Advertisement

ತುಪ್ಪ ಬೇಕಾ ತುಪ್ಪ..?

02:43 PM Mar 22, 2020 | Suhan S |

ಹುಬ್ಬಳ್ಳಿ: ಛೋಟಾ ಮುಂಬೈ ಹೆಸರಿನಿಂದ ಕರೆಸಿಕೊಳ್ಳುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತುಪ್ಪದ ಹೆಸರಿನಲ್ಲಿ ವನಸ್ಪತಿ, ಪಾಮ್‌ ಎಣ್ಣೆ, ಕೊಬ್ಬು ಸೇರಿಸಿ ತಯಾರಿಸುವ ತುಪ್ಪದ ಮಾರಾಟ ಎಗ್ಗಿಲ್ಲದೇ ಸಾಗಿದೆ. ಗುಜರಾತ್‌ ಉತ್ಪನ್ನ ಎಂದು ಮಾರಾಟವಾಗುವ ಕಡಿಮೆ ಕಿಮ್ಮತ್ತಿನ ತುಪ್ಪಕ್ಕೆ ಇಲ್ಲಿ ಹೆಚ್ಚಿನ ಬೇಡಿಕೆ. ಗುಜರಾತಿನ ವಿವಿಧ ಬ್ರಾಂಡ್‌ಗಳ ಹೆಸರಿನಲ್ಲಿ ಕಡಿಮೆ ದರದಲ್ಲಿ ತುಪ್ಪ ಮಾರಾಟವಾಗುತ್ತಿದೆ.

Advertisement

ನಂದಿನಿ ಸೇರಿದಂತೆ ರಾಜ್ಯದ ಹಲವು ಕಂಪನಿಗಳು ಪ್ರತಿ ಲೀಟರ್‌ಗೆ 450ರಿಂದ 500 ರೂ. ತುಪ್ಪ ಮಾರಾಟ ಮಾಡಲು ಹೆಣಗುತ್ತಿವೆ. ಆದರೆ ಗುಜರಾತಿನಿಂದ ಸುಮಾರು 2000 ಕಿಮೀ ದೂರದಿಂದ ನಗರಕ್ಕೆ ಸಾಗಣೆ ಮಾಡಿ 350ರಿಂದ 400 ರೂ. ಪ್ರತಿ ಲೀಟರ್‌ನಂತೆ ತುಪ್ಪ ಮಾರಾಟವಾಗುತ್ತಿದೆ. ವ್ಯಾಪಾರಸ್ಥರಿಗೆ ಕಮಿಶನ್‌ ಕೊಟ್ಟು ಇಷ್ಟು ಕಡಿಮೆ ದರದಲ್ಲಿ ತುಪ್ಪ ನೀಡಲಾಗುತ್ತಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಕ್ಷೀರ ಕ್ರಾಂತಿ ಮಾಡಿದ, ದೇಶಕ್ಕೆ ಅಮುಲ್‌ನಂಥ ಬ್ರ್ಯಾಂಡ್‌ ನೀಡಿದ ಗುಜರಾತಿನದ್ದೆಂದು ಹೇಳಿ ಕಳಪೆ ಗುಣಮಟ್ಟದ ಕ್ಷೀರೋತ್ಪನ್ನ ಮಾರಾಟ ಸಾಗಿದೆ. ಆಕರ್ಷಕ ಪ್ಯಾಕಿಂಗ್‌ ಮೂಲಕ ಗ್ರಾಹಕರ ಗಮನ ಸೆಳೆಯಲಾಗುತ್ತದೆ. ಎಂಆರ್‌ಪಿ ಪ್ರತಿ ಲೀಟರ್‌ಗೆ 500ರೂ. ಎಂದು ನಮೂದಿಸಿ ಅದನ್ನು ಚೌಕಾಸಿಗೆ ಅನುಗುಣವಾಗಿ 350 ರೂ.ವರೆಗೂ ನೀಡುತ್ತಿರುವುದರಿಂದ ಗ್ರಾಹಕರಿಗೆ ಹಣ ಉಳಿತಾಯದ ಖುಷಿಯಾಗುತ್ತಿದೆ. ವ್ಯಾಪಾರಸ್ಥರಿಗೆ ಹೆಚ್ಚಿನ ಪ್ರಮಾಣದ ಕಮಿಶನ್‌ ನೀಡಿ ತುಪ್ಪವನ್ನು ಮಾರಾಟ ಮಾಡಲಾಗುತ್ತಿದೆ.

