Advertisement

ಕಳಪೆ ಸಮವಸ್ತ್ರ ಪೂರೈಕೆ: ವರದಿಗೆ ಸೂಚನೆ

12:17 PM Jul 04, 2017 | Team Udayavani |

ಚಿಕ್ಕಮಗಳೂರು: ಸರ್ಕಾರ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ, ಪಠ್ಯಪುಸ್ತಕ ಪೂರೈಕೆಯಾಗಿರುವ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಪಂ ವಿಶೇಷ ಸಭೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ
ಸೂಚಿಸಿತು.

Advertisement

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯೆ ಜಸಿಂತಾ ಅನಿಲ್‌ಕುಮಾರ್‌, ಈಗಾಗಲೇ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಇದನ್ನು ತಡೆಯಲು ಯೋಚಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ನೀಡಿರುವ ಸಮವಸ್ತ್ರದ ಬಟ್ಟೆಯು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ ಎಂದು ದೂರಿದರು.
ವಿದ್ಯಾರ್ಥಿನಿಯರಿಗೆ ಸರ್ಕಾರ ಕೊಡಲು ಹೊರಟಿರುವ ಸಮವಸ್ತ್ರದ ಬಟ್ಟೆಯು ಬಹಳ ತೆಳುವಾಗಿದೆ. ಅದನ್ನು ಧರಿಸಿ ಹೊರಗೆ ಬರುವುದೇ ಮಕ್ಕಳಿಗೆ ಕಷ್ಟವಾಗಲಿದೆ ಎಂದು ಹೇಳಿ ಸಮವಸ್ತ್ರದ ಬಟ್ಟೆಯನ್ನು ಸಭೆಯಲ್ಲಿ ಪ್ರದರ್ಶಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಸರ್ಕಾರದಿಂದ ನಡೆಯುವ ಎಲ್ಲ ಕೆಲಸವೂ ಪಾರದರ್ಶಕವಾಗಿರಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಪ್ರಕರಣದಲ್ಲಿ ಬಟ್ಟೆ ಪಾರದರ್ಶಕವಾಗಿದೆ. ಮಾಡಿರುವ ಕೆಲಸ ಪಾರದರ್ಶಕವಾಗಿದೆಯೆ ಎಂಬ
ಬಗ್ಗೆ ಪರಿಶೀಲಿಸಬೇಕಿದೆ ಎಂದರು. ಬಟ್ಟೆ ಬಂದು 20 ದಿನಗಳು ಕಳೆದಿವೆ. ಆದರೂ ಕಳಪೆ ಗುಟ್ಟಮಟ್ಟದ ಬಟ್ಟೆ ಬಂದಿರುವ ಬಗ್ಗೆ ಸರ್ಕಾರಕ್ಕೆ ವರದಿ ಏಕೆ ಸಲ್ಲಿಸಿಲ್ಲ ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬೆಳವಾಡಿ ರವೀಂದ್ರ ಮಾತನಾಡಿ, ಸಮವಸ್ತ್ರ ಮಾತ್ರವಲ್ಲ. ಪಠ್ಯಪುಸ್ತಕವೂ ಕಳಪೆ ಗುಣಮಟ್ಟದಿಂದ ಕೂಡಿದೆ. 
ಪುಸ್ತಕವನ್ನು ತೆರೆಯಲು ಪ್ರಯತ್ನಿಸಿದರೆ ಅದು ಹರಿದು ಹೋಗುವ ಸ್ಥಿತಿಯಲ್ಲಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಮಕ್ಕಳಿಗೆ ಹಕ್ಯುìಲಸ್‌ ಕಂಪನಿಯ ಸೈಕಲ್‌ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ ಬಂದಿರುವ ಸೈಕಲ್‌ನಲ್ಲಿ ಎಲ್ಲವೂ ಅದೇ ಕಂಪನಿಯ ಬಿಡಿ ಭಾಗಗಳಿಲ್ಲ. ಕೆಲವು ಭಾಗಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆರೋಪಿಸಿದರು. ಮತ್ತೆ ಕೆಲವು ಸದಸ್ಯರು ಪಂಚರ್‌ ಆಗಿರುವ ಬೈಸಿಕಲ್‌ಗ‌ಳನ್ನು ನೀಡಲಾಗುತ್ತಿದೆ ಎಂದು ದೂರಿದರು.

ಬೆಳವಾಡಿ ರವೀಂದ್ರ ಮಾತನಾಡಿ, ಪಠ್ಯಪುಸ್ತಕದ ಗುಣಮಟ್ಟದಲ್ಲಿ ಮಾತ್ರವಲ್ಲ, ಪುಸ್ತಕ ಬಿಡುಗಡೆಯಲ್ಲಿಯೂ ಲೋಪವಾಗುತ್ತಿದೆ. ಕೆಲವು ಶಾಲೆಗಳಿಗೆ ಮೊದಲ ಸೆಮಿಸ್ಟರ್‌ ಪುಸ್ತಕಗಳನ್ನು  ಈವರೆಗೂ ಕೊಟ್ಟಿಲ್ಲ. ಅದಕ್ಕೂ ಮೊದಲೆ ಎರಡನೇ ಸೆಮಿಸ್ಟರ್‌ ಪುಸ್ತಕಗಳನ್ನು ನೀಡಲಾಗಿದೆ ಎಂದರು. ಕೂಡಲೇ ಜಿಲ್ಲೆಗೆ ಬಂದಿರುವ ಸಮವಸ್ತ್ರ, ಸೈಕಲ್‌, ಪಠ್ಯಪುಸ್ತಕಗಳ ಬಗ್ಗೆ ಸಮಗ್ರ ವಿವರ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಪಂ ಸಿಇಒ ಡಾ| ಆರ್‌. ರಾಗಪ್ರಿಯಾ ಡಿಡಿಪಿಐ ಅವರಿಗೆ ಸೂಚಿಸಿದರು. ಸದಸ್ಯ ಸೋಮಶೇಖರ್‌ ಮಾತನಾಡಿ, ಬಿಳೇಕಲ್ಲಹಳ್ಳಿ ಗ್ರಾಮದಲ್ಲಿ ಮೊರಾರ್ಜಿ
ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಲ್ಲಿ ಕಳಪೆ ಗುಣಮಟ್ಟದ ಪದಾರ್ಥ ಬಳಸಲಾಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಇಒ ಅವರನ್ನು ಕರೆದೋಯ್ದು ಪರಿಶೀಲಿಸಲಾಗಿತ್ತು ಎಂದರು. 

