ಭುವನೇಶ್ವರ: ಜನಪ್ರಿಯ ಸಂಬಲ್ಪುರಿ ಗಾಯಕಿ ರುಕ್ಸಾನಾ ಬಾನೊ(27) ಅವರು ಏಮ್ಸ್ ಭುವನೇಶ್ವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರುಕ್ಸಾನಾ ಸ್ಕ್ರಬ್ ಟೈಫಸ್(Scrub Typhus) ಚಿಕಿತ್ಸೆ ಒಳಗಾಗಿದ್ದರು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದರೂ, ಬುಧವಾರ ತಡ ರಾತ್ರಿ ಆಕೆ ಮೃತಪಟ್ಟಿದ್ದು ಇದು ಯಾವ ಕಾರಣದಿಂದ ಎಂದು ವೈದ್ಯರು ಇದುವರೆಗೂ ದೃಢಪಡಿಸಿಲ್ಲ ಎನ್ನಲಾಗಿದೆ.
ಈ ನಡುವೆ ಆಕೆಯ ಪೋಷಕರು ರುಕ್ಸಾನಾಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಅಲ್ಲದೆ ಜನಪ್ರಿಯ ಗಾಯಕಿಯಾದ ಕಾರಣ ಈಕೆಯ ಪ್ರತಿಸ್ಪರ್ಧಿಯೇ ಈಕೆಗೆ ವಿಷಪ್ರಾಶನ ಮಾಡಿರಬಹುದು ಎಂದು ತಾಯಿ ಹಾಗೂ ಸಹೋದರಿ ಅನುಮಾನ ವ್ಯಕ್ತಪಡಿಸಿದ್ದಾರೆ, ಇದರ ಜೊತೆಗೆ ಆಕೆಗೆ ಬೆದರಿಕೆ ಕರೆಗಳು ಕೂಡಾ ಬರುತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಸುಮಾರು 15 ದಿನಗಳ ಹಿಂದೆ ಬೋಲಂಗಿರ್‌ನಲ್ಲಿ ಶೂಟಿಂಗ್ ಮಾಡುವ ವೇಳೆ ಜ್ಯೂಸ್ ಕುಡಿದು ರುಕ್ಸಾನಾ ಅನಾರೋಗ್ಯಕ್ಕೆ ಒಳಗಾಗಿದ್ದರು ಈ ಹಿನ್ನೆಲೆಯಲ್ಲಿ ಆಗಸ್ಟ್ 27ರಂದು ಆಕೆಯನ್ನು ಭವಾನಿಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಾಥಮಿಕ ಚಿಕಿತ್ಸೆಯ ನಂತರ ಆಕೆಯನ್ನು ಬೋಲಂಗಿರ್‌ನ ಭೀಮಾ ಭೋಯ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಬಾರ್‌ಗಢ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಆಕೆಯ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ ಆಕೆಯನ್ನು ಭುವನೇಶ್ವರದ ಏಮ್ಸ್‌ಗೆ ಕರೆತರಲಾಯಿತು ಎಂದು ಆಕೆಯ ಸಹೋದರಿ ರೂಬಿ ಬಾನೊ ತಿಳಿಸಿದ್ದಾರೆ.
ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