ಜನರು ಕಡಿಮೆ ಬೆಲೆ ನೋಡುತ್ತಾರೆಯೇ ಹೊರತು ಅರೋಗ್ಯದ ಬಗ್ಗೆ ಲಕ್ಷ್ಯ ಕೊಡುವುದು ಕಡಿಮೆ. ಜನರಿಗೆ ತುಪ್ಪ ಹಾಗೂ ವನಸ್ಪತಿ ಮಧ್ಯೆ ವ್ಯತ್ಯಾಸವೇ ತಿಳಿಯದಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ವ್ಯಾಪಾರಿಗಳು ತುಪ್ಪವನ್ನು ಬಿಕರಿ ಮಾಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ತುಪ್ಪದ ಮಾರಾಟ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.

ನಕಲಿ ಬ್ರ್ಯಾಂಡ್‌: ಒಂದೆಡೆ ಗುಜರಾತ್‌ ಸಂಸ್ಥೆಗಳ ಹೆಸರಿನಲ್ಲಿ ತುಪ್ಪ ಬಿಕರಿಯಾಗುತ್ತಿದ್ದರೆ, ಇನ್ನೊಂದೆಡೆ ಪ್ರತಿಷ್ಠಿತ ಸಂಸ್ಥೆಗಳ ಹೆಸರಿನಲ್ಲಿ ನಕಲಿ ತುಪ್ಪ ಕೂಡ ಮಾರಾಟವಾಗುತ್ತಿದೆ. ಇದರ ಪತ್ತೆ ಕಷ್ಟಕರವಾಗಿದೆ. ನಂದಿನಿ, ಶ್ರೀಕೃಷ್ಣ, ಜಿಆರ್‌ಬಿ ಮೊದಲಾದ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಕಳಪೆ ಗುಣಮಟ್ಟದ ತುಪ್ಪ ಮಾರಾಟ ಮಾಡಲಾಗುತ್ತದೆ. ಆಹಾರ ಹಾಗೂ ಖಾದ್ಯ ತಪಾಸಣೆ ಸಮರ್ಪಕ ರೀತಿಯಲ್ಲಿ ನಡೆಯದಿರುವುದು ಕಳಪೆ ಆಹಾರ ಪದಾರ್ಥಗಳು ನಿರಂತರ ಬಿಕರಿಯಾಗಲು ಮುಖ್ಯ ಕಾರಣವಾಗಿದೆ. ಕಡಿಮೆ ಹಣದಲ್ಲಿ ಮಾರಾಟವಾಗುತ್ತಿರುವ ತುಪ್ಪವನ್ನು ಪರೀಕ್ಷೆಗೊಳಪಡಿಸಿ ಉತ್ಪಾದಕರು ಹಾಗೂ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಜನರ ಆರೋಗ್ಯದೊಂದಿಗೆ ಚೆಲ್ಲಾಟ ಆಡುವುದನ್ನು ತಡೆಯಬೇಕಿದೆ.

Advertisement

ತುಪ್ಪದ ಹೆಸರಿನಲ್ಲಿ ಮಾರಾಟವಾಗುವುದೇನು?: ಒಂದು ಲೀಟರ್‌ ತುಪ್ಪ ಸಿದ್ಧವಾಗಲು ಕನಿಷ್ಟ 25 ಲೀಟರ್‌ ಹಾಲು ಬೇಕಾಗುತ್ತದೆ. ಒಂದು ಲೀಟರ್‌ ಹಾಲಿಗೆ ಮಾರುಕಟ್ಟೆಯಲ್ಲಿ ಕನಿಷ್ಟ 40 ರೂ. ಬೆಲೆಯಿದೆ. ತುಪ್ಪವನ್ನು ಹೊರ ರಾಜ್ಯದಿಂದ ತರಿಸಿ 350 ರೂ.ಗೆ ಹೇಗೆ ನೀಡಲಾಗುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಹಾಗಾದರೆ ತುಪ್ಪದ ಹೆಸರಿನಲ್ಲಿ ಮಾರಾಟವಾಗುತ್ತಿರುವುದಾದರೂ ಏನು? ಎಂಬ ಬಗ್ಗೆ ಚಿಂತನೆ ನಡೆಸಬೇಕು.

