Advertisement

ಜಾರಿ ಬೀಳದಂತೆ ನಡೆವವನೇ ಜಾಣ!

10:15 AM Jul 30, 2019 | Team Udayavani |

ಬೆಳಗಾವಿ: ನೆಲಕ್ಕೆ ಹೆಜ್ಜೆ ಇಡಲಾರದಷ್ಟು ರಾಡಿ; ರಭಸದಿಂದ ವಾಹನ ಬಂದರೆ ಮೈಗೆಲ್ಲ ಕೆಂಪು ನೀರಿನ ಸಿಂಚನ; ಮಳೆ ಜೋರಾದರೆ ಆಸರೆಗೂ ಏನಿಲ್ಲ; ಎದ್ನೋ ಬಿದ್ನೋ ಎಂಬಂತೆ ಓಡೋಡಿ ಬಸ್‌ ಹತ್ತಲು ಹರಸಾಹಸ.

Advertisement

ಇದು ಸ್ಮಾರ್ಟ್‌ ಸಿಟಿ ಹೆಗ್ಗಳಿಕೆಯ ನಗರ ಬಸ್‌ ನಿಲ್ದಾಣ ಬಳಿ ಕಂಡು ಬರುವ ದೃಶ್ಯ. ಇಲ್ಲಿಯ ನಗರ ಬಸ್‌ ನಿಲ್ದಾಣ ಕಾಮಗಾರಿ ಆರಂಭವಾಗುತ್ತಿದ್ದಂತೆ ಪಕ್ಕದಲ್ಲಿಯೇ ಸಿಕ್ಕ ಜಾಗದಲ್ಲಿ ನಗರ ಹಾಗೂ ಗ್ರಾಮೀಣ ಬಸ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಆದರೆ ಮಳೆಗಾಲ ಶುರು ಆದಾಗಿನಿಂದ ಈ ನಿಲ್ದಾಣ ಸಂಪೂರ್ಣ ಗಲೀಜಿನಿಂದ ಕೂಡಿ ಪ್ರಯಾಣಿಕರ ಸ್ಥಿತಿ ಶೋಚನೀಯವಾಗಿದೆ. ಈ ಸ್ಥಳದಲ್ಲಿ ಸ್ವಲ್ಪ ಎಚ್ಚರ ತಪ್ಪಿ ನಡೆದರೆ ಜಾರಿ ಬೀಳುವುದು ಖಚಿತ.

ಕೇಂದ್ರ ಬಸ್‌ ನಿಲ್ದಾಣ ಮುಂಭಾಗದಲ್ಲಿಯೇ ನೂತನ ಸಿಬಿಟಿ ಕಾಮಗಾರಿ ನಡೆದಿದೆ. ಕಳೆದ ಏಳೆಂಟು ತಿಂಗಳಿಂದ ಇಲ್ಲಿ ಕೆಲಸ ಶುರುವಾಗಿದೆ. ಪರ್ಯಾಯವಾಗಿ ಸದ್ಯ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಪಕ್ಕದಲ್ಲಿ ಲಭ್ಯವಾದ ಸ್ಥಳದಲ್ಲಿಯೇ ತಾತ್ಕಾಲಿಕ ಬಸ್‌ ನಿಲ್ದಾಣ ಮಾಡಲಾಗಿದೆ. ನಿತ್ಯ ಸಾವಿರಾರು ಜನ ಬೆಳಗಾವಿ ನಗರಕ್ಕೆ ಬಂದು ಹೋಗುತ್ತಾರೆ. ಇಲ್ಲಿರುವ ಇಕ್ಕಟ್ಟಾದ ಬಸ್‌ ನಿಲ್ದಾಣದಿಂದಾಗಿ ಜನರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.

ಕೆಂಪು ಮಣ್ಣಿನ ರಾಡಿ: ಜಿಟಿ ಜಿಟಿ ಮಳೆ ಆದಾಗಲಂತೂ ಇಲ್ಲಿ ನಡೆದಾಡುವುದೇ ಸಾಹಸಮಯ. ಸಾಂಬ್ರಾ ಮಾರ್ಗವಾಗಿ ಹೋಗುವ ಊರುಗಳಿಗಾಗಿ ಇರುವ ಬಸ್‌ ನಿಲ್ದಾಣದ ಈ ಸ್ಥಿತಿ ಹೇಳತೀರದಾಗಿದೆ. ಕೆಂಪು ಮಣ್ಣಿನಿಂದ ಕೂಡಿರುವ ಈ ತಾತ್ಕಾಲಿಕ ಬಸ್‌ ನಿಲ್ದಾಣ ಸಂಪೂರ್ಣ ರಾಡಿಯಿಂದ ಕೂಡಿದೆ. ತೆಗ್ಗು ಗುಂಡಿಗಳಿಂದಾಗಿ ನೀರು ನಿಂತು ಜನರು ಸಂಚರಿಸುವುದೇ ಕಷ್ಟಕರವಾಗಿದೆ. ಜೋರಾಗಿ ಬಸ್‌ ಬಂದರೆ ಗಲೀಜು ನೀರು ಮೈಮೇಲೆ ಸಿಡಿಯುವುದಂತೂ ಗ್ಯಾರಂಟಿ. ಅನೇಕ ಸಮಸ್ಯೆಗಳಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ಕಾಲಿಟ್ಟಲ್ಲೆಲ್ಲ ಗಲೀಜು: ಇಕ್ಕಟ್ಟಾದ ಬಸ್‌ ನಿಲ್ದಾಣದಲ್ಲಿ ಸುಳೇಭಾವಿ, ಮಾವಿನಕಟ್ಟಿ, ಬಸರೀಕಟ್ಟಿ, ಶಿಂಧೋಳ್ಳಿ, ಪಂತ ಬಾಳೇಕುಂದ್ರಿ, ಕರಡಿಗುದ್ದಿ ಬಸ್‌ಗಳು ನಿಲ್ಲುತ್ತವೆ. ಈ ಮಾರ್ಗದ ಬಸ್‌ ನಿಲ್ಲುವ ಜಾಗ ಸಂಪೂರ್ಣ ಹದಗೆಟ್ಟಿದ್ದರಿಂದ ಜನರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮವಸ್ತ್ರಗಳು, ಚಪ್ಪಲಿ, ಶೂಗಳನ್ನು ರಾಡಿಮಯ ಮಾಡಿಕೊಂಡೇ ಹೋಗಬೇಕಾದ ಸ್ಥಿತಿ ಇದೆ.

