ತಿಪಟೂರು: ಎನ್.ಎಚ್. 206 ರಾಷ್ಟ್ರೀಯ ಹೆದ್ದಾರಿಯನ್ನು ತುಮಕೂರು-ಹೊನ್ನಾವರದ ವರೆಗೆ ನೂರಾರು ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿಸಲು ನಡೆಸಲಾಗುತ್ತಿರುವ ನಿರ್ಮಾಣ ಕಾಮಗಾರಿಯು ತಾಲೂಕಿನಾದ್ಯಂತ ನಡೆಯುತ್ತಿದ್ದು, ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಯಾಗುತ್ತಿದೆ ಎಂದು ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕಾಮಗಾರಿಯು ಆಮೆ ವೇಗದಲ್ಲಿ ನಡೆಯುತ್ತಿದ್ದು, ಗುಣ ಮಟ್ಟದಿಂದ ಕೂಡಿಲ್ಲ. ಹೊಸದಾಗಿ ಹಾಕಿರುವ ಡಾಂಬರು ಕಿತ್ತು ಗುಂಡಿಗಳು ಬಿದ್ದಿದ್ದು, ಇದರಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ.
ಸೂಚನಾ ಫಲಕಗಳಿಲ್ಲ: ಅಧಿಕಾರಿಗಳು, ಗುತ್ತಿಗೆ ದಾರರು ನಿತ್ಯ ಓಡಾಡುವ ವಾಹನಗಳ ಸುರಕ್ಷಿತ ಪ್ರಯಾಣಕ್ಕೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಕಾಮಗಾರಿ ನಡೆಯು ತ್ತಿದ್ದರೂ ಯಾವುದೇ ಸೂಚನಾ ಫಲಕಗಳಿಲ್ಲ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ವಾಹನ ಗಳು ವೇಗವಾಗಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.
ಅಪಘಾತ: ಇನ್ನೂ ಸಾಕಷ್ಟು ಕಡೆಗಳಲ್ಲಿ ರಸ್ತೆ ಕಿರಿದಾಗಿದ್ದು, ತಿರುವುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಮುಂಬರುವ ವಾಹನಗಳೇ ಕಾಣಿಸುವು ದಿಲ್ಲ. ದಿಢೀರ್ ಕಾಣಿಸಿದರೂ ಸೈಡ್ ಕೊಡಲು ಸ್ಥಳಾವಕಾಶವೇ ಇಲ್ಲ. ಅಲ್ಲದೇ ರಸ್ತೆಯ ಹಲವು ಕಡೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಏಕಾಏಕಿ ವಾಹನಗಳು ಬಂದು ಗುಂಡಿಗೆ ಇಳಿಯು ವುದರಿಂದ ಅಪಘಾತಗಳುಂಟಾಗಿ ಸಾವುನೋವು ಗಳು ಸಂಭವಿಸುತ್ತಿವೆ.
ಬಹುತೇಕ ಕಡೆ ರಸ್ತೆ ಹಾಳು: ಸಾವಿರಾರು ಸಂಖ್ಯೆ ಯಲ್ಲಿ ಬಾರಿ ವಾಹನಗಳು, ಬಸ್‌ಗಳು, ಲಾರಿ, ಕಾರುಗಳು ಸೇರಿದಂತೆ ಸಾವಿರಾರು ದ್ವಿಚಕ್ರ ವಾಹನಗಳು ನಿತ್ಯ ಓಡಾಡುತ್ತವೆ. ಬಹುತೇಕ ಕಡೆಗಳಲ್ಲಿ ರಸ್ತೆ ಹಾಳಾಗಿರುವುದು, ರಸ್ತೆ ಅಕ್ಕಪಕ್ಕ ಕಾಮಗಾರಿ ನಡೆಯುತ್ತಿರುವುದರಿಂದ ಮಣ್ಣು, ಜಲ್ಲಿ-ಕಲ್ಲುಗಳು ರಸ್ತೆಗೆ ಬೀಳುವುದು, ಕಾಮಗಾರಿ ನಡೆಸುವಾಗ ಬಿದ್ದಿರುವ ಗುಂಡಿಗಳಿಂದ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಸೇರಿದಂತೆ ಆಯತಪ್ಪಿ ಬಿದ್ದು ಅಪಘಾತಗಳಾಗುತ್ತಿವೆ.
ನೂತನ ರಸ್ತೆ ಕಾಮಗಾರಿಯ ಪಕ್ಕದಲ್ಲಿ ಹಳೆ ರಸ್ತೆ ಇದ್ದು ಅಲ್ಲಲ್ಲಿ ತಿರುವು ತೆಗೆದುಕೊಳ್ಳಬೇಕಾಗಿದ್ದು, ಎಲ್ಲೂ ಸೂಚನಾ ಫಲಕಗಳಿಲ್ಲ. ತಿರುವು ತೆಗೆದು ಕೊಳ್ಳಬೇಕಾದ ಜಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿ ದ್ದರೂ ಅಧಿಕಾರಿಗಳು, ಗುತ್ತಿಗೆದಾರರು ಆ ಕಡೆ ಗಮನವನ್ನೇ ನೀಡದೆ ಅಧಿಕಾರಿಗಳು ಹಾಗೂ ಅಪಘಾತಕ್ಕೆ ಆಹ್ವಾನ ಮಾಡಿಕೊಡು ತ್ತಿದ್ದಾರೆ. ಇದರ ಪರಿಣಾಮ ಕಳೆದ ವಾರವೂ ಭೀಕರ ಅಪಘಾತ ಸಂಭವಿಸಿ 2 ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ ಹಲವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು, ಎಸ್ಪಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.