ಪಾಟ್ನಾ: ಇಂದು ದೇಶದೆಲ್ಲೆಡೆ ರಾಖಿ ಹಬ್ಬ. ಸಹೋದರ – ಸಹೋದರಿಯರ ನಡುವಿನ ಬಂಧುತ್ವವನ್ನು ಸಾರುವ ರಕ್ಷಾ ಬಂಧನ. ರಕ್ಷಾ ಬಂಧನ ಹಬ್ಬವನ್ನು ಪಾಟ್ನಾದ ಜನಪ್ರಿಯ ಟ್ಯೂಷನ್ ಬೋಧಕ ಖಾನ್ ಸರ್ ತಮ್ಮ ವಿದ್ಯಾರ್ಥಿಗಳ ಆಚರಿಸಿಕೊಂಡಿದ್ದಾರೆ.
ಖಾನ್ ಸರ್ ತಮ್ಮ ಕೋಚಿಂಗ್ ಸೆಂಟರ್ ನಲ್ಲಿ ರಕ್ಷಾ ಬಂಧನ ಹಬ್ಬದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಚ್ ನ ಸುಮಾರು 10 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಈ ವೇಳೆ ಖಾನ್ ಸರ್ ಗೆ ತನ್ನ ಮೆಚ್ಚಿನ ವಿದ್ಯಾರ್ಥಿನಿಯರು ಒಬ್ಬರ ಮೇಲೆ ಒಬ್ಬರಂತೆ ರಾಖಿಯನ್ನು ಕಟ್ಟಿದ್ದಾರೆ. ಸುಮಾರು 7 ಸಾವಿರ ವಿದ್ಯಾರ್ಥಿನಿಯರು ರಾಖಿಗಳನ್ನು ಖಾನ್ ಸರ್ ಅವರ ಕೈಗೆ ಕಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ರಾಖಿ ಕಟ್ಟಲು ನೂಕುನುಗ್ಗಲು ಉಂಟಾಗಿದ್ದರಿಂದ ಖುದ್ದು ಖಾನ್ ಸರ್ ಅವರೇ ಪ್ರತಿಯೊಬ್ಬ ವಿದ್ಯಾರ್ಥಿನಿಯರ ಬಳಿ ಹೋಗಿ ರಾಖಿ ಕಟ್ಟಿಸಿಕೊಂಡರು. ಸುಮಾರು ಎರಡೂವರೆ ಗಂಟೆ ಈ ರಾಖಿ ಕಟ್ಟಿಸಿಕೊಳ್ಳುವ ಕಾರ್ಯಕ್ರಮ ನೆರವೇರಿತು.
“ನನಗೆ ಸ್ವಂತ ಸಹೋರದರಿಯಿಲ್ಲ. ಆದ್ದರಿಂದ ನಾನು ಎಲ್ಲರನ್ನು ಸಹೋದರಿಯೆಂದು ಭಾವಿಸುತ್ತೇನೆ. ಪ್ರತಿ ವರ್ಷ ನಾನು ವಿದ್ಯಾರ್ಥಿಗಳಿಂದ ರಾಖಿಯನ್ನು ಕಟ್ಟಿಸಿಕೊಳ್ಳುತ್ತೇನೆ. ಈ ಬಾರಿ ಇಷ್ಟು ರಾಖಿಗಳನ್ನು ಕಟ್ಟಿದ್ದಾರೆ. ಖಂಡಿತವಾಗಿಯೂ ಜಗತ್ತಿನಲ್ಲಿ ಯಾರಿಗೂ ಕೂಡ ಇಷ್ಟೊಂದು ರಾಖಿಯನ್ನು ಕಟ್ಟುವುದಿಲ್ಲ. ಇದೊಂದು ರೀತಿಯ ದಾಖಲೆ” ಎಂದು ಖಾನ್ ಸರ್ ʼಆಜ್ ತಕ್ʼ ಗೆ ಹೇಳಿದ್ದಾರೆ.
“ಇಲ್ಲಿರುವ ವಿದ್ಯಾರ್ಥಿನಿಯರು ಬೇರೆ ಬೇರೆ ಸ್ಥಳಗಳಿಂದ ತಮ್ಮ ಕುಟುಂಬವನ್ನು ಬಿಟ್ಟು ಓದಲು ಬಂದಿದ್ದಾರೆ. ಅವರು ಅವರ ಕುಟುಂಬಗಳನ್ನು ಮಿಸ್ ಮಾಡಿಕೊಳ್ಳಬಾರದು. ಅದಕ್ಕಾಗಿ ನಾನು ಅವರೊಂದಿಗೆ ಅವರ ಸಹೋದರನಾಗಿ ಇದ್ದೇನೆ. ನನ್ನ ಸಹೋದರಿಯರು ಓದಿನಲ್ಲಿ ಯಶಸ್ಸು ಸಾಧಿಸಬೇಕು. ಆ ನಿಟ್ಟಿನಲ್ಲಿ ನಾನು ಅವರೊಂದಿಗೆ ಇದ್ದೇನೆ” ಎಂದು ಖಾನ್ ಸರ್ ಹೇಳಿದರು.
ಖಾನ್ ಸರ್ ಒಬ್ಬ ಅತ್ಯುತ್ತಮ ಗುರು. ಅವರಿಗಿಂತ ಬೆಸ್ಟ್ ಸಹೋದರ ಬೇರೆಯವರಿಲ್ಲ. ಅವರಿಗೆ ಜೀವನಪೂರ್ತಿ ನಾವು ರಾಖಿಯನ್ನು ಕಟ್ಟುತ್ತೇವೆ ಎಂದು ಕೆಲ ವಿದ್ಯಾರ್ಥಿನಿಯರು ಹೇಳಿದರು.