Advertisement

ಕಳಪೆ ಗುಣಮಟ್ಟದ ಪದಾರ್ಥ ಇರುವುದನ್ನು ನೋಡಿ ಕೂಡಲೇ ಪದಾರ್ಥ ಬದಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗಿತ್ತು. ಆದರೆ ಇಂದೂ ಸಹ ಅದೇ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂದು
ದೂರಿದರು. ಕ್ರಿಸ್ಟ್‌ ಸಂಸ್ಥೆಯವರು ಕಾಮಗಾರಿ ಮಾಡಿಸುತ್ತಿದ್ದಾರೆ. ಇದು ರಾಜ್ಯಮಟ್ಟದಲ್ಲಿ ನಡೆದಿರುವ ಟೆಂಡರ್‌ ಎಂದು ಅಧಿಕಾರಿ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‌, ಕ್ರಿಸ್ಟ್‌ ಸಂಸ್ಥೆಯವರು ಜಿಲ್ಲೆಯಲ್ಲಿ
ಹಲವು ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಅದೆಲ್ಲವೂ ಕಳಪೆ ಕಾಮಗಾರಿಗಳಾಗಿವೆ ಎಂದು ಹೇಳಿದರು. ರಾಜ್ಯದಲ್ಲಿ ಎಲ್ಲಿಯಾದರೂ ಕ್ರಿಸ್ಟ್‌ ಸಂಸ್ಥೆಯವರು ಕಾಮಗಾರಿ ನಡೆಸಲಿ. ಆದರೆ, ನಮ್ಮ ಜಿಲ್ಲೆಗೆ ಅವರ ಅವಶ್ಯಕತೆ ಇಲ್ಲ ಎಂಬ
ನಿರ್ಣಯ ಮಾಡಿ ಸರ್ಕಾರಕ್ಕೆ ಸಲ್ಲಿಸಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು. 

ಜಿಪಂ ಸದಸ್ಯ ರವೀಂದ್ರ ಹೇಳಿಕೆಗೆ ಖಂಡನೆ
ಚಿಕ್ಕಮಗಳೂರು: ರಾಜ್ಯಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಬಾವಿಗೆ ಇಳಿದು ಪ್ರತಿಭಟಿಸಿದ ಘಟನೆ ಸೋಮವಾರ ನಡೆಯಿತು.

ಜಿಪಂ ಅಧ್ಯಕ್ಷೆ ಚೈತ್ರಶ್ರೀಮಾಲತೇಶ್‌ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಸದಸ್ಯ ಬೆಳವಾಡಿ ರವೀಂದ್ರ, ಜಿಲ್ಲಾ ಪಂಚಾಯತ್‌ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಸರ್ಕಾರ ಬೆಲೆ ಕೊಡುತ್ತಿಲ್ಲ. ಡಿಡಿಪಿಐ ನಾಗೇಶ್‌ ಅವರ ಹಗರಣಗಳ  ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಪಂ ಸದಸ್ಯರ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಸದಸ್ಯ ಮಹೇಶ್‌ ಒಡೆಯರ್‌, ಡಿಡಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ನಿರ್ಣಯವನ್ನು ಪಕ್ಷಬೇದ ಮರೆತು ಎಲ್ಲರೂ ಒಟ್ಟಾಗಿ ಕೈಗೊಂಡಿದ್ದೇವೆ. ಆದರೆ ರಾಜ್ಯ ಸರ್ಕಾರ ಕೆಲಸ ಮಾಡದೆ 
ನಿಷ್ಕ್ರಿಯವಾಗಿದೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಕೂಡಲೇ ಈ ವಾಕ್ಯವನ್ನು ಕಡತದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌  ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಕಾಲ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಕೇಳದಂತಾಗಿತ್ತು. ಕೂಡಲೇ ಕಾಂಗ್ರೆಸ್‌ ಸದಸ್ಯರು ಬಾವಿಗೆ ಇಳಿದು ಆ ವಾಕ್ಯವನ್ನು ಕಡತದಿಂದ ತೆಗೆದು ಹಾಕಲೇಬೇಕೆಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು.

ಆಗ ಮಧ್ಯ ಪ್ರವೇಶಿಸಿದ ಶಾಸಕ ಸಿ.ಟಿ.ರವಿ ನಿಷ್ಕ್ರಿಯ ಎಂಬ ಮಾತು ಅಸಂವಿದಾನಕ ಪದವಲ್ಲ. ಅಥವಾ ಸರ್ಕಾರ
ನಿಷ್ಕ್ರಿಯವಾಗಿದೆ ಎಂಬ ನಿರ್ಣಯವನ್ನು ಸಭೆ ತೆಗೆದುಕೊಂಡಿಲ್ಲ. ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರಷ್ಟೆ. ಇದನ್ನು ಕಡತದಿಂದ ತೆಗೆದು ಹಾಕಬೇಕೆಂಬ ಬೇಡಿಕೆ ಸರಿಯಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬೇರೆ ಚರ್ಚೆ 
ಮಾಡಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next