Advertisement

ಕಳಪೆ ಗುಣಮಟ್ಟ; ವಿತರಣೆಗೆ ಬ್ರೇಕ್‌ ನೀಡಿದ ಇಲಾಖೆ

01:40 AM Dec 11, 2018 | Karthik A |

ವೇಣೂರು: ಗ್ರಾಮೀಣ ಪ್ರದೇಶದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ವಿತರಣೆ ಮಾಡುವ ಸೈಕಲ್‌ಗ‌ಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರಸಕ್ತ ಸಾಲಿನಲ್ಲಿ ಶಾಲೆಗಳಿಗೆ ರವಾನಿಸಲಾದ ಸೈಕಲ್‌ಗ‌ಳು ಹೆಚ್ಚಿನ ಶಾಲೆಯ ಗೋಡೌನ್‌ಗಳಲ್ಲಿ ಕಳೆದ ಸುಮಾರು 15 ದಿನಗಳಿಂದ ರಾಶಿ ಬಿದ್ದಿದ್ದು, ಕಳಪೆ ಗುಣಮಟ್ಟದ ಕಾರಣದಿಂದ ಇಲಾಖೆಯೇ ವಿತರಣೆಗೆ ಬ್ರೇಕ್‌ ಹಾಕಿದೆ. ಈಗಾಗಲೇ ತರಗತಿಗಳು ಪ್ರಾರಂಭವಾಗಿ ಅರ್ಧ ವರ್ಷ ಕಳೆದಿದ್ದು, 8ನೇ ತರಗತಿ ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ.

Advertisement

ಕಾರಣವೇನು?
2006-07ರಲ್ಲಿ ಪ್ರೌಢ ಶಿಕ್ಷಣಕ್ಕೆ ಕಾಲಿಡುವ 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ಉಚಿತ ಸೈಕಲ್‌ ವಿತರಣೆ ಯೋಜನೆಯನ್ನು ಜಾರಿಗೆ ತರಲಾಯಿತು. ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್‌ ಕುಟುಂಬದ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮೊದಲಾಗಿ ಈ ಯೋಜನೆ ಲಭಿಸಿತ್ತು. ಆದರೆ ಗ್ರಾಮೀಣ ಭಾಗದ ದೂರದ ಹಾಗೂ ಬಸ್‌ ಸೌಲಭ್ಯವೇ ಇಲ್ಲದ ಊರಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಯೋಜನೆಯಿಂದ ವಂಚಿತರಾಗಿದ್ದರು. ಇದನ್ನು ಮನಗಂಡ ಸರಕಾರ 2007- 08ರಲ್ಲಿ ಈ ಯೋಜನೆಯನ್ನು ವಿಸ್ತರಿಸಿ 8ನೇ ತರಗತಿಗೆ ಕಾಲಿಡುವ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಲಭಿಸುವಂತೆ ಮಾಡಲಾಯಿತು. ಆದರೆ ವಿತರಣೆ ಮಾಡುವ ಈ ಸೈಕಲ್‌ಗ‌ಳು ಕಳಪೆ ಗುಣಮಟ್ಟದ್ದು ಎಂಬ ಆರೋಪಗಳು ಈ ಹಿಂದಿನಿಂದಲೂ  ಕೇಳಿ ಬಂದಿದ್ದವು.

ಗುಣಮಟ್ಟ ಪರಿಶೀಲಿಸಿಲ್ಲ
ಪ್ರಸಕ್ತ ಸಾಲಿನಲ್ಲಿ 4 ಕಂಪೆನಿಗಳಿಗೆ ಸೈಕಲ್‌ ರಚನೆಗೆ ಸರಕಾರ ಟೆಂಡರ್‌ ನೀಡಿತ್ತು ಎನ್ನಲಾಗುತ್ತಿದೆ. ಸೈಕಲ್‌ನ ಗುಣ ಮಟ್ಟವನ್ನು ಪರಿಶೀಲಿಸದೆ ನೇರವಾಗಿ ಶಾಲೆಗಳಿಗೆ ರವಾವಿದ್ದೇ ಇದೀಗ ಸಮಸ್ಯೆಗೆ ಕಾರಣವಾಗಿದೆ. ಈ ಮಧ್ಯೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ವಿತರಣೆಯನ್ನೂ ಮಾಡಲಾಗಿದೆ. ಸೈಕಲ್‌ ವಿತರಣೆಗೆ ತಡೆ ನೀಡಿರುವ ಇಲಾಖೆಯು ಮುಂದೆ ಯಾವ ಕ್ರಮ ಜರಗಿಸುತ್ತದೆ ಎಂಬುದು ಕಾದುನೋಡಬೇಕಿದೆ.