ಇಲ್ಲೇ ಉತ್ಪಾದನೆ! : ಕಳಪೆ ಗುಣಮಟ್ಟದ ತುಪ್ಪ ಯಾವುದೇ ಬೇರೆ ರಾಜ್ಯದಿಂದ ಬರುವುದಿಲ್ಲ. ಇಲ್ಲಿಯೇ ಸ್ಥಳೀಯವಾಗಿ ತಯಾರು ಮಾಡಿ ಮಾರಾಟ ಮಾಡಲಾಗುತ್ತದೆ. 2000 ಕಿಮೀ ದೂರದಿಂದ ಸಾಗಣೆ ಮಾಡಿ ಕಡಿಮೆ ದರದಲ್ಲಿ ಯಾವುದೇ ಗುಣಮಟ್ಟದ ತುಪ್ಪವನ್ನೂ ನೀಡಲು ಸಾಧ್ಯವಿಲ್ಲ. ಗುಜರಾತ್‌ ಉತ್ಪನ್ನ ಎಂದು ಸ್ಟಿಕ್ಕರ್‌ ಅಂಟಿಸಿ ತುಪ್ಪ ಮಾರಾಟ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ತುಪ್ಪ ತಯಾರಿಕೆಯಲ್ಲಿ ಬಳಕೆ ಮಾಡುವ ಸಾಮಗ್ರಿಗಳಿಗರ ಅನುಗುಣವಾಗಿ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ವನಸ್ಪತಿ, ಪಾಮ್‌ ಎಣ್ಣೆ ಬಳಕೆ ಮಾಡಿದರೆ ಹಲವರಿಗೆ ಆರಂಭದಲ್ಲಿ ಗಂಟಲು ಕಟ್ಟಬಹುದು. ಕೆಮ್ಮು ಶುರುವಾಗಬಹುದು. ಅಲ್ಲದೇ ಇದು ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚಾಗಲು ಕೂಡ ಕಾರಣವಾಗಬಹುದು. ದೀರ್ಘ‌ ಅವಧಿವರೆಗೆ ಕಳಪೆ ಗುಣಮಟ್ಟದ ತುಪ್ಪ ಬಳಕೆ ಮಾಡಿದರೆ ಆರೋಗ್ಯದ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ.-ಡಾ| ದಿನೇಶ ತೋಪಲಗಟ್ಟಿ, ವೈದ್ಯ‌

ಕಳಪೆ ತುಪ್ಪ ಮಾರಾಟ ಕುರಿತು 4 ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಳಪೆ ತುಪ್ಪದಲ್ಲಿ ವನಸ್ಪತಿ ಹಾಗೂ ಪಾಮ್‌ ಎಣ್ಣೆ ಮಿಶ್ರಣ ಮಾಡಲಾಗುತ್ತದೆ. ಇದರ ಮೂಲಕ ಜನರಿಗೆ ಮೋಸ ಮಾಡಲಾಗುತ್ತಿದೆ. ತುಪ್ಪ ಉತ್ಪಾದಕ ಕಂಪನಿಗಳ ಮಾರಾಟ ಪ್ರತಿನಿಧಿಗಳು, ಮಾರುಕಟ್ಟೆ ವಿಭಾಗದ ಸಿಬ್ಬಂದಿ ಸಹಕಾರ ನೀಡಿದರೆ ನಕಲಿ ಕಂಪನಿಗಳು ಹಾಗೂ ಕಳಪೆ ಗುಣಮಟ್ಟದ ತುಪ್ಪ ಉತ್ಪಾದಕರನ್ನು ಹಾಗೂ ಮಾರಾಟಗಾರರನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ನಂದಿನಿ ಸಂಸ್ಥೆ ಸಹಕಾರ ನೀಡಿದ್ದರಿಂದ ಕೆಲವೆಡೆ ನಕಲಿ ಬ್ರ್ಯಾಂಡ್‌ ತುಪ್ಪ ಪತ್ತೆ ಮಾಡಲು ಸಾಧ್ಯವಾಗಿದೆ. ಜನರು ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. -ಶಿವಕುಮಾರ, ಫುಡ್‌ ಇನ್ಸ್‌ಪೆಕ್ಟರ್‌, ಹುಬ್ಬಳ್ಳಿ

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next