Advertisement

ಜನಪದರ ಜ್ಞಾನ ಶ್ರೇಷ್ಠ: ಸ್ವಾಮೀಜಿ

06:20 AM Jan 18, 2019 | |

ದಾವಣಗೆರೆ: ಜೀವನದ ಅನುಭವದ ಆಧಾರದಲ್ಲಿ ಕಂಡುಕೊಂಡ ಜನಪದರ ಜ್ಞಾನ ಮತ್ತು ತಂತ್ರಜ್ಞಾನ ಅತ್ಯಂತ ಶ್ರೇಷ್ಠ ಎಂದು ಹೆಬ್ಟಾಳ್‌ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಗುರುವಾರ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಾರಂಪರಿಕ ವೈದ್ಯ ಗುರುಕುಲ, ಪಾರಂಪರಿಕ ವೈದ್ಯ ಪರಿಷತ್‌ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಂಯುಕ್ತಾಶ್ರಯಲ್ಲಿ 2016-17 ಶೈಕ್ಷಣಿಕ ಸಾಲಿನ ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣದ ಪ್ರಮಾಣಪತ್ರ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜನಪದರ ವೈದ್ಯ ಪದ್ಧತಿ ಆಧುನಿಕ ವೈದ್ಯ ಪದ್ಧತಿಗಿಂತಲೂ ಶ್ರೇಷ್ಠವಾದುದು. ಜಾನಪದ ವಿಶ್ವವಿದ್ಯಾಲಯ ಅಂತಹ ಶಿಕ್ಷಣ ಕೊಡ ಮಾಡಿದೆ. ಪಡೆದ ಜ್ಞಾನವನ್ನು ಸರಿಯಾದ ರೀತಿ ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಯತೀಶ್‌ ಎಲ್‌. ಕೋಡಾವತ್‌ ಮಾತನಾಡಿ, ಕರ್ನಾಟಕ ಜನಪದ ಸಾಹಿತ್ಯ, ಕಲೆ ಮತ್ತು ಪಾರಂಪರಿಕ ಜ್ಞಾನದ ಗಣಿ. ಆ ಸಂಪತ್ತಿನ ಸಂರಕ್ಷಣೆ, ಸಂವರ್ಧನೆ, ಸಂಗ್ರಹ, ಪರಿಷ್ಕರಣೆ ಹಾಗೂ ವೈಜ್ಞಾನಿಕ ಸಂಶೋಧನೆಯ ಉದ್ದೇಶದಿಂದ ವಿಶ್ವವಿದ್ಯಾಲಯ ಕಾರ್ಯೋನ್ಮೋಖವಾಗಿದೆ. ಗ್ರಾಮೀಣರ ಮತ್ತು ಅಲಕ್ಷಿತ ಸಮುದಾಯದ ಜ್ಞಾನವನ್ನು ಶೈಕ್ಷಣಿಕ ಶಿಸ್ತಿಗೆ ಅಳವಡಿಸುವ ಮೂಲಕ ಜನಪದರ ಜ್ಞಾನವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ವ್ಯವಹಾರಿಕ ದೃಷ್ಟಿಯಿಂದ ಕೂಡಿರುವ ಆಧುನಿಕ ಜ್ಞಾನ- ತಂತ್ರಜ್ಞಾನದಲ್ಲಿ ಮಾನವೀಯ ಮೌಲ್ಯದ ಕೊರತೆ ಇದೆ. ಜನಪದರ ಅನುಭವ ಆಧಾರದಲ್ಲಿ ಕಟ್ಟಿಕೊಂಡ ಜ್ಞಾನ, ಸಾಹಿತ್ಯ, ಕಲೆ ಎಲ್ಲದರಲ್ಲಿ ಮಾನವೀಯ ಮನೋಭಾವ ಅಡಕವಾಗಿದೆ. ಬಹುತೇಕ ಜನಪದ ಜ್ಞಾನ ಮೌಖೀಕವಾಗಿ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಭಾರತದಲ್ಲಿ ಕಂಡುಕೊಂಡ ವೈದ್ಯ ಜ್ಞಾನ ಸಂಪತ್ತು ಯಾವುದೋ ವಿಧದಲ್ಲಿ ಶ್ರೀಮಂತ ರಾಷ್ಟ್ರಗಳಿಗೆ ತಲುಪಿ, ಅಲ್ಲಿನ ಕಂಪನಿಗಳಿಂದ ಔಷಧಗಳು ಮತ್ತು ಉತ್ಪನ್ನಗಳು ತಯಾರಾಗಿ ನಮಗೆ ಮಾರಾಟವಾಗುತ್ತಿದೆ ಎಂದು ತಿಳಿಸಿದರು.

ನೆಲಮೂಲದ ಜ್ಞಾನ ವೈಜ್ಞಾನಿಕವಾಗಿ ವಿಶ್ಲೇಷಣೆಗೊಂಡು, ಭಾರತೀಯ ಕ್ರಿಯಾಶೀಲ ವಿಜ್ಞಾನಿಗಳಿಗೆ ಆ ಜ್ಞಾನ ತಲುಪಿ ಸಾರ್ವತ್ರಿಕ ಬಳಕೆ ಆಗುವಂತಾಗಬೇಕು. ಜನಪದ ವೈದ್ಯ ಶಿಕ್ಷಣ ಪಡೆದವರು ಪಡೆದ ಜ್ಞಾನವನ್ನು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡು ಜಾನಪದ ವಿಶ್ವವಿದ್ಯಾಲಯದ ಘನತೆಯ ಹೆಚ್ಚಿಸುವಂತಾಗಬೇಕು ಎಂದು ಆಶಿಸಿದರು.

Advertisement

ಪಾರಂಪರಿಕ ವೈದ್ಯ ಗುರುಕುಲ ಪ್ರಾಂಶುಪಾಲ ಬಿ.ಎಂ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪಾರಂಪರಿಕ ವೈದ್ಯ ಪರಿಷತ್‌ ರಾಜ್ಯ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಟಿ.ಎನ್‌. ದೇವರಾಜ್‌, ಪಾರಂಪರಿಕ ವೈದ್ಯ ಪರಿಷತ್‌ ಸಂಸ್ಥಾಪಕ ಪ್ರೊ| ಜಿ. ಹರಿರಾಮಮೂರ್ತಿ, ಶಾಂತವೀರಪ್ಪ ಇತರರು ಇದ್ದರು. ಪಂಕಜಾ ಸ್ವಾಗತಿಸಿದರು. ದೇವರಾಜ್‌ ನಿರೂಪಿಸಿದರು. ಮಮತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next