Advertisement

ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ

04:40 PM Aug 19, 2019 | Team Udayavani |

ಚನ್ನಪಟ್ಟಣ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕೆಂಬ ನಿಯಮವನ್ನು ಸಂಚಾರ ಪೊಲೀಸರು ಜಾರಿಗೊಳಿಸಿರುವ ಬೆನ್ನಲ್ಲೇ, ಹೆಲ್ಮೆಟ್ ಮಾರಾಟಗಾರರು ಕಳಪೆ ಗುಣಮಟ್ಟದ, ನಕಲಿ ಐಎಸ್‌ಐ ಮಾರ್ಕ್‌ ಹೊಂದಿರುವ ಹೆಲ್ಮೆಟ್‌ಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವುಗಳನ್ನೇ ವಾಹನ ಸವಾರರು ಖರೀದಿ ಮಾಡುತ್ತಿದ್ದಾರೆ.

Advertisement

ಐಎಂವಿ ಕಾಯ್ದೆಯ ಸೆಕ್ಷನ್‌ 129 ಹೇಳುವಂತೆ ರಕ್ಷಣಾತ್ಮಕ ಹೆಲ್ಮೆಟನ್ನು ದ್ವಿಚಕ್ರ ವಾಹನ ಸವಾರರು ಧರಿಸಬೇಕು. ಅವುಗಳ ಗುಣಮಟ್ಟ ಬಿಐಎಸ್‌ ಮಾನದಂಡಗಳಿಗೆ ಅನುಗುಣವಾಗಿರಬೇಕು. ಆದರೆ, ಆತುರಾತುರವಾಗಿ ತಾಲೂಕಿನಲ್ಲಿ ಜಾರಿಯಾಗಿರುವ ಹೆಲ್ಮೆಟ್ ಕಡ್ಡಾಯದ ಆಜ್ಞೆಗೆ ಸವಾರರು ಕಡಿಮೆ ಬೆಲೆಗೆ ಸಿಗುತ್ತಿರುವ ಹೆಲ್ಮೆಟ್‌ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.

100 ರೂ.ಗೆ ಸಿಗುತ್ತಿದೆ ಹೆಲ್ಮೆಟ್: ಹೌದು, ಕೇವಲ 100 ರೂ., ನೀಡಿದರೆ ಸಾಕು ಹೆಲ್ಮೆಟ್ ಸವಾರರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ವಾಹನ ಸವಾರರು ಹೇಳಿಕೇಳಿ ಕೇವಲ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾತ್ರ ಹೆಲ್ಮೆಟ್ ಮೊರೆಹೋಗುತ್ತಿರುವುದರಿಂದ ಮಾರಾಟಗಾರರೂ ಸಹ ಯಾವುದೇ ಅಡೆತಡೆಯಿಲ್ಲದೆ ಬಿಐಎಸ್‌ ಮಾನದಂಡಗಳನ್ನು ಗಾಳಿಗೆ ತೂರಿ ಮಾರಾಟ ಮಾಡುತ್ತಿದ್ದಾರೆ. 100 ರೂ.ಗಳಿಗೇ ಗ್ರಾಹಕರಿಗೆ ಸಿಗುತ್ತಿರುವ ಹೆಲ್ಮೆಟ್‌ನ ಮೂಲ ಬೆಲೆ ಎಷ್ಟಿರಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಅರ್ಧದಷ್ಟು ಹೆಚ್ಚಿನ ಬೆಲೆಗೆ ಯಾವುದೇ ವ್ಯಾಪಾರಸ್ತ ವಸ್ತು ಮಾರಾಟ ಮಾಡುವುದು ಸಂಪ್ರದಾಯ. ಅಂದರೆ ಮೂಲಬೆಲೆ ಕೇವಲ 50 ರೂ. ಆಗಿದೆ. ಅದರ ಗುಣಮಟ್ಟ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಗ್ರಾಹಕರು ತಿಳಿಯಲೇಬೇಕಿದೆ.

ತಲೆಗೆ ಹೆಲ್ಮೆಟ್ ಮುಚ್ಚಿದ್ದರೆ ಸಾಕು: ಇನ್ನು ಸಂಚಾರ ಪೊಲೀಸರು ಐಎಸ್‌ಐ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೆಳಗೆ ಬಿದ್ದರೆ ಒಡೆದೇ ಹೋಗುವ, ನೆಪಮಾತ್ರಕ್ಕೆ ಐಎಸ್‌ಐ ಎಂದು ಬರೆದುಕೊಂಡಿರುವ ಪ್ಲಾಸ್ಟಿಕ್‌ ಹೆಲ್ಮೆಟ್ ಅದ್ಯಾವ ಮಟ್ಟಿಗೆ ಸವಾರರ ತಲೆ ಕಾಯುತ್ತದೆಂಬುದರ ಬಗ್ಗೆ ಗಮನಹರಿಸದೆ ಸುಮ್ಮನಾಗುತ್ತಿದ್ದು, ಯಶಸ್ವಿಯೂ ಆಗಿದ್ದೇವೆ ಎಂದು ಬೀಗುತ್ತಿದ್ದಾರೆ.

