ಹುಬ್ಬಳ್ಳಿ: ಮಹಾನಗರ ಪಾಲಿಕೆ ಹಳೇ ಹುಬ್ಬಳ್ಳಿಯನ್ನು ನಿರ್ಲಕ್ಷಿಸಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಗಮನಿಸಿದರೆ ನಿವಾಸಿಗಳ ದೂರಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲವೆಂಬುದು ಅರಿವಿಗೆ ಬರುತ್ತದೆ.
ವಾಹನ ನಿಲುಗಡೆಗೆ ಜಾಗ ಇಲ್ಲದ್ದರಿಂದ, ಇಕ್ಕಟ್ಟಾದ ರಸ್ತೆಗಳ ಪಕ್ಕದಲ್ಲೇ ವಾಹನಗಳ ನಿಲುಗಡೆ ಮಾಡುವುದರಿಂದ ವಾಹನಗಳು ಸಂಚರಿಸುವುದು ಕಷ್ಟವಾಗಿದೆ. ಇದಲ್ಲದೇ ರಸ್ತೆಗಳ ಮಧ್ಯೆಯೇ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಸರ್ಕಸ್ ಮಾಡುತ್ತಲೇ ರಸ್ತೆ ದಾಟಬೇಕಾದ ಅನಿವಾರ್ಯತೆ ಇದೆ.
ಇಲ್ಲಿನ ನಿವಾಸಿಗಳ ಆಗ್ರಹದಿಂದ ರಸ್ತೆಗಳ ಮಧ್ಯೆ ಬಿದ್ದಿರುವ ಗುಂಡಿಗಳಿಗೆ 2 ತಿಂಗಳ ಹಿಂದೆ ಖಡಿ ಹಾಕಲಾಗಿದೆ ಆದರೆ ಮಳೆ ಹಾಗೂ ನಿರಂತರ ವಾಹನ ಸಂಚಾರದಿಂದ ಖಡಿ ಕಿತ್ತೋಗಿ ಮತ್ತೆ ಗುಂಡಿ ಉಂಟಾಗಿವೆ. ಅಲ್ಲದೇ ಖಡಿ ರಸ್ತೆ ತುಂಬೆಲ್ಲ ಹರಡಿ ಸಂಚಾರಕ್ಕೆ ಇನ್ನಷ್ಟು ವ್ಯತ್ಯಯ ಉಂಟಾಗಿದೆ.
Advertisement
ಪಾಲಿಕೆ ವಲಯ ಸಂಖ್ಯೆ-10ರ ವ್ಯಾಪ್ತಿಗೆ ಬರುವ ಹಳೇ ಹುಬ್ಬಳ್ಳಿ ಮೂಲಕವೇ ನೇಕಾರ ನಗರ, ಈಶ್ವರ ನಗರ, ತಿಮ್ಮಸಾಗರ, ಗಿರಿಯಾಲಕ್ಕೆ ಹೋಗಬೇಕು. ಇಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ರಸ್ತೆ ಸಂಚಾರ ದುಸ್ತರವಾಗಿದೆ. ತೀರಾ ಇಕ್ಕಟ್ಟಾದ ರಸ್ತೆಗಳು ಇರುವುದರಿಂದ ಇಲ್ಲಿ ಬೆಳಗ್ಗೆ ಹಾಗೂ ಸಂಜೆ ಅವಧಿಯಲ್ಲಿ ವಾಹನಗಳು ಸಂಚರಿಸುವುದು ದುಸ್ತರವಾಗಿದೆ.
Related Articles
Advertisement
ಜಂಗ್ಲಿ ಪೇಟೆ ವೃತ್ತದಿಂದ ಮುಂದೆ ಬಾಣಂತಿಕಟ್ಟೆಗೆ ಸಂಪರ್ಕ ಕಲ್ಪಿಸುವ 3 ನೇ ಕ್ರಾಸ್ ರಸ್ತೆಯ ಸ್ಥಿತಿ ಅಧ್ವಾನವಾಗಿದೆ. ಅಕ್ಕ ಪಕ್ಕದ ಉಪ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದರೂ ಈ ರಸ್ತೆಯನ್ನು ನಿರ್ಲಕ್ಷಿಸಲಾಗಿದೆ. ನೇಕಾರ ನಗರ ಬಸ್ ಸಂಚರಿಸುವ ಮುಖ್ಯ ರಸ್ತೆ ಇದಾಗಿದ್ದು, ಇಲ್ಲಿನ ನಿವಾಸಿಗಳು ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರೂ, ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದರೂ ರಸ್ತೆ ಅಭಿವೃದ್ಧಿ ಪಡಿಸದ್ದರಿಂದ ನಿವಾಸಿಗಳು ಬೇಸತ್ತಿದ್ದಾರೆ.
ಬಸ್ ಸಂಚಾರದಿಂದ ರಸ್ತೆ ಹದಗೆಡುತ್ತಿರುವುದರಿಂದ ಈ ರಸ್ತೆಯಲ್ಲಿ ಬಸ್ ಸಂಚಾರವನ್ನೇ ನಿಷೇಧಿಸಿದ್ದಾರೆ. ರಸ್ತೆ ದುರಸ್ತಿ ಬಗ್ಗೆ ಆಗ್ರಹಿಸಿದ ಸಂದರ್ಭದಲ್ಲಿ ಈ ವಾರ್ಡ್‌ನ ಪಾಲಿಕೆ ಸದಸ್ಯೆಯ ಪತಿ ಭರವಸೆ ನೀಡಿ ಹೋಗುತ್ತಾರೆಯೇ ಹೊರತು ಕಾಮಗಾರಿ ಮಾತ್ರ ಕೈಗೊಂಡಿಲ್ಲ. ಒಳಚರಂಡಿ ಒಡೆದು ಕೊಳಚೆ ರಸ್ತೆಯಲ್ಲಿಯೇ ಹರಿದು ಹೋಗುತ್ತಿದ್ದರೂ ಕೇಳುವವರೇ ಇಲ್ಲವಾಗಿದೆ.
