Advertisement

ಕಳಪೆ ಶೂ ವಿತರಣೆ; ತನಿಖೆಗೆ ನಿರ್ಧಾರ

09:59 AM Nov 01, 2019 | Sriram |

ಬೆಂಗಳೂರು: ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂಗಳನ್ನು ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ತನಿಖೆಗೆ ಮುಂದಾಗಿದೆ.

Advertisement

ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ವಿತರಿಸುತ್ತಿದ್ದು, ಕೆಲವೆಡೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಪ್ರಮುಖ 15 ಬ್ರ್ಯಾಂಡ್‌ಗಳ ಪಟ್ಟಿಯನ್ನು ಶಾಲೆಗಳಿಗೆ ನೀಡಿದ್ದು, ಆ ಪೈಕಿ ಲಭ್ಯವಿರುವ ಶೂಗಳನ್ನು ಖರೀದಿಸಿ ಮಕ್ಕಳಿಗೆ ವಿತರಿಸುವಂತೆ ಸೂಚಿಸಲಾಗಿದೆ. ಆದರೆ ಮಕ್ಕಳ ಎಕ್ಕಡದಲ್ಲೂ ಅವ್ಯವಹಾರ ಮಾಡಲು ಮುಂದಾಗಿರುವುದು ಅತ್ಯಂತ ಬೇಸರದ ಸಂಗತಿ. ಗುಣಮಟ್ಟದಲ್ಲಿ ರಾಜಿ ಆಗುತ್ತಿರುವುದು ಮಕ್ಕಳಿಗೆ ಬಗೆಯುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಸಂಬಂಧ ತುರ್ತು ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.

ಎರಡನೇ ಜತೆ ಸಮವಸ್ತ್ರ ವಿತರಣೆ ಜವಾಬ್ದಾರಿಯನ್ನು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಚ್‌ಡಿಎಂಸಿ)ಗಳಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಕ್ಕಳಿಗಾಗಿ ಐಸಿಯು
ಹೈದರಾಬಾದ್‌ ಕರ್ನಾಟಕದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ವೃದ್ಧಿಗಾಗಿ “ತೀವ್ರ ನಿಗಾ ಘಟಕ’ಗಳ ಮಾದರಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಹಗಲು-ರಾತ್ರಿ ಮಕ್ಕಳಿಗೆ ರೊಟೇಷನ್‌ ಪದ್ಧತಿಯಲ್ಲಿ ಕಲಿಸಿಕೊಡಲಾಗುವುದು. ಎಸೆಸೆಲ್ಸಿಯಲ್ಲಿ ಬಳ್ಳಾರಿ ಮತ್ತು ಯಾದಗಿರಿಯಲ್ಲಿ ಕ್ರಮವಾಗಿ ಕನಿಷ್ಠ ಶೇ. 80 ಮತ್ತು ಶೇ. 70ರಷ್ಟು ಫ‌ಲಿತಾಂಶದ ಗುರಿ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

ಸಿಸಿಟಿವಿಯಿಂದ ಅಂಕ ಕಡಿಮೆ!
ಸಿಸಿಟಿವಿ ಅಳವಡಿಕೆಗೂ ಮತ್ತು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಕೆಗೂ ಒಂದಕ್ಕೊಂದು ಸಂಬಂಧ ಇದೆಯಾ?
– “ಸಂಬಂಧ ಇದೆ’ ಎನ್ನುತ್ತಿದ್ದಾರೆ ಬೀದರ್‌ ಮತ್ತು ಯಾದಗಿರಿ ಜಿಲ್ಲೆಯ ಶಾಲಾ ಶಿಕ್ಷಕರು!

ಈಚೆಗೆ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರು, “ಎಸೆಸೆಲ್ಸಿಯಲ್ಲಿ ಕಡಿಮೆ ಅಂಕ ಗಳಿಕೆಗೆ ಕಾರಣ ಏನು ಎಂದು ಕೇಳಿದಾಗ, ಸಂಬಂಧಪಟ್ಟ ಶಿಕ್ಷಕರು ಮತ್ತು ಅಧಿಕಾರಿಗಳು ಸಿಸಿಟಿವಿಯತ್ತ ಬೆಟ್ಟು ಮಾಡಿದರು. ಕೆಮರಾಗಳು ತುಂಬಾ ಹಾಕಿದ್ದರಿಂದ, ಮಕ್ಕಳು ಹೆದರಿದರು ಎಂದರು. ಈ ಉತ್ತರ ನಮಗೂ ಅಚ್ಚರಿ ಮೂಡಿಸಿತು ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಸಂವೇದನೆ’
ಫೋನ್‌ ಇನ್‌ ಕಾರ್ಯಕ್ರಮಕ್ಕೆ “ಸಂವೇದನೆ’ ಎಂದು ಹೆಸರಿಡಲಾಗಿದೆ. ಇದರ ದೂರವಾಣಿ ಸಂಖ್ಯೆ: 080- 26725654/ 26725655 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next