Advertisement

ತೇಜಸ್ವಿಯೆಂಬ ಸ್ಫೂರ್ತಿಯ ಕಣಜ

10:46 AM Jul 10, 2020 | mahesh |

ಬಾಳಿನ ಬಂಡಿಯನ್ನೇರಿ ಸಾಗುವ ಒಬ್ಬ ಮನುಷ್ಯನ ಬದುಕಿನಲ್ಲಿ ಸಾವಿರಾರು ಜನರು ಕಾಣಸಿಗುತ್ತಾರೆ. ಆ ಸಾವಿರಾರೆಂಬ ಸಂಖ್ಯೆಯೊಳಗೆ ಒಂದಷ್ಟು ಜನರು ಸ್ಫೂರ್ತಿ ಯಾಗಿರುತ್ತಾರೆ. ಕೆಲವರು ಪ್ರತ್ಯಕ್ಷವಾಗಿ ಸಿಕ್ಕರೆ ಮತ್ತೂಂದಿಷ್ಟು ಜನರು ಪರೋಕ್ಷವಾಗಿ ಸಿಗುತ್ತಾರೆ.

Advertisement

ನನ್ನ ಬದುಕಿನಲ್ಲಿ ನನಗೆ ಸ್ಫೂರ್ತಿಯಾದ ಓರ್ವ ಶ್ರೇಷ್ಠ ವ್ಯಕ್ತಿಯೆಂದರೆ ಅದು ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ. ಅವರು ನನಗೆ ಪರಿಚಯವಾದದ್ದು “ಪರಿಸರದ ಕಥೆಗಳು’ ಎಂಬ ಪುಸ್ತಕದ ಮೂಲಕ. ಸುಮ್ಮನೆ ಕುಳಿತುಕೊಳ್ಳುವ ಬದಲು ಏನಾದರು ಓದೋಣ ಎಂದು ಕೊಂಡಾಗ ಕೈಗೆ ಸಿಕ್ಕ ಅದ್ಭುತ ಪುಸ್ತಕವದು. ಆ ಪುಸ್ತಕ ಐದು ಭಾಷೆಗಳಿಗೆ ಅನುವಾದಗೊಂಡಿದೆ ಎಂದು ತಿಳಿದ ಅನಂತರ ಅತ್ಯಾಶ್ಚರ್ಯವಾಯಿತು. ಅಂದಿನಿಂದ ನಾನು ಕೇವಲ ತೇಜಸ್ವಿಯವರ ಕೃತಿಗಳನ್ನಷ್ಟೇ ಓದುತ್ತಿದ್ದೆ, ಧ್ಯಾನಿಸುತ್ತಿದ್ದೆ.

ಅವರ ಪ್ರತಿ ಪದಗಳನ್ನೂ ಅನುಭವಿಸುತ್ತಿದ್ದೆ. ಓದು-ಬರಹ ಎರಡರಲ್ಲೂ ಅಷ್ಟೊಂದು ಸೆಳೆತವಿಲ್ಲದ ನಾನು ತೇಜಸ್ವಿಯವರ ಬರಹಗಳನ್ನು ಓದಿದ ಬಳಿಕ ಅಕ್ಷರಶಃ ಹುಚ್ಚನಾಗಿ ಹೋದೆ. ಸಮಯ ಸಿಕ್ಕಾಗೆಲ್ಲ ಓದುತ್ತಿದ್ದೆ. ಓದುವಾಗ ಗ್ರಂಥಾಲಯ, ಕ್ಯಾಂಟೀನ್‌, ಬಸ್‌, ಮೈದಾನ ಎಂಬ ಭೇದವಿರಲಿಲ್ಲ. ತೇಜಸ್ವಿ ಬರೆದ ಪ್ರತಿ ಪುಸ್ತಕವೂ ಕೂಡ ಒಂದು ದೈತ್ಯ ಜ್ಞಾನ ಸಾಗರ. ಅಲ್ಲಿ ನಮ್ಮ ನಡುವಿನ ಸತ್ಯವಷ್ಟೇ ಪ್ರತಿಬಿಂಬಿಸುತ್ತಿರುತ್ತದೆ. ಅಷ್ಟೊಂದು ಸೊಗಸಾಗಿದೆ ಅವರ ಬರಹ ಶೈಲಿ. ಗ್ರಾಮೀಣ ಸೊಗಡನ್ನು ಪದ ಶ್ರೀಮಂತಿಕೆಯಿಂದ ಸಿಂಗಾರಗೊಳಿಸುವ ಮಾಂತ್ರಿಕ ಅವರು. ಕೇವಲ ಬರಹಗಾರನಾಗಿಯಲ್ಲ ಸ್ವತಃ ತನ್ನ ದಾರಿಯಲ್ಲೇ ನಡೆದು, ಕುವೆಂಪು ಅವರಂತಹ ಧೀಮಂತನ ಪುತ್ರನಾಗಿಯೂ ತೀರ ಸಾಮಾನ್ಯನಾಗಿ ಬದುಕಿದ, ಆಡಂಬರದ ಜೀವನವನ್ನ ತ್ಯಜಿಸಿದ, ಹೋರಾಟಗಳಲ್ಲಿ ಭಾಗವಹಿಸಿ, ಯಾವುದೇ ಬಿರುದುಗಳಿಗೆ ತಲೆಬಾಗದೆ ಬದುಕಿದ ತೇಜಸ್ವಿ ಅವರ ಬದುಕು ಮತ್ತು ಬರಹದ ಸ್ಫೂರ್ತಿಯಿಂದಾಗಿ ಇದೀಗ “ನೆನಪಿನ ಬುತ್ತಿ’ ಎಂಬ ನಾನೇ ಬರೆದ ಪುಸ್ತಕವೊಂದನ್ನು ಹೊರತರುವ ಹಿನ್ನೆಲೆಯಲ್ಲಿ ಬರಹದ ಕೆಲಸ ಮುಗಿಸಿದ್ದೇನೆ ಎಂಬುದು ನನ್ನೊಳಗಿನ ಹೆಮ್ಮೆ. ಇವೆಲ್ಲ ನಡೆದದ್ದು ತೇಜಸ್ವಿಯವರ ಸ್ಫೂರ್ತಿಯಿಂದ. ಬದುಕಿದರೆ ತೇಜಸ್ವಿಯವರಂತೆ ಬದುಕಬೇಕು, ಬರೆದರೆ ತೇಜಸ್ವಿಯವರಂತೆ ಬರೆಯಬೇಕು, ಓದಿದರೆ ತೇಜಸ್ವಿಯವರನ್ನೇ ಓದಬೇಕು…


ನಯನ್‌ ಕುಮಾರ್‌, ವಿ.ವಿ. ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next