ಮೊದಲು ತಲೆಗೆ ಹೆಲ್ಮೆಟ್ ಬರಲಿ, ಆನಂತರ ಗುಣಮಟ್ಟ ಪರಿಶೀಲಿಸೋಣ ಎನ್ನುವ ಮನೋಭಾವ ಪೊಲೀಸರದ್ದಾಗಿದೆ. ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾದ ಜವಾಬ್ದಾರಿ ಇದೆ. ಇದರಿಂದ ಆರಂಭದಲ್ಲೇ ಮಾನದಂಡಕ್ಕೆ ಅನುಗುಣವಾಗಿ ಹೆಲ್ಮೆಟ್ ಖರೀದಿ ಮಾಡುವಂತೆ ವಾಹನ ಸವಾರರಿಗೆ ತಿಳುವಳಿಕೆ ಮೂಡಿಸಬೇಕಾಗಿತ್ತು. ಆದರೆ, ಆ ಕೆಲಸ ಆಗಿಲ್ಲ, ಪರಿಣಾಮ ಕಳಪೆ ಹೆಲ್ಮೆಟ್‌ಗಳು ಸವಾರರ ತಲೆ ಏರುತ್ತಿವೆ.

Advertisement

ಠಾಣೆ ಎದುರೇ ಕಳಪೆ ಹೆಲ್ಮೆಟ್ ಮಾರಾಟ: ಇನ್ನೂ ಸೋಜಿಗದ ಸಂಗತಿ ಎಂದರೆ ಸಂಚಾರ ಪೊಲೀಸ್‌ ಠಾಣೆಯ ಎದುರಿಗೇ ಕಳಪೆ ಗುಣಮಟ್ಟದ, ಬಿಐಎಸ್‌ ಮಾನದಂಡ ಗಾಳಿಗೆ ತೂರಿರುವ ಹೆಲ್ಮೆಟ್‌ಗಳ ಮಾರಾಟ ಎಗ್ಗಿಲ್ಲದೆ ಸಾಗಿದೆ. ಬಹುತೇಕ ಕೇವಲ ತಲೆಯ ಮೇಲ್ಭಾಗವನ್ನು ಮುಚ್ಚುವ ಹೆಲ್ಮೆಟ್‌ಗಳೇ ಮಾರಾಟವಾಗುತ್ತಿವೆ. ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ ಎನ್ನಬಹುದಾಗಿದೆ.

ಇನ್ನೊಂದು ಬಾರಿ ಆಜ್ಞೆ ಮಾಡ್ತೀರಾ?: ಹೆಲ್ಮೆಟ್ ಕಡ್ಡಾಯ ಎಂಬುದು ರಾಜ್ಯದ ಮಹಾನಗರಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಅಲ್ಲಿ ಸದ್ಯ ಪಟ್ಟಣದಲ್ಲಿ ಬಿಕರಿಯಾಗುತ್ತಿರುವ ಕಳಪೆ ಗುಣಮಟ್ಟದ, ಬಿಐಎಸ್‌ ಗುಣಮಟ್ಟ ಗಾಳಿಗೆ ತೂರಿರುವ ಹೆಲ್ಮೆಟ್‌ಗಳ ಬಳಕೆಗೆ ನಿಷೇಧವಿದೆ. ಹಾಗೆಯೇ ಅವುಗಳನ್ನು ವಶಕ್ಕೆ ಪಡೆದುಕೊಂಡು ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಖರೀದಿ ಮಾಡುವಂತೆ ಈ ಹಿಂದೆಯೇ ಸೂಚಿಸಲಾಗಿದೆ. ಹೇಳಿಕೇಳಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಖರೀದಿ ಮಾಡುತ್ತಿರುವ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಳಸದಂತೆ ಇನ್ನೊಮ್ಮೆ ಆಜ್ಞೆ ಮಾಡುತ್ತೀರಾ ಎಂಬುದನ್ನು ಸ್ವತಃ ಸಂಚಾರ ಪೊಲೀಸರಿಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ತೋರ್ಪಡಿಕೆಗೆ ಹೆಲ್ಮೆಟ್ ಬಳಕೆ: ಕಾಟಾಚಾರಕ್ಕೆ ಅದರಲ್ಲೂ ದಂಡದಿಂದ ತಪ್ಪಿಸಿಕೊಳ್ಳಲು ಖರೀದಿ ಮಾಡುತ್ತಿರುವ ಹೆಲ್ಮೆಟ್ ಎಷ್ಟರಮಟ್ಟಿಗೆ ನಿಮ್ಮ ತಲೆಯನ್ನು ಕಾಯುತ್ತದೆ ಎಂಬುದನ್ನು ಖರೀದಿ ಮಾಡುವ ಮುನ್ನ ದ್ವಿಚಕ್ರ ವಾಹನ ಸವಾರರು ಯೋಚನೆ ಮಾಡಬೇಕಿದೆ. ನಿಜಕ್ಕೂ ಆ ಹೆಲ್ಮೆಟ್‌ಗಳು ನಿಮ್ಮ ತಲೆ ಕಾಯುವುದಿಲ್ಲ. ಬದಲಾಗಿ ಕೇವಲ ತೋರ್ಪಡಿಕೆಗೆ ಬಳಕೆಯಾಗುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಹಾಗಾಗಿ ಹೆಲ್ಮೆಟ್ ಖರೀದಿ ಮಾಡುವ ಮುನ್ನ ಒಮ್ಮೆ ಯೋಚನೆ ಮಾಡಿ ನಿಜಕ್ಕೂ ತಲೆಯನ್ನು ಉಳಿಸುವ ಶಿರಸ್ತ್ರಾಣಗಳನ್ನು ಬಳಸಲು ಸವಾರರು ಮುಂದಾಗಬೇಕಿದೆ.

 

● ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next