Advertisement

ಪೂರ್ವಿಯ ಅಪೂರ್ವ ರಂಗ ಪ್ರವೇಶ

06:07 PM Nov 14, 2019 | mahesh |

ವಕೀಲ ವೃತ್ತಿಗೆ ಕಾಲಿಡುತ್ತಿರುವ ವಿ ದ್ಯಾರ್ಥಿನಿ. ಎಳೆಯ ವಯಸ್ಸಿನಿಂದಲೇ ಭರತನೃತ್ಯ ಮುಂತಾ ದ ಲಲಿತಕಲೆಗಳಲ್ಲಿ ಅಪಾರ ಆಸಕ್ತರು. ಹತ್ತು ವರ್ಷಗಳಿಂದ ಭರತ ನೃತ್ಯದಲ್ಲಿ ಮಾಡಿದ ಶ್ರದ್ಧೆಯ ಸಾಧನೆ ಫ‌ಲಶ್ರುತಿಯೇ ರಂಗ ಪ್ರವೇಶದ ಸಂಭ್ರಮ. ಬೆಳ್ತಂಗಡಿ ತಾಲೂಕಿನ ವೇಣೂರಿನ ಶಿಲಾ ಬಾಲಿಕೆ ಪೂರ್ವಿ ಹೆಗ್ಡೆಯವರ ಕಲಾ ಪ್ರದರ್ಶನ ನ.10ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ರಂಗಮಂಟಪದಲ್ಲಿ ಕಣ್ಮನಗಳಿಗೆ ಮಧುರ ಅನುಭವ ನೀಡಿತು.

Advertisement

ವಿ| ಡಾ| ಲಲಿತಾ ಶ್ರೀನಿವಾಸನ್‌ ಅವರ ಬಳಿ ಮೈಸೂರು ಶೈಲಿಯ ಭರತ ನೃತ್ಯ ಕಲೆಯನ್ನು ಕರಗತ ಮಾಡಿಕೊಂಡ ಪೂರ್ವಿ ಹೆಗ್ಡೆಯವರ ರಂಗ ಪ್ರವೇಶದ ಮೊದಲ ಕಾರ್ಯಕ್ರಮದಲ್ಲಿಯೇ ವೇಗದ ಗತಿ, ಭಾವ ಪ್ರದರ್ಶನ, ದಣಿವರಿಯದ ಹೆಜ್ಜೆಗಳ ಮೂಲಕ ಓರ್ವ ಪ್ರಬುದ್ಧ ಕಲಾವಿದೆ ರಂಗಕ್ಕಡಿಯಿಡುತ್ತಿರುವ ಎಲ್ಲ ಲಕ್ಷಣಗಳೂ ಗೋಚರಿಸಿದವು. ಗಣೇಶ ಮತ್ತು ಶಿವಸ್ತುತಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ. ನಾಟಿ ರಾಗ, ಆದಿ ತಾಳದಲ್ಲಿ ವಿಘ್ನೇಶ್ವರನಿಗೆ ಪುಷ್ಪಾಂಜಲಿ ಅರ್ಪಿಸುವ ಶ್ಲೋಕಕ್ಕೆ ಭಕ್ತಿ ಭಾವವನ್ನು ಶ್ರುತಪಡಿಸಿದ ರೀತಿ, ನಿಧಾನ ಗತಿಯ ಹೆಜ್ಜೆಗಳಿಗೆ ಮನ ಮುಟ್ಟುವ ಅಭಿವ್ಯಕ್ತಿಯ ಮೂಲಕ ಮನ ಗೆದ್ದಿತು.

