Advertisement

ಕಳಪೆ ಖಾರದಪುಡಿ ತಯಾರಿಕೆ: ಅಧಿಕಾರಿಗಳ ದಾಳಿ

01:04 PM Dec 25, 2019 | Suhan S |

ಬ್ಯಾಡಗಿ: ಕಳಪೆಮಟ್ಟದ ಖಾರದಪುಡಿ ತಯಾರಿಕೆಯಲ್ಲಿ ತೊಡಗಿದ್ದ ಘಟಕವೊಂದರ ಮೇಲೆ ದಿಢೀರ್‌ ದಾಳಿ ನಡೆಸಿದ ತಹಶೀಲ್ದಾರ್‌ ಶರಣಮ್ಮ ನೇತೃತ್ವದ ಆಹಾರ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಘಟಕಕ್ಕೆ ಬೀಗ ಹಾಕಿದರು.

Advertisement

ಖಚಿತ ಮಾಹಿತಿ ಮೇರೆಗೆ ಮಂಗಳವಾರ ಪಟ್ಟಣದ ಇಸ್ಲಾಂಪುರ ಓಣಿಯಲ್ಲಿನ ಖಾರದ ಪುಡಿ ತಯಾರಿಕಾ ಘಟಕ್ಕೆ ದಾಳಿ ಮಾಡಿದ ಅಧಿಕಾರಿಗಳ ತಂಡಕ್ಕೆ ಪರಿಶೀಲನೆ ವೇಳೆ ಕೊಳೆತ ಮೆಣಸಿನಕಾಯಿ, ಪೆಪ್ಪರ್‌, ಬಿಳಿಗಾಯಿ ಮಿಶ್ರಿತ ಚೀಲಗಳು ಪತ್ತೆಯಾಗಿದ್ದು, ಅದರಲ್ಲಿ ಸಣ್ಣ ಹುಳುಗಳು ಕಂಡು ಬಂದಿವೆ. ಈ ಸಂದರ್ಭದಲ್ಲಿ ಘಟಕದ ಮಾಲೀಕನ ವಿರುದ್ಧ ತಹಶೀಲ್ದಾರ್‌ ಕೆಂಡಾಮಂಡಲವಾದರು. ಬ್ಯಾಡಗಿ ಮೆಣಸಿಕಾಯಿ ಹಾಗೂ ಖಾರದಪುಡಿ ಇಡೀ ವಿಶ್ವದಲ್ಲೇ ಪ್ರಸಿದ್ಧಿ, ಆದರೆ, ಹಣದಾಸೆಗೆ ಇಂತಹ ನೀಚ ಕೃತ್ಯದಿಂದ ರೈತರು ಹಾಗೂ ವ್ಯಾಪಾರಸ್ಥರು ಪರಿಶ್ರಮದಿಂದ ಉಳಿಸಿಕೊಂಡು ಬಂದಿರುವ ಬ್ಯಾಡಗಿ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದು ಮಾಲೀಕನನ್ನು ತರಾಟೆ ತೆಗೆದುಕೊಂಡರು.

ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲಾಗದ ಘಟಕದ ಮಾಲೀಕ, ನನ್ನದು ಕೇವಲ ಬಾಡಿಗೆ ರೂಪದಲ್ಲಿ ಖಾರದ ಪುಡಿ ಮಾಡಿಕೊಡುತ್ತೇನೆ. ಇದ್ಯಾವುದೂ  ನನ್ನ ಸ್ವಂತದ್ದಲ್ಲ; ಅಂತಹ ಹತ್ತಾರು ವ್ಯಾಪಾರಸ್ಥರು ನನ್ನ ಘಟಕದಲ್ಲಿದ್ದಾರೆ ಎಂದೆಲ್ಲ ಹೇಳುತ್ತ ಸಮಜಾಯಿಷಿ ನೀಡಲು ಮುಂದಾದ. ಇದರಿಂದ ಕುಪಿತಗೊಂಡ ತಹಶೀಲ್ದಾರ್‌ ಶರಣಮ್ಮ, ಮೆಣಸಿನಕಾಯಿ ಜತೆ ಮಣ್ಣು ತಂದ್ರು ಖಾರದಪುಡಿ ಮಾಡಿ ಕೊಡ್ತೀರಾ? ಮನುಷ್ಯರು ಇದನ್ನು ತಿನ್ನಬಹುದೇ? ಇಂತಹ ಖಾರದಪುಡಿ ನಿಮ್ಮ ಮನೆಯಲ್ಲಿ ತಿನ್ನುತ್ತೀರಾ ಎಂದು ಪ್ರಶ್ನಿಸಿದರು. ಘಟಕದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಅಧಿಕಾರಿಗಳ ತಂಡ ಸ್ಥಳದಲ್ಲಿದ್ದ 8 ರಿಂದ 10 ಖಾರದಪುಡಿ ಪ್ಯಾಕೆಟ್‌ ರಾಶಿಗಳ ಸ್ಯಾಂಪಲ್‌ ಪಡೆದು ಲ್ಯಾಬ್‌ ಟೆಸ್ಟ್‌ಗೆ ಕಳುಹಿಸಿಕೊಟ್ಟರು. ಗುಣಮಟ್ಟದ ಪರೀಕ್ಷೆಯಲ್ಲಿ ಕಳಪೆ ಎಂದು ಕಂಡು ಬಂದಲ್ಲಿ ಲೈಸೆನ್ಸ್‌ ರದ್ದುಗೊಳಿಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಪತ್ರಿಕೆಗೆ ತಿಳಿಸಿದರು.

ಘಟಕಕ್ಕೆ ಬೀಗ: ತಹಶೀಲ್ದಾರ್‌ ಆದೇಶದ ಮೇರೆಗೆ ಆಹಾರ ಇಲಾಖೆ ನೀರಿಕ್ಷಕರ ಸಿಬ್ಬಂದಿ ಘಟಕಕ್ಕೆ ಬೀಗ ಜಡಿದು ವಶಕ್ಕೆ ತೆಗೆದುಕೊಂಡರು. ಗುಣಮಟ್ಟದ ಪರೀಕ್ಷಾ ವರದಿ ಬರುವ ವರೆಗೂ ಘಟಕ ತೆರೆಯುವಂತಿಲ್ಲ ಎಂದು ನೋಟಿಸ್‌ ಅಂಟಿಸಿ ತೆರಳಿದರು. ದಾಳಿ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಬಿ.ಎಂ. ದೊಡ್ಡಮನಿ, ಕಂದಾಯ ನಿರೀಕ್ಷಕ ಕುಲಕರ್ಣಿ, ಗ್ರಾಮ ಲೆಕ್ಕಾಧಿಕಾರಿ ಗುಂಡಪ್ಪ, ಸೇರಿದಂತೆ ಇನ್ನಿತತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next