ಗಜೇಂದ್ರಗಡ: ಗಜೇಂದ್ರಗಡ-ಇಳಕಲ್ಲಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ತುಂಬೆಲ್ಲಾ ತೆಗ್ಗು ದಿನ್ನೆಗಳ ತುಂಬಿವೆ. ಇದರ ಪರಿಣಾಮ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಾತ್ಕಾಲಿಕ ದುರಸ್ತಿಗೆ ಮುಂದಾಗದೇ ಶಾಶ್ವತ ಪರಿಹಾರಕ್ಕೆ ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪಟ್ಟಣದಿಂದ ಕುಂಟೋಜಿಗೆ ತೆರಳುವ ರಸ್ತೆ ಡಾಂಬರ್ ಕಿತ್ತು ದೊಡ್ಡ, ದೊಡ್ಡ ತೆಗ್ಗುಗಳು ನಿರ್ಮಾಣವಾಗಿವೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕಷ್ಟ ಪಡುತ್ತಿದ್ದಾರೆ. ಈಗಾಗಲೇ ಈ ಹೆದ್ದಾರಿಯಲ್ಲಿ ಸಂಚರಿಸಿದ ಎಷ್ಟೋ ಬೈಕ್ ಸವಾರರು ಹೊಂಡದ ಸ್ವರೂಪ ತೆಗ್ಗು ದಿನ್ನೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಜತೆಗೆ ಕೆಲ ವಾಹನಗಳು ದುರಸ್ತಿಗೆ ಒಳಪಟ್ಟಿವೆ. ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರೂ ಯಾರೂ ಕೇಳುವರಿಲ್ಲದಂತಾಗಿದೆ ಎನ್ನುವುದು ವಾಹನ ಸವಾರರ ಅಳಲಾಗಿದೆ.
ಕುಂಟೋಜಿ, ಮ್ಯಾಕಲ್ಝರಿ, ಬೆನಕನಹಾಳ, ಮಡಿಕ್ಕೇರಿ, ಹನುಮಸಾಗರ ಸೇರಿದಂತೆ ಅನೇಕ ಹಳ್ಳಿಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಮೂಲಕ ಪಟ್ಟಣದ ಶಾಲಾ, ಕಾಲೇಜುಗಳನ್ನು ಅವಲಂಬಿಸಿದ್ದಾರೆ. ಹಾಳಾಗಿರುವ ಈ ಹೆದ್ದಾರಿ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಹಲವಾರು ಬಾರಿ ಮನವಿ, ಪ್ರತಿಭಟಿಸಿದರೂ ಸಹ ಕಾಟಾಚಾರಕ್ಕೆಂಬಂತೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ ಹೊರತು ಗುಂಡಿ ಮುಚ್ಚುವ ಶಾಶ್ವತ ಕಾರ್ಯಕ್ಕೆ ಮುಂದಾಗದಿರುವುದು ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ರಾಜ್ಯ ಹೆದ್ದಾರಿಯಿದ್ದ ರಸ್ತೆಯನ್ನು ಕೈಗಾದಿಂದ ಇಳಕಲ್ಲವರೆಗೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿದ್ದಾರೆ. ಆದರೆ ಈ ರಸ್ತೆ ಹಲವು ವರ್ಷಗಳಿಂದಲೂ ಅಭಿವೃದ್ಧಿ ಮಾತ್ರ ಕಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪುನಶ್ಚೇತನಕ್ಕೆ ಸರ್ಕಾರಗಳು ಕೋಟ್ಯಂತರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸದೇ ಕಳಪೆ ಕಾಮಗಾರಿ ಕೈಗೊಂಡ ಪರಿಣಾಮ ರಸ್ತೆ ಮಧ್ಯದಲ್ಲಿ ಇಂತಹ ಹೊಂಡಗಳು ನಿರ್ಮಾಣವಾಗಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಈ ರಸ್ತೆಯಲ್ಲಿ ಇಳಕಲ್ಲ ಹಾಗೂ ಬಲಕುಂದಿಯಿಂದ ಗಜೇಂದ್ರಗಡ ಮಾರ್ಗವಾಗಿ ಕಾರವಾರ, ದಕ್ಷಣ ಕನ್ನಡ ಜಿಲ್ಲೆಗೆ ತೆರಳುವ ಗ್ರಾನೈಟ್ ಕಲ್ಲುಬಂಡೆಗಳ ಸಾಗಣೆ ಲಾರಿಗಳು ಪಟ್ಟಣದ ಹೆದ್ದಾರಿಗೆ ಲಗ್ಗೆ ಇಟ್ಟಿದ್ದರಿಂದ ಗೌಡಗೇರಿ ಗ್ರಾಮದಿಂದ ಸುಮಾರ ಎರಡು ಕಿಲೋ ಮೀಟರ್ ಹೆದ್ದಾರಿ ಡಾಂಬರ್ ಕಿತ್ತು ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ರಸ್ತೆಯಲ್ಲಿ ಸಾಗುವ ವಾಹನಗಳು ಹೊಂಡದ ಸ್ವರೂಪವಾದ ತೆಗ್ಗಿನಲ್ಲಿ ಬಿದ್ದು ತೊಲಳಾಡುತ್ತಾ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಹಾಳಾಗಿರುವ ಈ ಹೆದ್ದಾರಿ ದುರಸ್ತಿಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಕ್ರಮ ಜರುಗಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
•ಡಿ.ಜಿ. ಮೋಮಿನ್