ಜಯದೇವ ಕವಿಯ ಅಷ್ಟಪದಿಯನ್ನು ಜತಿಸ್ವರದ ಹೆಜ್ಜೆಗಳಿಗೆ ಆಯ್ದುಕೊಂಡ ಕಲಾವಿದೆ ವಸಂತ ರಾಗ, ಆದಿತಾಳದ ಗೀತೆಗೆ ಶೃಂಗಾರ ಭಾವವನ್ನು ಮೋಹಕವಾಗಿ ಕಣ್ಣುಗಳಲ್ಲಿ ಹೊರಚೆಲ್ಲುವ ಪರಿ ಅಮೋಘವಾಗಿತ್ತು. ವಿರಹ, ಸಾಮೀಪ್ಯಗಳ ರೋಮಾಂಚಕ ಸನ್ನಿವೇಶ, ರಾಧಾ – ಕೃಷ್ಣರ ಪ್ರಣಯದ ಭಾವಸ್ಪರ್ಶ ಮನ ಮುಟ್ಟಿತು, ಹೃದಯ ತಟ್ಟಿತು. ಬಳಿಕ ಸಾರಂಗ ಮತ್ತು ಯಮನ್‌ ಕಲ್ಯಾಣಿ ರಾಗಗಳಲ್ಲಿ ಪ್ರಸ್ತುತಪಡಿಸಿದ ಶ್ಲೋಕಗಳಿಗೆ ನರ್ತಿಸಿದ ಪರಿ ಕಲಾವಿದೆಯ ಪರಿಪುಷ್ಟ ಸಾಧನೆಯ ಸೊಬಗನ್ನು ಕಣ್ಮುಂದೆ ತಂದವು.

ಸಾವೇರಿ ರಾಗ ಆದಿತಾಳದ ವರ್ಣ, ಶುದ್ಧ ಧನ್ಯಾಸಿ ರಾಗ, ಆದಿ ತಾಳದ ಕೃತಿಗಳಲ್ಲಿ ದಣಿವರಿಯದ ಧ್ರುತಗತಿಯ ಹೆಜ್ಜೆಗಳ ಮೂಲಕ ಕಲೆಯ ರಸಪಾಕವನ್ನು ಹಂಚುತ್ತ ಹೋದ ಪೂರ್ವಿ ಅಟಾನಾ ರಾಗ, ಮಿಶ್ರಛಾಪು ತಾಳದ ದೇವರನಾಮದಲ್ಲಿ ಭಕ್ತಿ ರಸಭಾವದ ಪ್ರದರ್ಶನದಲ್ಲಿ ತನ್ಮಯಗೊಳಿಸಿದರು. ಬೇಹಾಗ್‌ ರಾಗ, ಆದಿ ತಾಳದಲ್ಲಿ ಜಾವಳಿ, ಕದನ ಕುತೂಹಲ ರಾಗ ಆದಿ ತಾಳದಲ್ಲಿ ತಿಲ್ಲಾನ, ಮಧ್ಯಮಾವತಿ ರಾಗದ ಭರತವಾಕ್ಯದ ಮೂಲಕ ಕೊನೆಗೊಂಡ ಕಾರ್ಯಕ್ರಮದಲ್ಲಿ ಪರಿಣತ ಕಲಾವಿದೆಯ ಗುಣ ಲಕ್ಷಣಗಳಿಂದ ಪ್ರದರ್ಶನದಲ್ಲಿ ಮಿಂಚಿದ ಪೂರ್ವಿ ಭವಿಷ್ಯದ ದಿನಗಳಲ್ಲಿ ಸಮರ್ಥ ಗುರುವಿನ ಪ್ರಬುದ್ಧ ಶಿಷ್ಯೆಯಾಗುವ ಎಲ್ಲ ಸೂಚನೆಗಳಿಂದ ಪರಿಪೂರ್ಣ ರಸ ರಂಜನೆಯನ್ನು ನೀಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ವಿ. ಕಾರ್ತಿಕ್‌ ಹೆಬ್ಟಾರ್‌(ಕೊಳಲು), ವಿ. ನಾರಾಯಣ ಸ್ವಾಮಿ(ವಯೊಲಿನ್‌), ವಿ. ದಯಾಕರ್‌(ವೀಣೆ) ಅವರೊಂದಿಗೆ ವಿ. ಕಾರ್ತಿಕ್‌ ಸಾತವಳ್ಳಿ(ಅಲಂಕಾರ), ಅರ್ಮುಗಮ್‌(ವಸ್ತ್ರ ವಿನ್ಯಾಸ) ಹಾಗೂ ಡಾ| ರೇಖಾ ರಾಜೀವ್‌ ಅವರ ಬೆಳಕಿನ ವ್ಯವಸ್ಥೆ ಪ್ರದರ್ಶನವನ್ನು ಸಂಪನ್ನಗೊಳಿಸುವಲ್ಲಿ ಪೂರಕವಾಗಿ ಸಹಕರಿಸಿತು.

Advertisement

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next