Advertisement
ಶಸ್ತ್ರಾಸ್ತ್ರ ತಯಾರಿಕ ಮಂಡಳಿಯ ಅಧೀನದಲ್ಲಿರುವ 41 ಕಾರ್ಖಾನೆಗಳಲ್ಲಿ ಈ ಕಳಪೆ ಗುಣಮಟ್ಟದ ಸ್ಫೋಟಕಗಳನ್ನು ತಯಾರಿಸಲಾಗುತ್ತಿದ್ದು ಈ ಸ್ಫೋಟಕಗಳ ಬಳಕೆಯಿಂದಾಗಿ ಸೇನೆಯ ಯುದ್ಧ ಟ್ಯಾಂಕ್, ಫಿರಂಗಿ, ವಾಯು ದಾಳಿ ನಿಗ್ರಹ ಗನ್‌ಗಳ ಬಳಕೆಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ಸೈನಿಕರು ಗಾಯಗೊಳ್ಳುತ್ತಿದ್ದಾರಲ್ಲದೆ ಸೇನೆಯ ಯುದ್ಧ ಸಲಕರಣೆಗಳಿಗೂ ಹಾನಿಯಾಗುತ್ತಿದೆ. ಕಳಪೆ ಸ್ಫೋಟಕಗಳಿಂದಾಗಿ ಸಂಭವಿಸಿರುವ ಅಪಘಾತಗಳು, ಯೋಧರಿಗಾಗಿರುವ ಗಾಯಗಳು, ಸೇನೆಯ ಯುದ್ಧ ಸಲಕರಣೆಗಳಿಗಾಗಿರುವ ಹಾನಿಯ ಕುರಿತಾಗಿನ ಸಮಗ್ರ ವಿವರಗಳನ್ನೂ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
Related Articles
Advertisement
ಈ ವರ್ಷದ ಫೆಬ್ರವರಿಯಲ್ಲಷ್ಟೇ ಸೇನಾ ತರಬೇತಿ ವೇಳೆ ಸಂಭವಿಸಿದ ಅಪಘಾತದ ವೇಳೆ ಓರ್ವ ಸೇನಾಧಿಕಾರಿ ಮತ್ತು ನಾಲ್ವರು ಯೋಧರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಸೇನೆ 40ಎಂಎಂ ಸ್ಫೋಟಕಗಳನ್ನು ಸ್ಫೋಟಿಸುವ ತರಬೇತಿಯನ್ನೇ ಸ್ಥಗಿತಗೊಳಿಸಿತ್ತು. ಇಂಥ ಘಟನೆಗಳು ಸೇನಾ ಸಿದ್ಧತಾ ಕಾರ್ಯಾಚರಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಸೇನಾ ಸಿದ್ಧತೆಯ ಮೇಲಷ್ಟೇ ಅಲ್ಲದೆ ಇಡೀ ಸೇನೆಯ ಕಾರ್ಯಾಚರಣೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಸ್ಫೋಟಕಗಳ ಕಳಪೆ ಗುಣಮಟ್ಟದಿಂದಾಗಿ ನಮ್ಮ ಸೈನಿಕರ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆಗಳು ಅಧಿಕ ಮಾತ್ರವಲ್ಲದೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುವ ರಕ್ಷಣಾ ಸಾಧನ, ಸಲಕರಣೆಗಳು ಹಾನಿಗೀಡಾಗುವುದರಿಂದ ನಮ್ಮ ವಿರೋಧಿಗಳಿಂದ ನಗೆಪಾಟಲೀಗೀಡಾಗಬೇಕಾಗುತ್ತದೆ.
ಶತ್ರುಪಡೆಗಳ ದಾಳಿ ಅಥವಾ ತಾಂತ್ರಿಕ ಕಾರಣಗಳಿಂದ ಇಂಥ ದುರಂತಗಳು ಸಂಭವಿಸಿದರೆ ಇವುಗಳನ್ನು ಮಾನ್ಯ ಮಾಡಬಹುದಾದರೂ ನಮ್ಮ ಸ್ವಯಂಕೃತ ಅಪರಾಧಗಳಿಂದ ಇಂಥ ಅಪಘಾತಗಳು ಸಂಭವಿಸಿದಲ್ಲಿ ಅದಕ್ಕೆ ಕ್ಷಮೆ ಇಲ್ಲ. ದೇಶದ ರಕ್ಷಣಾ ವ್ಯವಸ್ಥೆಯ ಆಧುನೀಕರಣ ಕೇವಲ ಬೃಹತ್ ಯುದ್ಧ ಸಲಕರಣೆ, ಶಸ್ತ್ರಾಸ್ತ್ರ, ಅತ್ಯಾಧುನಿಕ ಗುಣಮಟ್ಟದ ಯುದ್ಧ ಸಾಮಾಗ್ರಿಗಳ ಖರೀದಿಯಿಂದ ಮಾತ್ರ ಸಾಧ್ಯವಿಲ್ಲ ಎಂಬುದನ್ನು ಸರಕಾರ ಮೊದಲು ಅರ್ಥೈಸಿಕೊಳ್ಳಬೇಕು. ಈ ಅತ್ಯಾಧುನಿಕ ಸಲಕರಣೆಗಳಲ್ಲಿ ಬಳಸಲಾಗುವ ಸ್ಫೋಟಕ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದರೆ ಅತ್ಯಾಧುನಿಕ ಸಲಕರಣೆಗಳೂ ನಿಷ್ಪ್ರಯೋಜಕವಾಗುತ್ತವೆ. ರಕ್ಷಣೆ ವಿಚಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸ್ಫೋಟಕ ಸಾಮಾಗ್ರಿಗಳ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂಬುದು ತೀರಾ ಕಳವಳಕಾರಿ ವಿಷಯವಾಗಿದೆ. ದೇಶದ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡದೇ ಇಂತಹ ವಾಸ್ತವಾಂಶಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕಿದೆ. ರಕ್ಷಣಾ ಸಾಮಗ್ರಿಗಳ ಆಮದಿಗೆ ಕಡಿವಾಣ ಹಾಕಲು ಸರಕಾರ ಪಣತೊಟ್ಟಿದೆಯಾದರೂ ಶಸ್ತ್ರಾಸ್ತ್ರ ಮತ್ತು ಯುದ್ಧ ಸಲಕರಣೆಗಳ ಉತ್ಪಾದನೆ ವೇಳೆ ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚಿನ ಆಸ್ಥೆ ವಹಿಸಬೇಕಿದೆ. ಈ ದಿಸೆಯಲ್ಲಿ ರಕ್ಷಣಾ ಇಲಾಖೆ ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದ್ದು ನಮ್ಮ ಸೇನೆಗೆ ಅಗತ್ಯವಿರುವ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಿಕೊಡುವುದು ಇಲಾಖೆಯ ಆದ್ಯ ಕರ್ತವ್ಯವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ವಿಷಯವನ್ನು ತೀರಾ ಲಘುವಾಗಿ ಪರಿಗಣಿಸಬಾರದು. ಈ ವಿಚಾರದಲ್ಲಿ “ಮಾತಿಗಿಂತ ಕೃತಿ ಮೇಲು’ ಎಂಬುದನ್ನು ಸರಕಾರ ಮೊದಲು ಮನಗಾಣಬೇಕು.