Advertisement
ಹೀಗೆ ದೇವರನ್ನು ಬಾಡಿಗೆ ಪಡೆಯಲು ಸಾಕಷ್ಟು ಬೇಡಿಕೆಗಳೂ ಬರುತ್ತಿದ್ದು, ಈಗಾಗಲೇ ಮುಂಗಡ ಪಾವತಿಸಿ ಬುಕಿಂಗ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಆದರೆ, ಬಾಡಿಗೆ ದರ ದಿನಕ್ಕೆ ಕನಿಷ್ಠ ಐದು ಸಾವಿರ ರೂ. ಇಂತಹದ್ದೊಂದು ಟ್ರೆಂಡ್ ಈಗ ಸಿಲಿಕಾನ್ ಸಿಟಿಯಲ್ಲಿ ಶುರುವಾಗಿದೆ. ಪಿಒಪಿ ಗಣೇಶ ಮೂರ್ತಿಗಳಿಂದ ಕೆರೆಗಳು ಹಾಳಾಗುತ್ತಿದ್ದು, ಈ ಪ್ರಕಾರದ ಮೂರ್ತಿಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪಿಒಪಿ ಗಣೇಶನ ತಯಾರಕರು ರಂಗೋಲಿ ಕೆಳಗೆ ತೂರುವ ಐಡಿಯಾ ಮಾಡಿದ್ದಾರೆ.
Related Articles
Advertisement
ಈ ಮೂಲಕ ಕಡಿಮೆ ಬಜೆಟ್‌ನಲ್ಲಿ ಅದ್ದೂರಿ ಗಣೇಶ ಉತ್ಸವ ಮಾಡುವ ಸಾವಿರಾರು ಗಣೇಶ ಉತ್ಸವ ಸಮಿತಿಗಳು ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಪಡೆಯಲು ಬಯಸುತ್ತವೆ ಎಂದು ಗಣೇಶ ಮೂರ್ತಿ ಮಾರಾಟಗಾರ ಶ್ರೀನಿವಾಸ್ ಮಾಹಿತಿ ನೀಡಿದರು. ಸಾಮಾನ್ಯವಾಗಿ ಉತ್ಸವಗಳಿಗೆ ದೊಡ್ಡ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನೇ ಬಳಸುವುದು ವಾಡಿಕೆಯಾಗಿದ್ದು, ಪ್ರತಿ ಉತ್ಸವ ಗಣಪತಿ ಕನಿಷ್ಠ 10 ರಿಂದ 18 ಅಡಿ ಎತ್ತರ ಹೊಂದಿರುತ್ತದೆ.
ಇಷ್ಟು ಗಾತ್ರದ ಮೂರ್ತಿಯನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೊತ್ತೂಯ್ಯಲು ಮತ್ತು ಮಣ್ಣಿನಲ್ಲಿ ತಯಾರಿಸುವುದು ಕಷ್ಟವಾಗುತ್ತದೆ. ಮಣ್ಣಿನ ಮೂರ್ತಿಗಳು ಹೆಚ್ಚು ಆಕರ್ಷಕವಾಗಿ ತಯಾರಿಸಲು ಆಗುವುದಿಲ್ಲ. ಹಾಗಾಗಿ, ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಪಿಒಪಿ ಅಥವಾ ಫೈಬರ್‌ನಿಂದ ತಯಾರಿಸಲಾಗುತ್ತದೆ ಎನ್ನುತ್ತಾರೆ ಪಿಒಪಿ ಗಣೇಶ ತಯಾರಕರು.
ಪಿಒಪಿ ಜತೆ ಮಣ್ಣಿನ ಗಣಪ ಫ್ರೀ: ಪಿಒಪಿ ಅಥವಾ ಫೈಬರ್ ಗಣೇಶ ಮೂರ್ತಿಯನ್ನು ಬಾಡಿಗೆಗೆ ಪಡೆದರೆ, ಪೂಜೆಗಾಗಿ ಮಣ್ಣಿನ ಗಣೇಶನನ್ನು ಉಚಿತವಾಗಿ ನೀಡಲಾಗುವುದು. ಅಲಂಕಾರ, ಸಂಭ್ರಮ ಮತ್ತು ಉತ್ಸವಗಳಿಗೆ ಪಿಒಪಿ ಅಥವಾ ಫೈಬರ್ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡುವುದರ ಜತೆಗೆ ಪೂಜೆ ಮತ್ತು ನೀರಿನಲ್ಲಿ ವಿಸರ್ಜಿಸಲು ಸಾಮಾನ್ಯ ಗಾತ್ರದ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಕರು ಉಚಿತವಾಗಿ ನೀಡುತಿದ್ದಾರೆ.
ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಪಡೆಯುವುದು ಟ್ರೆಂಡ್ ಆಗಿದ್ದು, ಹಬ್ಬ ಸಮೀಪಿಸುತಿದ್ದಂತೆ ದೊಡ್ಡ ಗಣೇಶ ಮೂರ್ತಿಗಳ ಖರೀದಿಗೆ ಬರುವವರ ಪೈಕಿ ಶೇ.10 ಮಂದಿ ಬಾಡಿಗೆಗೆ ಪಡೆಯಲು ಇಚ್ಛಿಸುತ್ತಾರೆ. ಇದೇ ಮೂರ್ತಿಗಳನ್ನು ಸಿನಿಮಾ ಶೂಟಿಂಗ್, ವಸ್ತು ಪ್ರದರ್ಶನ ಮತ್ತು ಮದುವೆ ಸಮಾರಂಭಗಳಿಗೆ ನೀಡುತ್ತೇವೆ. ಈಗಾಗಲೇ 30ಕ್ಕೂ ಹೆಚ್ಚು ಮೂರ್ತಿಗಳು ಬುಕ್ ಆಗಿವೆ.-ಪಿ.ಗುರುದೇವ್, ಪಿಒಪಿ ಗಣೇಶ ಮಾರಾಟಗಾರ ಪಿಒಪಿ ಗಣೇಶನನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಪಾಲಿಕೆಗೆ ಸೂಚಿಸಿದೆ. ಗಣೇಶನನ್ನು ಬಾಡಿಗೆಗೆ ನೀಡುವ, ತಯಾರಿಸಿ ಮಾರಾಟ ಮಾಡುವ ಯಾವುದೇ ಪ್ರಸ್ತಾವನೆ ಇದ್ದರೂ ಮಂಡಳಿಗೆ ಸಲ್ಲಿಸಬೇಕು ಪಾಲಿಕೆ ಯಾವುದೇ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ.
-ಗಂಗಾಂಬಿಕೆ, ಮೇಯರ್ ಮಂಗಳವಾರದಿಂದ ಪಾಲಿಕೆ ಅಧಿಕಾರಿಗಳು ಟ್ರಕ್‌ಗಳ ಜತೆ ನಗರದೆಲ್ಲೆಡೆ ಸಂಚರಿಸಬೇಕು, ಎಲ್ಲೇ ಪಿಒಪಿ ಗಣೇಶ ಕಂಡುಬಂದರೂ ಮೂರ್ತಿಗಳನ್ನು ವಶಕ್ಕೆ ಪಡೆಯಬೇಕು. ವಶಕ್ಕೆ ಪಡೆದ ಗಣೇಶ ಮೂರ್ತಿಗಳನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದ ಹಾಗೆ ವೈಜ್ಞಾನಿಕವಾಗಿ ವಿಸರ್ಜಿಸುವ ಹೊಣೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಹಿಸಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ.
-ಡಾ.ಕೆ.ಸುಧಾಕರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