ವಿತರಣೆಯೂ ವಿಳಂಬ
ಚುನಾವಣೆ ನೀತಿ ಸಂಹಿತೆಯಿಂದ ಸೈಕಲ್‌ ವಿತರಣೆ ವಿಳಂಬವಾಗುತ್ತಿದೆ ಎಂದು ಕಳೆದ ಆಗಸ್ಟ್‌ ತಿಂಗಳಲ್ಲಿ ಹೇಳುತ್ತಿದ್ದ ಅಧಿಕಾರಿಗಳು, ಬಳಿಕ ಹೊಸ ಸರಕಾರದ ಅನುಮೋದನೆಗೆ ಕಾಯಬೇಕಿದೆ ಎಂದು ಹೇಳುತ್ತಿದ್ದರು. ಆದರೆ ದಸರಾ ರಜೆ ಕಳೆದರೂ ಬಿಡುಗಡೆ ಭಾಗ್ಯ ಆಗಿರಲಿಲ್ಲ. ಆದರೆ ಇದೀಗ ಅರ್ಧ ಪ್ರಸಕ್ತ ಸಾಲಿನ ವರ್ಷ ಕಳೆದು ಬಿಡುಗಡೆಗೊಂಡಿದೆ. ಆದರೆ ಮಕ್ಕಳಿಗೆ ಪಡೆಯಲು ವಿಘ್ನ ಎದುರಾಗಿದೆ.

ವೆಚ್ಚವೂ ಅಧಿಕವಾಗಿದೆ
2018-19ನೇ ಶೈಕ್ಷಣಿಕ ವರ್ಷದಲ್ಲಿ 185 ಕೋಟಿ ರೂ. ವೆಚ್ಚದಲ್ಲಿ ಒಟ್ಟು 5,14,585 ಸೈಕಲ್‌ಗ‌ಳನ್ನು ತಯಾರಿಸಲಾಗಿದೆ. ಅದರಲ್ಲಿ 2,52,893 ಹುಡುಗಿಯರಿಗೆ ಹಾಗೂ 2,61,692 ಸೈಕಲ್‌ ಹುಡುಗರಿಗೆ. 2017-18ರ ಶೈಕ್ಷಣಿಕ ವರ್ಷದಲ್ಲಿ ಹುಡುಗರ ಸೈಕಲ್‌ ಬೆಲೆ ರೂ. 3,300 ಮತ್ತು ಹುಡುಗಿಯರಿಗೆ ರೂ. 3,500 ರೂ. ವೆಚ್ಚದಲ್ಲಿ ಸೈಕಲನ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಕಂಪೆನಿಯು ಶೇ. 12ರಷ್ಟು ಜಿಎಸ್‌ಟಿ ಮತ್ತು ಉಕ್ಕಿನ ಕಚ್ಚಾ ವಸ್ತುಗಳ ಬೆಲೆಯೇರಿಕೆ ಕಾರಣ ನೀಡಿದ್ದು, ಹುಡುಗರ ಸೈಕಲ್‌ ಬೆಲೆ ರೂ. 3,600 ಮತ್ತು ಬಾಲಕಿಯರಿಗೆ ರೂ. 3,900 ವೆಚ್ಚದ ಸೈಕಲ್‌ ತಯಾರಿಸಲಾಗಿದೆ.

