ವ್ಯಾಟಿಕನ್ ಸಿಟಿ: ಅತ್ಯಂತ ಅಪರೂಪದ ಬೆಳವಣಿಗೆಯೊಂದರಲ್ಲಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ತಮ್ಮ ಟೀಕಾಕಾರರಾದ ಅಮೆರಿಕದ ಬಿಷಪ್ ಜೋಸೆಫ್ ಸ್ಟ್ರಿಕ್ಲೆಂಡ್‌ರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಸಾಮಾನ್ಯವಾಗಿ ಕ್ಯಾಥೊಲಿಕ್ ಚರ್ಚ್‌ನಲ್ಲಿ ಯಾರನ್ನೂ ವಜಾ ಮಾಡುವುದಿಲ್ಲ, ಬದಲಾಗಿ ರಾಜೀನಾಮೆ ನೀಡುವಂತೆ ಸೂಚಿಸಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಗುರುವಾರವೇ ಸ್ಟ್ರಿಕ್ಲೆಂಡ್(65)ರನ್ನು ರಾಜೀನಾಮೆ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಪೋಪ್ ಅವರೇ ಮಧ್ಯಪ್ರವೇಶಿಸಬೇಕಾಯಿತು ಎಂದು ವ್ಯಾಟಿಕನ್ ಹೇಳಿದೆ.
ಟೆಕ್ಸಾಸ್‌ನ ಟೈಲರ್ ಡಯಾಸಿಸ್‌ನ ಬಿಷಪ್ ಸ್ಟ್ರಿಕ್ಲೆಂಡ್ ಅವರ ಉಚ್ಚಾಟನೆಯ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಸದ್ಯಕ್ಕೆ ಆಸ್ಟಿನ್ ಬಿಷಪ್ ಜೋ ವಾಸ್‌ಕ್ವೆಜ್ ಅವರು ತುಂಬಿದ್ದಾರೆ. ಆದರೆ, ಈ ಕುರಿತು ವ್ಯಾಟಿಕನ್ ಹೆಚ್ಚಿನ ಮಾಹಿತಿ ನೀಡಿಲ್ಲ.
2012ರಲ್ಲಿ ಬೆನೆಡಿಕ್ಟ್ 16 ಅವರು ಸ್ಟ್ರಿಕ್ಲೆಂಡ್‌ರನ್ನು ಟೈಲರ್ ಡಯಾಸಿಸ್‌ನ ಬಿಷಪ್ ಆಗಿ ನೇಮಕ ಮಾಡಿದ್ದರು. ಪೋಪ್ ಫ್ರಾನ್ಸಿಸ್ ಅವರು ಪರಮೋಚ್ಚ ಹುದ್ದೆ ಅಲಂಕರಿಸಿದಾಗಿನಿಂದಲೂ ಸಿøಕ್ಲೆಂಡ್ ಅವರು ಪೋಪ್‌ರನ್ನು ದೂಷಿಸುತ್ತಲೇ ಬರುತ್ತಿದ್ದರು. ಪೋಪ್ ಫ್ರಾನ್ಸಿಸ್ ಅವರ ಸುಧಾರಣಾವಾದವನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ. ಸಲಿಂಗ ವಿವಾಹ, ವಿಚ್ಛೇದಿತರ ಪರವಾಗಿ ಪೋಪ್ ನಿಂತಿದ್ದಾರೆ ಎಂದು ಆರೋಪಿಸಿದ್ದರು. ಈಗಲೂ ತಮ್ಮ ನಿಲುವಿಗೆ ಬದ್ಧರಿರುವುದಾಗಿ ಸ್ಟ್ರಿಕ್ಲೆಂಡ್ ತಿಳಿಸಿದ್ದಾರೆ.