ಗೌಳಿಗಲ್ಲಿ ಮುಖ್ಯ ರಸ್ತೆ, ಹಿರೇಪೇಟೆ ಮುಖ್ಯ ರಸ್ತೆ, ಬಾಗಾರ ಪೇಟ ರಸ್ತೆ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಮಳೆಗಾಲಕ್ಕಿಂತ ಮುಂಚೆಯೇ ರಸ್ತೆಗಳ ದುರಸ್ತಿ ಮಾಡುವಂತೆ ಗುಂಡಿ ಮುಚ್ಚುವಂತೆ ಒತ್ತಾಯಿಸಿದರೂ ಪಾಲಿಕೆ ಅಧಿಕಾರಿಗಳು ಕಡೆಗಣಿಸಿದ್ದಲ್ಲದೇ ಮಾನ್ಸೂನ್ ಆರಂಭಗೊಂಡ ನಂತರ ಗುಂಡಿಗಳಿಗೆ ಖಡಿ ತುಂಬುವ ಕೆಲಸ ಕೈಗೊಳ್ಳಲಾಗಿದೆ. ಇದು ಸಮಸ್ಯೆ ಬಗೆಹರಿಸುವ ಬದಲು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
ಹಲವು ಕ್ರಾಸ್‌ಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ ಇಲ್ಲಿ ಮತ್ತೂಂದು ಸಮಸ್ಯೆ ಉದ್ಭವವಾಗಿದೆ. ಕಾಂಕ್ರೀಟ್ ರಸ್ತೆಗಳ ಅಕ್ಕಪಕ್ಕದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡದ್ದರಿಂದ ನೀರು ಮನೆಯೊಳಗೆ ನುಗ್ಗುತ್ತದೆ ಎಂಬುದು ಜನರ ಆರೋಪ.
ಹಳೇ ಹುಬ್ಬಳ್ಳಿ ಭಾಗದಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸಮರ್ಪಕ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ಜನರ ಆಗ್ರಹವಾಗಿದೆ. ಇನ್ನು ಕೆಲ ತಿಂಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯಲಿವೆ. ಹಳೇ ಹುಬ್ಬಳ್ಳಿ ಭಾಗದಲ್ಲಿ ಗುಂಡಿಗಳಿಂದ ತುಂಬಿದ ರಸ್ತೆಗಳು ಚುನಾವಣೆಯಲ್ಲಿ ಪ್ರಮುಖ ವಿಷಯವಾಗುವುದರಲ್ಲಿ ಸಂಶಯವೇ ಇಲ್ಲ.
ಸ್ಮಾರ್ಟ್ ಸಿಟಿ ಅನುಷ್ಠಾನ ಮಾಡುವ ಮೊದಲು ಹಳೇ ಹುಬ್ಬಳ್ಳಿ ಭಾಗದ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು. ರಸ್ತೆಗಳ ದುರಸ್ತಿಗೆ ಮನವಿ ಮಾಡಿದ್ದರೂ ಪಾಲಿಕೆಯಿಂದ ಸ್ಪಂದನೆ ಸಿಗುತ್ತಿಲ್ಲ. ವೈಜ್ಞಾನಿಕವಾಗಿ ರಸ್ತೆಗಳ ದುರಸ್ತಿ ಮಾಡಬೇಕಿದೆ. ರಸ್ತೆ ಪಕ್ಕದಲ್ಲಿ ನೀರು ಹರಿಯಲು ಸಮರ್ಪಕವಾಗಿ ಚರಂಡಿಗಳನ್ನು ನಿರ್ಮಿಸಬೇಕಿದೆ. • ಅನಿಲ್ ಬದ್ದಿ, ಸ್ಥಳೀಯ ನಿವಾಸಿ
•ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು ಕಷ್ಟ ಕಷ್ಟ•ಗುಂಡಿ ಮುಚ್ಚಲು ಖಡಿ ಹಾಕಲಾಗಿದೆಯಾದ್ರೂ ಕಿತ್ತೋಗಿದೆ
•ಬಾಣಂತಿಕಟ್ಟೆಗೆ ಸಂಪರ್ಕ ಕಲ್ಪಿಸುವ 3ನೇ ಕ್ರಾಸ್ ರಸ್ತೆ ಸ್ಥಿತಿ ಅಧ್ವಾನ
•ಒಳಚರಂಡಿ ಒಡೆದು ರಸ್ತೆಯಲ್ಲೇ ಹರಿಯುತ್ತಿದ್ದರೂ ಕೇಳ್ಳೋರೇ ಇಲ್ಲ
•ಗೌಳಿಗಲ್ಲಿ,ಹಿರೇಪೇಟೆ ಮುಖ್ಯ ರಸ್ತೆ, ಬಾಗಾರ ಪೇಟೆ ರಸ್ತೆ ಇದಕ್ಕೆ ಹೊರತಾಗಿಲ್ಲ
•ಮಳೆ ನೀರು ಹೋಗಲು ವ್ಯವಸ್ಥೆ ಮಾಡದ್ದರಿಂದ ಮನೆಯೊಳಗೆ ನುಗ್ಗುತ್ತೆ ನೀರು
•ವಿಶ್ವನಾಥ ಕೋಟಿ