Advertisement

ಕಳಪೆ ಕಾಮಗಾರಿ: ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ

06:12 PM Jul 20, 2021 | Team Udayavani |

ಗಜೇಂದ್ರಗಡ: ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿರುವುದು ಕಂಡು ಬಂದರೆ, ಅಂತಹ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಮುಂದೆ ಅಂಥವರಿಗೆ ಯಾವುದೇ ಕಾಮಗಾರಿ ನೀಡಬಾರದು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ಅಧಿ ಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯಿಂದ ವಿವಿಧ ಬಡಾವಣೆಗಳಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳು ಕಳಪೆಯಾಗಿವೆ ಎನ್ನುವ ಬಗ್ಗೆ ಕೆಲ ಸದಸ್ಯರು ಮತ್ತು ಸಾರ್ವಜನಿಕರಿಂದ ಆರೋಪ ಕೇಳಿ ಬರುತ್ತಿವೆ. ಅಧಿ ಕಾರಿಗಳು ಆ ಬಗ್ಗೆ ಗಮನ ಹರಿಸಿ, ಮುಲಾಜಿಲ್ಲದೇ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ತಾಕೀತು ಮಾಡಿದರು.

ಪಟ್ಟಣದಲ್ಲಿ ಹೊಸ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕಾದರೆ ಅದಕ್ಕೆ ಬೇಕಾದ ನೀರು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ಗಮನ ಹರಿಸಬೇಕು. ನಂತರ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು. ಕೇವಲ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ನೀಡುವುದರ ಜೊತೆಗೆ ಪರಿಸರ ರಕ್ಷಣೆಯಲ್ಲೂ ಸದಸ್ಯರ ಪಾತ್ರವಿದೆ. ಹೀಗಾಗಿ, ಪ್ರತಿ ವಾರ್ಡಿನ ಸದಸ್ಯರು ತಮ್ಮ, ತಮ್ಮ ವಾರ್ಡ್‌ಗಳಲ್ಲಿ ಕನಿಷ್ಠ 50 ಸಸಿ ನೆಡುವ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಸೂಚನೆ ನೀಡಿದರು. ಇದಕ್ಕೆ ಕೆಲ ಸದಸ್ಯರು ಪ್ರತಿಕ್ರಿಯಿಸಿ, ಈಗಾಗಲೇ ವಾರ್ಡಿನಲ್ಲಿ ಸಸಿ ನೆಡಲಾಗಿದೆ. ಇದಕ್ಕೆ ಪುರಸಭೆಯಿಂದ ಟ್ಯಾಂಕರ್‌ ಮೂಲಕ ನೀರುಣಿಸಲು ಕ್ರಮ ಕೈಗೊಳ್ಳಬೇಕಿದೆ ಎಂದರು.

ಪ್ರತಿ ಸಲ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವುದಾದರೆ ಅಂಥಹ ಕೆಲಸಗಳು ಏನಿರುತ್ತವೆ. ಪದೇ, ಪದೆ ಲಕ್ಷಾಂತರ ರೂ. ಅನುದಾನ ಬಳಕೆಯಾಗುವುದರ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಶಾಸಕ ಕಳಕಪ್ಪ ಬಂಡಿ ಪ್ರಶ್ನಿಸಿದರು. ಪುರಸಭೆ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲೀಲಾವತಿ ವನ್ನಾಲ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಸದಸ್ಯರಾದ ಯು.ಆರ್‌. ಚನ್ನಮ್ಮನವರ, ರಾಜು ಸಾಂಗ್ಲಿಕಾರ, ಸುಭಾಸ ಮ್ಯಾಗೇರಿ, ಶಿವರಾಜ ಘೋರ್ಪಡೆ, ಕನಕಪ್ಪ ಅರಳಿಗಿಡದ, ಮುರ್ತುಜಾ ಡಾಲಾಯತ್‌, ಶರಣಪ್ಪ ಉಪ್ಪಿನಬೆಟಗೇರಿ, ಜಿ.ಎನ್‌.ಕಾಳೆ, ರಾಘವೇಂದ್ರ ಮಂತಾ, ಶಿವಕುಮಾರ ಇಲ್ಲಾಳ, ಇಮಾಮ ಕಾಲಾನಾಯ್ಕರ, ಎಂ.ಡಿ. ದೊಡ್ಡಮನಿ ಸೇರಿದಂತೆ ಅಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next