Advertisement

ಸರಕಾರದ ಉದ್ದೇಶ
– ಹೆಣ್ಣುಮಕ್ಕಳ ಪ್ರೌಢಶಿಕ್ಷಣಕ್ಕೆ ಪ್ರೋತ್ಸಾಹಿಸುವುದು
– ಶಾಲೆಗೆ ತಲುಪಲು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದು
– ಶಿಕ್ಷಣಕ್ಕೆ ಪ್ರೇರಣೆ, ಮಕ್ಕಳಲ್ಲಿ ದೈಹಿಕ ಶಕ್ತಿ ವರ್ಧಿಸುವುದು
– ಪ್ರಯಾಣ ಸಮಯ ಕಡಿಮೆ ಮಾಡುವುದು ವಿಫಲವೆನ್ನಲು ಕಾರಣ
– ಗುಣಮಟ್ಟದ ಕೊರತೆ
– ಗ್ರಾಮೀಣ ಭಾಗದಲ್ಲಿ ಸಮರ್ಪಕ ರಸ್ತೆ ಸೌಲಭ್ಯದ ಕೊರತೆ
– ಹುಡುಗಿಯರು ಸೈಕಲ್‌ ಸವಾರಿಗೆ ಹಿಂದೇಟು ಹಾಕುತ್ತಿರುವುದು
– ಮಕ್ಕಳ ಸೈಕಲ್‌ ಸವಾರಿಗೆ ಹೆತ್ತವರ ಹಿಂದೇಟು
– ಹಳ್ಳಿಗಳಲ್ಲಿ  ಹತ್ತಿರದಿಂದ ಸಂಪರ್ಕಿಸುವ ಕಾಲುದಾರಿ

ಸರಕಾರದ ನಿಲುವಿನಂತೆ ಕ್ರಮ
ಈಗಾಗಲೇ ಶಾಲೆಗಳಿಗೆ ರವಾನಿಸಲಾಗಿರುವ ಸೈಕಲ್‌ಗ‌ಳ ಗುಣಮಟ್ಟ ಉತ್ತಮವಾಗಿಲ್ಲ. ಹೀಗಾಗಿ ಶಾಲೆಗಳಲ್ಲಿ  ಸೈಕಲ್‌ ವಿತರಣೆ ಮಾಡದಂತೆ ಸರಕಾರದಿಂದಲೇ ಆದೇಶ ಬಂದಿದೆ. ಆದೇಶ ಬರುವ ಮೊದಲು ಕೆಲವು ಶಾಲೆಗಳಲ್ಲಿ ವಿತರಣೆ ಮಾಡಲಾಗಿದೆ. ಸರಕಾರದ ನಿಲುವು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ.
– ರಮೇಶ್‌ ಕೆ., ಶಿಕ್ಷಣ ಸಂಯೋಜಕರು, ಬೆಳ್ತಂಗಡಿ

ಚರ್ಚೆ ಬಳಿಕ ತೀರ್ಮಾನ
ಶಾಲಾ ಮಕ್ಕಳಿಗೆ ವಿತರಿಸುವ ಸೈಕಲ್‌ನ ಗುಣಮಟ್ಟ ಕೆಟ್ಟದಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಿಂದಿನಿಂದಲೂ ದೂರು ನೀಡುತ್ತಲೇ ಬಂದಿದ್ದರು. ಕಂಪೆನಿ ಉತ್ತಮವಾಗಿದ್ದರೂ ಶಾಲೆಗಳಿಗೆ ಪೂರೈಕೆ ಮಾಡುವ ಸೈಕಲ್‌ ಕಳಪೆ ಮಟ್ಟದ್ದು. ಈ ಬಾರಿ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಸರಕಾರವೇ ವಿತರಣೆಗೆ ತಡೆಯೊಡ್ಡಿದೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಇನ್ನೆರಡು ದಿನಗಳಲ್ಲಿ ಮುಂದಿನ ಕ್ರಮದ ಬಗ್ಗೆ ಮಾಹಿತಿ ದೊರೆಯಲಿದೆ. 
– ಪಿ. ಧರಣೇಂದ್ರ ಕುಮಾರ್‌, ಜಿ.ಪಂ., ಸದಸ್ಯರು

— ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next