ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೈನು ರಾಸುಗಳಿಗೆ ಮಾರಕವಾಗಿರುವ ಕಾಲುಬಾಯಿ ಜ್ವರಕ್ಕೆ ವಿತರಿಸುತ್ತಿರುವ ಲಸಿಕೆ ಕಳಪೆ ಗುಣಮಟ್ಟದಿಂದ ಕೂಡಿದೆ. ಕೂಡಲೇ ಲಸಿಕೆ ಪೂರೈಸುತ್ತಿರುವ ಖಾಸಗಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಕಳೆದ ಜೂನ್ 18ರಂದು ಎರಡು ಜಿಲ್ಲೆಗಳ ರಾಸುಗಳಿಗೆ ನೀಡಿರುವ ಲಸಿಕೆಯ ಗುಣಮಟ್ಟ ವಿಫಲವಾಗಿ ಈ ಮಾರಣಾಂತಿಕ ರೋಗ ಎರಡು ಜಿಲ್ಲೆಗಳಲ್ಲಿ ಮತ್ತೆ ಮರುಕಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರು ತಿಂಗಳಗೊಮ್ಮೆ ಲಸಿಕೆ ನೀಡಿ: ಕಾಲುಬಾಯಿ ಜ್ವರಕ್ಕೆ ಒಂದು ವರ್ಷದಲ್ಲಿ ಕನಿಷ್ಠ ಆರು ತಿಂಗಳಗೊಮ್ಮೆ ಲಸಿಕೆ ನೀಡಬೇಕು. ಈ ಕಾಯಿಲೆಯಿಂದ ಹಾಲು ಉತ್ಪಾದನೆ ಮಾಡುವ ಮಿತ್ರ ತಳಿ ರಾಸುಗಳಿಗೆ ಹೆಚ್ಚಾಗಿ ಕಾಣಿಸಿಕೊಂಡು ಹಾಲು ಉತ್ಪಾದನೆಯ ಮೇಲೆ ಗಂಭಿರ ಪರಿಣಾಮ ಬೀರಿದೆ. ಅಲ್ಲದೇ ಹೈನುಗಾರರ ರಾಸುಗಳು ಮರಣ ಹೊಂದಿದಾಗ ಹಾಲು ಉತ್ಪಾದಕರ ಜೀವನ ನಿರ್ವಹಣೆ ತುಂಬಾ ದುಸ್ತರವಾಗಿದೆ ಎಂದು ಕಿಡಿಕಾರಿದರು.
ಅಭಿವೃದ್ಧಿ ಮಂಡಳಿಯಿಂದ ಲಸಿಕೆ ಖರೀದಿಸಿ: ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಲಸಿಕೆಯನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿರುವ ಖಾಸಗಿ ಕಂಪನಿಯಾದ ಬಯೋವೇಟ್ ಸಂಸ್ಥೆಯಿಂದ ಖರೀದಿ ಮಾಡುತ್ತಿದ್ದಾರೆ. ಆದರೆ ಕಂಪನಿಯ ಲಸಿಕೆಯ ಗುಣಮಟ್ಟದ ಬಗ್ಗೆ ಈಗಾಗಲೇ ಅನೇಕ ದೂರುಗಳಿದೆ.
ಈ ಕಂಪನಿಯ ಲಸಿಕೆಯನ್ನು ಹೊರ ರಾಜ್ಯಗಳಾದ ಪಂಜಾಬ್, ಗುಜರಾತ್, ಉತ್ತರ ಪ್ರದೇಶ ಹಾಗೂ ಇನ್ನಿತರೇ ರಾಜ್ಯಗಳಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಮೊದಲನಿಂದಲೂ ಕೂಡ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯಿಂದ ಖರೀದಿಸಿ ಲಸಿಕೆ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಸಂಸ್ಥೆಯಿಂದ ಒಳ್ಳೆಯ ಗುಣಮಟ್ಟದ ಲಸಿಕೆಯನ್ನು ಪೂರೈಸಲಾಗುತ್ತಿತ್ತು. ಇದರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗಿದ್ದು, ರೋಗ ನಿಯಂತ್ರಣ ಉತ್ತಮವಾಗಿ ಆಗುತ್ತಿತ್ತು. ಆದರೆ ಖಾಸಗಿ ಕಂಪನಿ ಬಯೋವೇಟ್ ಲಸಿಕೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಅಂಶ ತಿಳಿದು ಬಂದಿದೆ. ಅಲ್ಲದೇ ಈ ಕಂಪನಿಯು ಇಲಾಖೆಯಲ್ಲಿ ನಿವೃತ್ತರಾದ ಒಬ್ಬ ಹಿರಿಯ ಅಧಿಕಾರಿಗಳಿಗೆ ಸಂಬಂಧಿಸಿದ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ರಾಸುಗಳು ಆಹಾರ ಸೇವೆನೆ ಮಾಡುತ್ತಿಲ್ಲ: ಕಾಲುಬಾಯಿ ಜ್ವರದಿಂದ ಬಳಲುತ್ತಿರುವ ರಾಸುಗಳ ಬಾಯಿ ಹುಣ್ಣಾಗಿ ಆಹಾರ ಸೇವನೆ ಮಾಡಲು ಅಸಾಧ್ಯವಾಗಿದೆ. ಅವುಗಳ ಕೆಚ್ಚಲು ಸಹ ಸಂಪೂರ್ಣ ನಾಶ ಹೊಂದಿ, ರಾಸುಗಳು ಪಡುತ್ತಿರುವ ಬವಣೆ ನೋಡ ತೀರದಾಗಿದೆ. ಇದರಿಂದ ಹಾಲು ಉತ್ಪಾದಕರು ರಾಸುಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸುವುದಲ್ಲದೇ ಕೋಚಿಮುಲ್ ಒಕ್ಕೂಟಕ್ಕೆ ಪೂರೈಕೆಯಗುವ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಪ್ರತಿಭಟನಕಾರರು ಡೀಸಿ ಗಮನಕ್ಕೆ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ, ಗುಡಿಬಂಡೆ ತಾಲೂಕು ಅಧ್ಯಕ್ಷ ಎಚ್ .ಪಿ.ರಘುನಾಥ ರೆಡ್ಡಿ, ಗೌರಿಬಿದನೂರು ತಾಲೂಕು ಅಧ್ಯಕ್ಷ ನರಸಿಂಹಯ್ಯ, ಶೀಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ, ಚಿಂತಾಮಣಿ ತಾಲೂಕು ಅಧ್ಯಕ್ಷ ಸೀಕಲ್ ರಮಣಾ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.