ಉಡುಪಿ: ರಾಜ್ಯ ಸರಕಾರದ ಎರಡು ಖಾತೆಗಳ ಸಚಿವ ಸ್ಥಾನದ ಜವಾಬ್ದಾರಿ ಹೊತ್ತ ನನಗೆ ರಾಜ್ಯಾದ್ಯಂತ ಪ್ರವಾಸ ಮಾಡುವುದು ಅನಿವಾರ್ಯ. ಇದರ ನಡುವೆ ಉಡುಪಿ ವಿಧಾನಸಭಾ ಕ್ಷೇತ್ರದ ಜನತೆಯ ಸಮಸ್ಯೆಗೆ ವಿಶೇಷವಾಗಿ ಸ್ಪಂದಿಸಲೇಬೇಕೆನ್ನುವ ಸದುದ್ದೇಶದಿಂದ “ಜನಸಂಪರ್ಕ ಸಭೆ’ ಎನ್ನುವ ಜನೋಪಯೋಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಈ ನೆಲೆಯಲ್ಲಿ ನಾನಿಟ್ಟ ಜನಪರ ಕಾಳಜಿಯೇ ನನಗೆ ಶ್ರೀರಕ್ಷೆಯಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
Advertisement
ಹನುಮಂತನಗರ ಪ್ರೌಢಶಾಲೆ ನಿಟ್ಟೂರಿನಲ್ಲಿ ಶನಿವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ ಕೊಡಂಕೂರು ವಾರ್ಡ್ ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕೆಡಿಪಿ ಜಿಲ್ಲಾ ಸದಸ್ಯ ಉಮೇಶ್ ನಾಯ್ಕ, ಕೊಡಂಕೂರು ವಾರ್ಡ್ ಸದಸ್ಯೆ ಜಾನಕಿ ಗಣಪತಿ ಶೆಟ್ಟಿಗಾರ್, ನಗರಸಭೆ ಸದಸ್ಯ ಜನಾರ್ದನ್ ಭಂಡಾರ್ಕರ್, ನಗರಸಭೆ ಮಾಜಿ ಸದಸ್ಯ ಗಣಪತಿ ಶೆಟ್ಟಿಗಾರ್, ಆರ್‌ಟಿಒ ಗುರುಮೂರ್ತಿ ಕುಲಕರ್ಣಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್, ಡಿವೈಎಸ್‌ಪಿ ಎಸ್.ಜೆ. ಕುಮಾರಸ್ವಾಮಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಸುಧಾಕರ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ವಂದಿಸಿದರು.
ಜನರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದನೆಒಟ್ಟು 65 ಜನಸಂಪರ್ಕ ಸಭೆಗಳನ್ನು ಅಕ್ಟೋಬರ್ ತಿಂಗಳೊಳಗೆ ಪೂರೈಸುವ ಗುರಿ ಹೊಂದಿದ್ದು,ಸಭೆಯ ಮೂಲಕ ಜನರ ಬಹುತೇಕ ಸಂಕಷ್ಟಗಳನ್ನು ಬಗೆಹರಿಸುವ ಪಣ ತೊಟ್ಟಿದ್ದೇನೆ. 800ರೂ. ಮಿತಿಯೊಳಗಿನ ವಿದ್ಯುತ್ ಬಿಲ್ ಪಾವತಿಸುವವರು ಬಿಪಿಎಲ್ ಕಾರ್ಡ್ ಪಡೆದು ಸರಕಾರದಿಂದ ಸಿಗುವ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಹೊಸ ಮನೆ ರಚಿಸುವ ಪ.ಜಾತಿ/ಪ.ಪಂ.ದವರಿಗೆ 3.30 ಲ.ರೂ. ಇತರ ವರ್ಗದವರಿಗೆ 2.70 ಲ.ರೂ. ಅನುದಾನವನ್ನು ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಗ್ರಾಮಾಂತರ ಭಾಗಗಳಿಗೆ 55 ನರ್ಮ್ ಬಸ್‌ಗಳಿಗೆ ಪರ್ಮಿಟ್ ದೊರಕಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.