ಬಾದಾಮಿ: ಕೇಂದ್ರ ಸರಕಾರದ ಹೃದಯ ಯೋಜನೆಯಡಿ ಇಲ್ಲಿನ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿರುವ ಹೈಟೆಕ್ ಶೌಚಾಲಯ ಕಾಮಗಾರಿ ಕಳಪೆಯಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
28ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಹೈಟೆಕ್ ಶೌಚಾಲಯಕ್ಕೆ ಕಳಪೆಮಟ್ಟದ ಇಟ್ಟಿಗೆ, ಕಳಪೆ ಮರಳು, ನಿರ್ಮಾಣ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ. ತಳಪಾಯ ಹಾಕಲಾದ ಭೀಮಗಳು ಭದ್ರವಾಗಿಲ್ಲ. ತೀವ್ರ ಕಡಿಮೆ ದರ್ಜೆಯ ಕಿಟಕಿ, ಬಾಗಿಲು ಜೋಡಿಸಲಾಗಿದೆ. ಕಳಪೆಮಟ್ಟದ ವಸ್ತುಗಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ನಿರ್ಮಾಣ ಹಂತದಲ್ಲಿಯೇ ಶಿಥಿಲಾವಸ್ಥೆಯಲ್ಲಿವೆ. ಮುಖ್ಯ ರಸ್ತೆಯಲ್ಲಿಯೇ ಕಳಪೆಯಾಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಾದಾಮಿ ನಗರಕ್ಕೆ ಆಗಮಿಸುತ್ತಿರುವ ದೇಶ ವಿದೇಶಗಳ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿವಿಧ ಮೂಲಭೂತ ಸೌಲಭ್ಯ ಒಳಗೊಂಡ ಹೈಟೆಕ್ ದರ್ಜೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಉಪಯೋಗಿಸಿದ ಎಲ್ಲ ವಸ್ತುಗಳು ಕಳಪೆಯಾಗಿವೆ.
ಬಾದಾಮಿಯಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶೌಚಾಲಯ ಕಳಪೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಿಸಿದ ಅಭಿಯಂತರರನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ.
•ಚಂದ್ರಪ್ರಸಾದ,ಲೋಕೋಪಯೋಗಿ ಇಲಾಖೆ ಅಭಿಯಂತರ.
ಬಾದಾಮಿ ನಗರದ ಮುಖ್ಯರಸ್ತೆಯ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವ ಹೈಟೆಕ್ ಶೌಚಾಲಯ ನಿರ್ಮಾಣ ಕಳಪೆಮಟ್ಟದಿಂದ ಕೂಡಿದ್ದು, ಸ್ಥಳೀಯ ಪುರಸಭೆಯವರಿಗೆ ಕಾಮಗಾರಿ ತಾತ್ಕಾಲಿಕ ಸ್ಥಗಿತಗೊಳಿಸಲು ಸೂಚಿಸಿದ್ದೇನೆ.
•ಪಿ.ಸಿ. ಗದ್ದಿಗೌಡರ,ಸಂಸದರು