Advertisement

ಪಿಒಪಿ ಗಣೇಶ ಪ್ರತಿಷ್ಠಾಪನೆ ಧರ್ಮಸಂಕಟ!

01:01 PM Aug 22, 2017 | Team Udayavani |

ಧಾರವಾಡ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ(ಪಿಒಪಿ) ನಿರ್ಮಿಸಿದ ಗಣೇಶಮೂರ್ತಿ ಪ್ರತಿಷ್ಠಾಪನೆ ನಿಷೇಧಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಮತ್ತೂಮ್ಮೆ ಕಠಿಣ ಕ್ರಮದ ಎಚ್ಚರಿಕೆ ನೀಡಿವೆ. 

Advertisement

ಆದರೆ ಕಳೆದ ಆರು ತಿಂಗಳ ಹಿಂದಿನಿಂದಲೂ ಜಿಲ್ಲೆಯಲ್ಲಿ ಈ ವರ್ಷ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಲ್ಲ ಎಂದು ಕಟ್ಟುನಿಟ್ಟಿನ ಆದೇಶ ಮಾಡುತ್ತಲೇ ಬಂದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ, ಸೋಮವಾರ ಸಚಿವ ವಿನಯ್‌ ಕುಲಕರ್ಣಿ ನೀಡಿರುವ ಹೇಳಿಕೆ ತೀವ್ರ ಮುಜುಗರವನ್ನುಂಟು ಮಾಡಿದೆ. 

ಸಚಿವರ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ಈ ವರ್ಷದಿಂದಲೇ ಜಿಲ್ಲೆಯಲ್ಲಿ ಪಿಒಪಿ ಗಣೇಶ ನಿಷೇಧ ಮಾಡಲಾಗಿದೆ. ಪಿಒಪಿ ಮೂರ್ತಿ ಪ್ರತಿಷ್ಠಾಪಿಸುವ ಗಣೇಶ ಮಂಡಳಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದಿದ್ದಾರೆ. ಅಷ್ಟೇಯಲ್ಲ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಜಿಲ್ಲಾಡಳಿತದ ಅನುಮತಿ ಪಡೆಯುವುದು ಕಡ್ಡಾಯ ಎಂದು ಫರ್ಮಾನು ಹೊರಡಿಸಿದ್ದಾರೆ.

ಧರ್ಮ ಸಂಕಷ್ಟ: ಇನ್ನೊಂದೆಡೆ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪನೆ ವಿಚಾರ ಇದೀಗ ಧರ್ಮಕಾರಣದ ಸ್ವರೂಪ ಪಡೆದಿದ್ದು, ರಾಜಕಾರಣಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಪ್ರಭಾವ ಬೀರಲು ಆರಂಭಿಸಿದ್ದಾರೆ. ಗಣೇಶನ ಹಬ್ಬಕ್ಕೆ ಮಾತ್ರ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಯಾಕೆ ವಿಧಿಸುತ್ತಿದೆ.

ಇತರ ಧರ್ಮೀಯರು ಮಾಡುವ ಹಬ್ಬಗಳಿಂದ ಪರಿಸರ ನಾಶವಾದಾಗ ಇಲ್ಲದೇ  ಇರುವ ಕಾಳಜಿ ಹಿಂದೂಗಳ ಹಬ್ಬಕ್ಕೆ ಮಾತ್ರ ಯಾಕೆ? ಎಂದು ಕೆಲವರು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಪಿಒಪಿ ಗಣೇಶ ಇದೀಗ ಧರ್ಮ ಸಂಕಷ್ಟಕ್ಕೂ ಸಿಲುಕಿಕೊಂಡಂತಾಗಿದೆ.

Advertisement

ಹಳ್ಳಿಗಳಲ್ಲಿ ಪಿಒಪಿ: ನಗರ ಪ್ರದೇಶಗಳು ಮಾತ್ರವಲ್ಲ, ಹಳ್ಳಿಯಲ್ಲಿರುವ ಗಜಾನನ ಸೇವಾ ಸಮಿತಿಗಳಿಂದ ಪಿಒಪಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿವೆ. ಹುಬ್ಬಳ್ಳಿ- ಧಾರವಾಡ ಅವಳಿನಗರಕ್ಕಿಂತ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ಇದೀಗ ಹಳ್ಳಿಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿವೆ.

2014ರಲ್ಲಿ ಅಂದಾಜು 347ರಷ್ಟು ಗಣೇಶ ಮೂರ್ತಿಗಳು ಗ್ರಾಮಾಂತರ ಪ್ರದೇಶದಲ್ಲಿ  ಸ್ಥಾಪನೆಯಾಗಿದ್ದರೆ, 2016ಕ್ಕೆ ಈ ಸಂಖ್ಯೆ ಅಂದಾಜು 418ಕ್ಕೆ ಏರಿದೆ. ಈ ಗಣೇಶ ಮೂರ್ತಿಗಳ ವಿಸರ್ಜನೆ ದೊಡ್ಡ ಸವಾಲಾಗಿದ್ದು, ಸ್ಥಳೀಯ ಯುವಕರು ಮದ್ಯಪಾನ, ಡಿಜೆಗೆ ಹೆಚ್ಚು ಒತ್ತು ಕೊಟ್ಟು ಅವುಗಳನ್ನು ಹಳ್ಳಿಯ ಜಲಮೂಲಗಳಾದ ಕೆರೆ, ಕುಂಟೆ, ಬಾವಿಗಳಲ್ಲಿ ವಿಸರ್ಜನೆ ಮಾಡುತ್ತಿದ್ದು, ಇದು ದನಕರು, ಜಲಚರ, ಪ್ರಾಣಿ-ಪಕ್ಷಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. 

ಮನೆ ಗಣೇಶ ಓಕೆ: ಇನ್ನೊಂದು ಮೂಲಗಳ ಪ್ರಕಾರ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಪಿಒಪಿ ಗಣೇಶನ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಮನೆ ಗಣಪತಿಗಳ ಬಗ್ಗೆ ಈ ವರ್ಷ ಕೊಂಚ ಸಡಿಲಿಕೆ ನೀಡಿದಂತೆ ತೋರುತ್ತಿದೆ. ಜಿಲ್ಲೆಗೆ ಅಂದಾಜು 1.5 ಲಕ್ಷ ಗಣೇಶಮೂರ್ತಿಗಳು ಬೇಕು. 

ಇಷ್ಟೊಂದು ಗಣೇಶ ಮೂರ್ತಿಗಳನ್ನು ತಯಾರಕರು ಈ ವರ್ಷ ಮಾಡಿಯೇ ಇಲ್ಲ. ಹೀಗಾಗಿ ಗಣೇಶನ ಕೊರತೆ ಉಂಟಾದರೆ ಧಾರ್ಮಿಕ ಪ್ರಶ್ನೆಗಳನ್ನು ಎದುರಿಸುವುದು ಮತ್ತು ಮಣ್ಣಿನ ಗಣೇಶನಿಗೆ ಅತಿಯಾದ ದರ ಹೆಚ್ಚಳ ಸಾಧ್ಯತೆಯೂ ಇದೆ. ಹೀಗಾಗಿ ಮೊದಲು ಸಾರ್ವಜನಿಕ ಪಿಒಪಿ ಗಣೇಶ ನಿಷೇಧಕ್ಕೆ ಜಿಲ್ಲಾಡಳಿತ ಒತ್ತು ನೀಡುತ್ತಿದೆ. 

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next