗ್ರಹವಾಗುವ ಆದಾಯ ಹಾಗೂ ಸರ್ಕಾರದಿಂದ ಬರುವ ಅನುದಾನಕ್ಕೆ ಅನುಗುಣವಾಗಿ ಜನಪರ ಹಾಗೂ ವಾಸ್ತವಿಕ ಬಜೆಟ್ ಮಂಡಿಸಿದ್ದೇವೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಸೋಮವಾರ ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಪಾಲಿಕೆಯ ಎಲ್ಲ ಮೂಲಗಳಿಂದ ಆದಾಯ ತರಲು ಯೋಜನೆ ಹಾಕಿಕೊಳ್ಳಲಾಗಿದೆ. ಆಸ್ತಿ ತೆರಿಗೆ, ಸುಧಾರಣಾ ಶುಲ್ಕ, ಟೋಟಲ್ ಸ್ಟೇಷನ್ ಸರ್ವೇ ಹೀಗೆ ಪ್ರತಿಯೊಂದು ವಿಭಾಗದಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸಲಾಗುವುದು.
ಜತೆಗೆ ಸರ್ಕಾರದಿಂದ ಘೋಷಿಸಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದರು. ಹೊಸ ವರ್ಷದಂದು ಪಾಲಿಕೆ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ಪಾಲಿಕೆಯಿಂದ ಐದು ಲಕ್ಷ ರೂ. ಠೇವಣಿ ಇಡಲಾಗುತ್ತಿತ್ತು.
ಆದರೆ, ಜನರು ಪ್ರತಿಯೊಂದು ಹೆಣ್ಣು ಮಗುವಿಗೂ ಈ ಸೌಲಭ್ಯ ದೊರೆಯಬೇಕೆಂದು ಮನವಿ ಮಾಡಿದರಿಂದ, ಪಾಲಿಕೆಯ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಹೆಣ್ಣು ಮಗುವಿಗೂ “ಮಹಾಲಕ್ಷ್ಮೀ’ ಯೋಜನೆಯಡಿಯಲ್ಲಿ 1 ಲಕ್ಷ ರೂ. ಬಾಂಡ್‌ನ್ನು ನೀಡಲಾಗುವುದು.
ಅದೇ ರೀತಿ ಮಹಿಳಾ ಸ್ವಯಂ ಉದ್ಯೋಗಿಗಳಿಗೆ ಸಂಚಾರಿ ಕ್ಯಾಂಟೀನ್ ಖರೀದಿಸಲು ಶೇ.50ರಷ್ಟು ಸಬ್ಸಿಡಿ ಸೇರಿದಂತೆ ಎಲ್ಲ ವರ್ಗಗಳಿಗೆ ಯೋಜನೆಗಳನ್ನು ನೀಡಿದ್ದೇವೆ ಎಂದು ಸಮರ್ಥಿಸಿಕೊಂಡರು. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು,
ಜನರಿಂದ ಸಲಹೆಗಳನ್ನು ಪಡೆದು ಅವರ ನಿರೀಕ್ಷೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸಲಾಗಿದೆ. ಹೀಗಾಗಿ ಪ್ರತಿಯೊಂದು ಯೋಜನೆಗಳನ್ನು ತಪ್ಪದೇ ಅನುಷ್ಠಾನಗೊಳಿಸುತ್ತೇವೆ. ನಗರದ ಜನರಿಗೆ ಉತ್ತಮವಾದ ಬಜೆಟ್ ನೀಡಿದ ತೃಪ್ತಿಯಿದೆ ಎಂದು ಹೇಳಿದರು.