Advertisement

ಒಮ್ಮೆ ಏನಿಲ್ಲವೆಂದರೂ 20ಕ್ಕೂ ಹೆಚ್ಚುಗಳು ಇಲ್ಲಿಗೆ ಬಸ್‌ ಆಗಮಿಸುತ್ತವೆ. ಜನದಟ್ಟಣೆಯೂ ಹೆಚ್ಚಾಗುತ್ತಿರುವುದರಿಂದ ಜನರಿಗೆ ನಿಲ್ಲಲೂ ಸ್ಥಳಾವಕಾಶ ಇಲ್ಲದಂತಾಗಿದೆ. ನೂತನ ಸಿಬಿಟಿ ಕಾಮಗಾರಿ ನಡೆಯುತ್ತಿರುವ ಸುತ್ತಲೂ ತಗಡಿನ ಶೆಡ್‌ ಆವರಣ ಹಾಕಲಾಗಿದೆ. ಅದರ ಪಕ್ಕದಲ್ಲಿಯೇ ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛಾವಣಿ ಹಾಗೂ ಕೆಲವು ಕಡೆ ತಗಡಿನ ಶೆಡ್‌ನ‌ ವ್ಯವಸ್ಥೆ ಮಾಡಲಾಗಿದೆ. ತಗಡಿನ ಶೆಡ್‌ನ‌ ಮೇಲ್ಛಾವಣಿ ಕಡಿಮೆ ಇರುವುದರಿಂದ ಜನರಿಗೆ ನಿಲ್ಲಲೂ ಆಗುತ್ತಿಲ್ಲ. ಜಾಗ ಬಹಳ ಇಕ್ಕಟ್ಟಾಗಿದ್ದೇ ಇದಕ್ಕೆಲ್ಲ ಮುಖ್ಯ ಕಾರಣ.

ಶೌಚಾಲಯ ಇಲ್ಲದೇ ಕಿರಿಕಿರಿ: ಸಾವಿರಾರು ಜನ ನಗರಕ್ಕೆ ಬರುತ್ತಿದ್ದರೂ ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಶೌಚಾಲಯ ಇಲ್ಲದ್ದಕ್ಕೆ ಮಹಿಳೆಯರು ಅಲ್ಲಿಯೇ ಪಕ್ಕದಲ್ಲಿ ಕುಳಿತುಕೊಳ್ಳುತ್ತಿರುವುದು ನಾಚಿಕೆ ತರುವ ಸಂಗತಿಯಾಗಿದೆ. ಕೂಡಲೇ ಸಂಚಾರಿ ಶೌಚಾಲಯದ ವ್ಯವಸ್ಥೆ ಮಾಡಿ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

ಕೇಂದ್ರ ಬಸ್‌ ನಿಲ್ದಾಣ ಬಳಿಯ ತಾತ್ಕಾಲಿಕ ಬಸ್‌ ನಿಲ್ದಾಣದ ಪಕ್ಕದಲ್ಲಿಯೇ ಆಟೋ ನಿಲ್ಲಿಸಲಾಗುತ್ತಿದೆ. ನಿಲ್ದಾಣದೊಳಗೆ ಬಸ್‌ ಬರಬೇಕಾದರೆ ಆಟೋಗಳು ಹೆಚ್ಚಾಗಿ ನಿಂತಿದ್ದರಿಂದ ಕೆಲಹೊತ್ತು ಇಲ್ಲಿ ಸಂಚಾರ ದಟ್ಟಣೆ ಆಗುವುದು ಸಹಜವಾಗಿದೆ. ಸಾರಿಗೆ ಸಂಸ್ಥೆಯವರಿಗೆ ಈ ಅವ್ಯವಸ್ಥೆ ಕಾಣುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸ್ಮಾರ್ಟ್‌ ಸಿಟಿ ಬೆಳಗಾವಿಯ ತಾತ್ಕಾಲಿಕ ಸಿಬಿಟಿ ದುಸ್ಥಿತಿ ಹೇಳತೀರದಾಗಿದೆ. ಸುಳೇಭಾವಿ ಮಾರ್ಗದ ಬಸ್‌ಗಳು ನಿಲ್ಲುವ ಜಾಗದಲ್ಲಿ ಕಾಲಿಡಲಾರದಂತಾಗಿದೆ. ಕೂಡಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆ ಏನೆಂಬುದು ಅರ್ಥ ಮಾಡಿಕೊಳ್ಳಲಿ.•ಪ್ರಭು ಕವಾಶಿ,ಪ್ರಯಾಣಿಕರು

 

•ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next