ಹುಬ್ಬಳ್ಳಿ: ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಪ್ರತಿಷ್ಠಾಪನೆಗೆ ಅವಕಾಶವೇ ಇಲ್ಲ. ನಿಯಮ ಉಲ್ಲಂ ಸಿದರೆ ಕಠಿಣ ಕ್ರಮ ಖಚಿತ ಎಂಬ ಜಿಲ್ಲಾಡಳಿತ ಹಾಗೂ ಪಾಲಿಕೆ ಎಚ್ಚರಿಕೆಯ ನಡುವೆಯೂ ಸವಾಲು ರೂಪದಲ್ಲಿ ನಗರದಲ್ಲಿ ಅಲ್ಲಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಕಾರ್ಯ ಸಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಂಡು ಕಾಣದ ರೀತಿಯಲ್ಲಿ ವರ್ತಿಸತೊಡಗಿದ್ದಾರೆ. ಪರಿಸರ ಕಾಳಜಿ ದೃಷ್ಟಿಯಿಂದ ಪರಿಸರ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ ಕೆಲ ವರ್ಷಗಳ ಹಿಂದೆ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಪ್ರತಿಷ್ಠಾಪನೆ ನಿಷೇಧ ಎಂಬುದು ಕೇವಲ ಹೇಳಿಕೆಗೆ ಸೀಮಿತವಾಗಿತ್ತಾದರೂ, ಈ ಬಾರಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಕಟ್ಟುನಿಟ್ಟಾಗಿ ತಡೆಗೆ ಮುಂದಾಗಿದೆ.
ಈ ಕುರಿತು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಹಾಗೂ ಮೂರ್ತಿ ತಯಾರಕರ ಸಭೆ ಕರೆದು ಚರ್ಚಿಸಲಾಗಿದ್ದು, ಇಷ್ಟಾದರೂ ಕೆಲವೊಂದು ಕಡೆ ಪಿಒಪಿ ಗಣೇಶ ಮೂರ್ತಿಗಳು ತಯಾರಾಗತೊಡಗಿವೆ. ನಗರದ ಪ್ರಮುಖ ಸ್ಥಳದಲ್ಲಿಯೇ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಅದೇ ರೀತಿ ನಗರದ ಕೆಲವು ಕಡೆಗಳಲ್ಲೂ ಪಿಒಪಿ ಗಣೇಶಮೂರ್ತಿಗಳ ತಯಾರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪರಿಸರ ಕಾಳಜಿಯಿಂದ ಮಣ್ಣಿನ ಗಣೇಶಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸಬೇಕೆಂಬ ಜಿಲ್ಲಾಡಳಿತ, ಪಾಲಿಕೆ ಹಾಗೂ ಪರಿಸರ ನಿಯಂತ್ರಣ ಮಂಡಳಿ ಮನವಿಗೆ ಕೆಲವು ಕಡೆ ಮನ್ನಣೆ ದೊರೆತಿದ್ದರೂ, ಸಕಾಲಕ್ಕೆ ಅಗತ್ಯವಾದ ಮಣ್ಣು ದೊರೆಯದಿರುವುದು, ಮಣ್ಣಿನ ಮೂರ್ತಿಗಳ ತಯಾರಿಕೆಗೆ ವೆಚ್ಚ ಹೆಚ್ಚಾಗುವುದು, ಜನರು ಮಣ್ಣಿಗಿಂತ ಪಿಒಪಿ ಗಣೇಶಮೂರ್ತಿಗಳಿಗೆ ಒಲವು ತೋರುತ್ತಿರುವುದು ಮೂರ್ತಿ ತಯಾರಕರನ್ನು ಗೊಂದಲಕ್ಕೀಡು ಮಾಡಿದೆ ಎಂದು ಹೇಳಲಾಗುತ್ತಿದೆ.
ಇಲಾಖಾವಾರು ತಂಡಗಳ ರಚನೆ: ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣೇಶ ಮೂರ್ತಿಗಳ ಜಿಲ್ಲೆಯಾದ್ಯಂತ ನಿಷೇಧಿಸಿದ್ದು ಇದಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಡಳಿತ, ಪಾಲಿಕೆ ಹಾಗೂ ಗ್ರಾಮೀಣ ಭಾಗದಲ್ಲಿರುವ ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ರಚಿಸುವ ಮೂಲಕ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಮಾರಾಟ ತಡೆ ಹಿಡಿಯಲಾಗುವುದು ಎಂದು ಇತ್ತೀಚಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಮಾಹಿತಿ ನೀಡಿದ್ದರು. ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳು ತಯಾರಾಗುತ್ತಿರುವುದು ಗಮನಿಸಿದರೆ ತಂಡಗಳು ಎಲ್ಲಿವೆ ಎಂಬ ಸಂಶಯ ಮೂಡುತ್ತದೆ.
50-50 ಗಣೇಶ ತಯಾರಿಕೆ: ಕೆಲವೊಂದು ಕಡೆ ಗಣೇಶ ಮೂರ್ತಿ ನಿರ್ಮಿಸುತ್ತಿರುವ ಕಲಾಕಾರರು ಶೇ.50ರಷ್ಟು ಮಣ್ಣು ಇನ್ನುಳಿದ ಶೇ.50 ರಷ್ಟು ಪಿಒಪಿ ಬಳಕೆ ಮಾಡಿ ಗಣೇಶ ಮೂರ್ತಿ ನಿರ್ಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಮಣ್ಣಿನ ಗಣೇಶ ತಯಾರಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕ್ರಮಕ್ಕೆ ಮುಂದಾಗಲಿ ಎಂಬ ಒತ್ತಾಯ ಕೇಳಿ ಬಂದಿದೆ.
* ಬಸವರಾಜ ಹೂಗಾರ