ಹುಬ್ಬಳ್ಳಿ: ಅವಳಿ ನಗರದಲ್ಲಿ ಪ್ರಸಕ್ತ ವರ್ಷ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ನಿರ್ಮಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೊ, ಬೇಡವೋ ಎಂಬ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಗೆ ಬಿಡಲಾಗಿದೆ. ಇದರಿಂದಾಗಿ ಅವಳಿ ನಗರದ ಗಣೇಶೋತ್ಸವ ಮಂಡಳಿ ಹಾಗೂ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಪರಿಹರಿಸುವ ಕೆಲಸ ಜಿಲ್ಲಾಧಿಕಾರಿಗಳ ಅಂಗಳಕ್ಕೆ ಬಿದ್ದಂತಾಗಿದೆ.
ಪಿಒಪಿಯಿಂದ ನಿರ್ಮಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕುರಿತು ಗುರುವಾರ ಮಹಾಪೌರರ ಕಚೇರಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸದಸ್ಯರು ಮಾತನಾಡಿ, ಸುಪ್ರೀಂ ಕೋಟ್ ìನ ನಿರ್ದೇಶನದಂತೆ ಜಿಲ್ಲಾಡಳಿತ ಹಾಗೂ ಪಾಲಿಕೆಯು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪ್ರಸಕ್ತ ವರ್ಷದಿಂದ ಅವಳಿ ನಗರದಲ್ಲಿ ಪಿಒಪಿ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದ್ದು ಒಳ್ಳೆಯ ಕ್ರಮ.
ಆದರೆ ಕೆಲವು ಗಣೇಶ ಮಂಡಳಿಯವರು ಹಾಗೂ ಸಾರ್ವಜನಿಕರು ಈಗಾಗಲೇ ಪಿಒಪಿಯ ಗಣೇಶ ಮೂರ್ತಿಗಳಿಗೆ ಆರ್ಡರ್ ನೀಡಿದ್ದಾರೆ ಹಾಗೂ ಬಹಳಷ್ಟು ಮೂರ್ತಿಗಳು ಈಗಾಗಲೇ ಸಿದ್ಧಗೊಂಡಿವೆ. ಇದೊಂದು ಬಾರಿ ನಮಗೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಅದಕ್ಕಾಗಿ ಈ ವರ್ಷ ಪಾಲಿಕೆ ಆಡಳಿತವು ಪಿಒಪಿಯಿಂದ ನಿರ್ಮಿತ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಸುಪ್ರೀಂ ಕೋರ್ಟ್‌ನ ಆದೇಶದಂತೆ ಪಿಒಪಿ ಮೂರ್ತಿ ನಿಷೇಧಿಸಲಾಗಿದೆ. ಅದರ ಆದೇಶ ಪಾಲಿಸಲಾಗುತ್ತಿದೆ. ಹಿಂಪಡೆಯುವ ಅಧಿಕಾರವಿಲ್ಲ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪಿಒಪಿ ನಿಷೇಧಿಸಿದ್ದು ಒಳ್ಳೆಯದು. ಅದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ.
ಧಾರ್ಮಿಕ ದೃಷ್ಟಿಯಿಂದಲೂ ಪಿಒಪಿ ಮೂರ್ತಿ ಪ್ರತಿಷ್ಠಾಪನೆ ಬಗ್ಗೆಯೂ ಜಾಗೃತಿ ಮೂಡಬೇಕು. ಸುಪ್ರೀಂ ಕೋಟ್ ìನ ಆದೇಶ ಪಾಲಿಸದವರ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಹಾಗೂ ಸಾರ್ವಜನಿಕರ ಪರವಾಗಿ ಸದಸ್ಯರು ನೀಡಿದ ಸಲಹೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಮಹಾಪೌರ ಡಿ.ಕೆ. ಚವ್ಹಾಣ ಮಾತನಾಡಿ, ಮುಂದಿನ ವರ್ಷ ಪಿಒಪಿ ನಿಷೇಧ ಸಂಪೂರ್ಣ ಜಾರಿಗೊಳಿಸುವಾಗ ಗಣೇಶೋತ್ಸವದ 10 ತಿಂಗಳ ಮುಂಚಿತವೇ ಸಾರ್ವಜನಿಕರಿಗೆ, ಗಣೇಶ ಮಂಡಳಿಗಳಿಗೆ ಮಣ್ಣಿನ ಗಣಪ ನಿರ್ಮಾಣ, ಪ್ರತಿಷ್ಠಾಪನೆ ಕುರಿತು ತಿಳಿವಳಿಕೆ ನೀಡಬೇಕು ಎಂದರು.
ಆಯುಕ್ತರು ಮಾತನಾಡಿ, ಮಣ್ಣಿನ ಗಣಪ ನಿರ್ಮಿಸುವ ಕುರಿತು ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳವರಿಗೆ ಇದೇ 23 ಮತ್ತು 24ರಂದು ಕಾರ್ಯಾಗಾರವನ್ನು ಲ್ಯಾಮಿಂಗ್ಟನ್ ಶಾಲೆ ಇಲ್ಲವೆ ನೆಹರು ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಅಲ್ತಾಫ ಕಿತ್ತೂರ, ಮಲ್ಲಿಕಾರ್ಜುನ ಹೊರಕೇರಿ, ಸುಧೀರ ಸರಾಫ, ಮಹೇಶ ಬುರ್ಲಿ, ಗಣೇಶ ಟಗರಗುಂಟಿ, ವೆಂಕಟೇಶ ಮೇಸ್ತ್ರಿ, ಶಿವು ಮೆಣಸಿನಕಾಯಿ ಇದ್ದರು.