ಮಾಗಡಿ: ಬಾಚೇನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಬಹುತೇಕ ಕಾಮಗಾರಿಗಳು ತೀರಾ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಾಗಡಿ ತಾಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಚಹುಣಸೇಪಾಳ್ಯ ದಾಸಯ್ಯನಪಾಳ್ಯದ ಗ್ರಾಮದಲ್ಲಿ ಚಿಕ್ಕಬಾರಯ್ಯನಕಟ್ಟೆ ಕಾಮಗಾರಿಯನ್ನು ನರೇಗಾ ಯೋಜನೆಯಡಿ ನಡೆಸಲಾಗಿದ್ದು, ಇದು ಕಳಪೆ ಗುಣಮಟ್ಟದಿಂದ ಕೂಡಿದೆ. ಮಳೆ ಬಿದ್ದ ಕೂಡಲೇ ಕಟ್ಟೆ ಒಡೆದು ಹೋಗಿದೆ. ಅಂದಾಜು 5 ಲಕ್ಷ ರೂ. ಕ್ರಿಯಾ ಯೋಜನೆ ಮೂಲಕ ಕಟ್ಟೆಯ ಕಾಮಗಾರಿ ನಡೆಸಲಾಗಿದೆ.
ಈಗಾಗಲೇ 3.49 ಲಕ್ಷ ರೂ ಹಣ ಪಾವತಿಯಾಗಿದೆ. ಇದರಿಂದ ಸರ್ಕಾರದ ಹಣ ನಷ್ಟವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 2021ರ ಜು.20ರಂದು ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಎನ್‌ಎಂಆರ್ ತೆರೆಯಲಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರ ಪತಿ ಬೇರೆಯವರ ಹೆಸರಿನಲ್ಲಿ ಜಾಬ್ ಕಾರ್ಡ್ ಮೂಲಕ ಸುಮಾರು 180 ಮಂದಿ ಮಾನವ ದಿನಗಳನ್ನು ಬಳಸಿಕೊಂಡಿದ್ದಾರೆ. ಕಟ್ಟೆಗೆ ಬಳಸಿರುವ ಸಾಮಾಗ್ರಿಗಳೆಲ್ಲವೂ ಕಳಪೆ ಗುಣಮಟ್ಟದಿಂದ ಕೂಡಿದೆ.
ಕಾಡುಕಲ್ಲು ಬಳಸಿ ನಿರ್ಮಿಸಿದ ಕಟ್ಟೆ ಮಳೆಗೆ ಒಡೆದು ಹೋಗಿ ಸರ್ಕಾರದ ಹಣ ದುರು ಪಯೋಗವಾಗಿದೆ. ಕಾಮಗಾರಿ ನಡೆಸಿ ರುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಮೂಲಕ ದುರುಪಯೋಗವಾಗಿರುವ ಹಣವನ್ನು ಸರ್ಕಾರ ವಾಪಸ್ ಪಡೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಈ ಕುರಿತು ಜಿಲ್ಲಾ ಪಂಚಾಯ್ತಿ ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಟ್ಟೆ ಅಭಿವೃದ್ಧಿ ಮಾಡುವ ವೇಳೆ ಪಿಚ್ಚಿಂಗ್ ಮಾಡಿದ್ದರು. ಆ ವೇಳೆ ಹೆಚ್ಚು ಮಳೆಯಾಗಿದ್ದರಿಂದ ಕಟ್ಟೆ ಒಡೆದುಹೋಗಿದೆ. ಇನ್ನೆರಡು ದಿನಗಳಲ್ಲಿ ಕಟ್ಟೆಯ ಗೋಡೆ ಪಿಚ್ಚಿಂಗ್ ಮಾಡಿಸಿ ಸರಿಪಡಿಸಲಾಗುವುದು.
– ನಿರಂಜನ್‌ಕುಮಾರ್, ಎಂಜಿನಿಯರ್