ಬೀದರ್ : ಪಿಓಪಿ ಗಣೇಶ ಮೂರ್ತಿ ಮಾರಾಟ ತಡೆದು ವಶಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ। ಎಚ್.ಆರ್ ಮಹಾದೇವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ ಗಣೇಶಮೂರ್ತಿ ವಶಪಡಿಸಿಕೊಳ್ಳುವ ಕಾರ್ಯ ಭಾನುವಾರ ಶುರು ಮಾಡಿದ್ದು,ನಂತರ ಜನರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಕೈ ಬಿಡಲಾಗಿದೆ.
ನಗರದ ಮುಖ್ಯ ರಸ್ತೆಬದಿಯಲ್ಲಿ ಪಿಓಪಿ ಗಣೇಶ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರ ಗಣೇಶ ಮೂರ್ತಿಗಳು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ನಗರದ ಮೀನಾ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿರುವ ಗಣೇಶ ಮೂರ್ತಿಗಳು ಪಡಿಸಿಕೊಳ್ಳಲು ಮುಂದಾದ ಅಧಿಕಾರಿಗಳನ್ನು ವ್ಯಾಪಾರಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂದುಗಳ ಹಬ್ಬಕ್ಕೆ ಅಧಿಕಾರಿಗಳು ಕಾನೂನು ಹೇಳುತ್ತೀರಾ ಎಂದು ಅವಾಜ್ ಹಾಕಿದ್ದಾರೆ. ಕೆಲ ವ್ಯಾಪಾರಸ್ಥರು ಈ ಸಂದರ್ಭದಲ್ಲಿ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದರು. ನಂತರ ಅಧಿಕಾರಿಗಳು ಅಲ್ಲಿಂದ ಜಾಗ ಖಾಲಿ ಮಾಡಿದರು.
ಜನರ ಆಕ್ರೋಶ: ಜಿಲ್ಲಾಡಳಿತ ಗಣೇಶ ಮೂರ್ತಿಗಳು ತಯಾರಿಸುವ ಮುನ್ನವೇ ನೋಟಿಸ್ ನೀಡಿ ತಯಾರಿಕೆ ತಡೆಯಬೇಕಿತ್ತು. ಆದರೆ ಇದೀಗ ಹಬ್ಬದ ದಿನದಂದು ಖರೀದಿಸಿದ ಮೂರ್ತಿಗಳು ವಶಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಮಣ್ಣಿನ ಗಣೇಶ ಮೂರ್ತಿಗಳ ಬೆಲೆ ಹೆಚ್ಚಿದ್ದು ಜನ ಸಾಮಾನ್ಯರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಡವರು ಬಂಡವಾಳ ಹಾಕಿ ಗಣೇಶ ಮೂರ್ತಿಗಳು ಖರೀದಿಸಿ ಮಾರಾಟ ಮಾಡುತ್ತಿದ್ದು, ವ್ಯಾಪಾರಸ್ಥರಿಂದ ಗಣೇಶಮೂರ್ತಿ ಪಡಿಸಿಕೊಂಡು ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಸಣ್ಣ ವ್ಯಾಪರಸ್ಥರು ಅಧಿಕಾರುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವರ್ಷ ರಿಲೀಫ್: ಈ ಕುರಿತು ಪ್ರತಿಕ್ರಿಯೆ ನೀಡಿದ ನಗರಸಭೆ ಆಯುಕ್ತ ಬಿ.ಬಸಪ್ಪ, ಗಣೇಶ ಮೂರ್ತಿ ವ್ಯಾಪಾರಸ್ಥರು ಈ ವರ್ಷ ಬಿಡುವು ನೀಡುವಂತೆ ಮನವಿಮಾಡಿಕೊಂಡಿದ್ದಾರೆ. ಈ ಹಿನ್ನಲೆ ವಶ ಪಡಿಸಿಕೊಂಡ ಗಣೇಶ ಮೂರ್ತಿಗಳು ವ್ಯಾಪರಸ್ಥರಿಗೆ ಮರಳಿ ನೀಡಿದ್ದು, ಮುಂದಿನ ವರ್ಷದಿಂದ ವ್ಯಾಪರಸ್ಥರು ಪಿಓಪಿ ಗಣೇಶ ಮೂರ್ತಿಗಳ ಮಾರಾಟ ಮಾಡೊದಿಲ್ಲ ಎಂದು ತಿಳಿಸಿದ್ದಾರೆ.