ದೊಡ್ಡಬಳ್ಳಾಪುರ: ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಿದ್ದ ಖಾಸಗಿ ಕಂಪನಿಯೊಂದರ ಸಿಪಿ-818 ತಳಿಯ ಮುಸುಕಿನಜೋಳ ಕಳಪೆಯಾಗಿದ್ದು ಸರಿಯಾಗಿ ಹುಟ್ಟುವಳಿ ಆಗಿಲ್ಲ ಎಂದು ಆರೋಪಿಸಿ ನೇರಳೆಘಟ್ಟ ಗ್ರಾಮದಲ್ಲಿ ರೈತರು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಂದ ದೂರು ಕೇಳಿ ಬಂದ ತಕ್ಷಣ ಎಚ್ಚೆತ್ತ ಕೃಷಿ ಇಲಾಖೆ ಅಧಿಕಾರಿಗಳು ಸಿಪಿ-818 ತಳಿಯ ಮುಸುಕಿನ ಜೋಳ ಬಿತ್ತನೆ ಬೀಜದ ಮಾರಾಟವನ್ನು ಮಂಗಳವಾರ ಬೆಳಗ್ಗೆಯಿಂದಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಬಿತ್ತನೆ ಮಾಡಿದ 5 ರಿಂದ 7 ದಿನಗಳ ಒಳಗೆ ಜೋಳ ಮೊಳಕೆಯೊಡೆದು ಪೈರಾದರೆ ಮಾತ್ರ ಉತ್ತಮ ಇಳಿವರಿ ಬರುವ ನಿರೀಕ್ಷೆ ಹಾಗೂ ಗುಣಮಟ್ಟದ ಬೀಜ ಎನ್ನುವ ನಂಬಿಕೆ. ಆದರೆ 7 ದಿನವಾದರೂ ಮೊಳಕೆಯೇ ಹೊಡೆದಿಲ್ಲ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 80 ಕ್ವಿಂಟಾಲ್ ಬಿತ್ತನೆ ಬೀಜ ಮಾರಾಟವಾಗಿ ಎನ್ನಲಾಗುತ್ತಿದೆ. ಇದೇ ದಿನ ಬಿತ್ತನೆ ಮಾಡಿರುವ ಇತರೆ ಕಂಪನಿಯ ಬೀಜಗಳು ಮೊಳಕೆಯೊಡೆದು ಪೈರಾಗಿವೆ ಎನ್ನುವ ನೇರಳೆಘಟ್ಟ ಗ್ರಾಮದ ರೈತ ಮಧನ್, ರೈತರಿಗೆ ಉಳುಮೆ ಮಾಡಿರುವ ಖರ್ಚಿನಿಂದ ಮೊದಲುಗೊಂಡು ಬತ್ತನೆ ಬೀಜ ನಾಟಿ ಮಾಡುವವರೆಗಿನ ಎಲ್ಲಾ ಖರ್ಚನ್ನು ಕಂಪನಿ ರೈತರಿಗೆ ಪರಿಹಾರವಾಗಿ ನೀಡಬೇಕೆಂದರು. ಕೃಷಿ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿ ರೂಪಾ, ಸರ್ಕಾರ ನೀಡಿರುವ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವುದಷ್ಟೇ ನಮ್ಮ ಕೆಲಸ.
ಬೀಜ ಪರಿಶೀಲನೆ ಮಾಡುವ ಜವಾಬ್ದಾರಿ ನಮ್ಮದಲ್ಲ. ಬುಧವಾರ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಬೀಜ ತಜ್ಞರ ತಂಡ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ತಿಳಿಸಿದರು. ನೇರಳೆಘಟ್ಟದಲ್ಲಿ ಜೋಳ ಬಿತ್ತನೆ ಮಾಡಿರುವ ರೈತರ ಹೊಲಗಳಿಗೆ ಭೇಟಿ ನೀಡಿದ್ದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಬೀಜ ತಜ್ಞರಾದ ಡಾ.ವೆಂಕಟೇಗೌಡ, ಮೇಲ್ನೋಟಕ್ಕೆ ಬೀಜ ಮೊಳಕೆಯಲ್ಲಿ ತೊಂದರೆ ಕಂಡುಬಂದಿದೆ ಎಂದರು.