ಕಲಘಟಗಿ: ಸಾಧನೆ ಮಾಡಲು ಬಡತನ ಅಡ್ಡಿಯಾಗದು ಎಂಬುದನ್ನು ಮಿಶ್ರಿಕೋಟಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ರುಜುವಾತು ಮಾಡಿದ್ದಾಳೆ. ಮಿಶ್ರಿಕೋಟಿಯ ಸಹಕಾರಿ ಶಿಕ್ಷಣ ಸಂಸ್ಥೆಯ ಶಿವಪ್ಪಣ್ಣ ಜಿಗಳೂರ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಓದುತ್ತಿದ್ದ ಬಡ ಕೂಲಿ ಕಾರ್ಮಿಕನ ಮಗಳಾದ ಪೂಜಾ ನಾಗಲಿಂಗಪ್ಪ ಕಂಬಾರ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ 625ಕ್ಕೆ 586(ಶೇ.93.76) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕನ್ನಡ 123, ಇಂಗ್ಲಿಷ್ 98, ಹಿಂದಿ 86, ಗಣಿತ 96, ವಿಜ್ಞಾನ 85 ಹಾಗೂ ಸಮಾಜ ವಿಜ್ಞಾನಕ್ಕೆ 98 ಅಂಕ ಗಳಿಸಿದ್ದಾಳೆ. ಇವಳ ತಂದೆ ನಾಗಲಿಂಗಪ್ಪ ಕಂಬಾರ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಹೊಟ್ಟೆಪಾಡಿಗೆ ವೃತ್ತಿ ಅರಸಿ 12 ವರ್ಷಗಳ ಹಿಂದೆ ಮಿಶ್ರಿಕೋಟಿ ಗ್ರಾಮಕ್ಕೆ ಬಂದಿದ್ದಾರೆ.
ಒಬ್ಬ ಗುತ್ತಿಗೆದಾರರ ಹತ್ತಿರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಗ ಅಭಿಷೇಕ ಬಾಗಲಕೋಟೆ ಜಿಲ್ಲೆಯ ಕೇರೂರಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 95 ಅಂಕಗಳನ್ನು ಗಳಿಸಿದ್ದು, ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಈತನಿಗೆ ಪಿಯುಸಿ ಪ್ರಥಮ ವರ್ಗಕ್ಕೆ ಉಚಿತ ಪ್ರವೇಶ ಸಿಕ್ಕಿದೆ.
ತಾಯಿ ಮಾಲಾ ಅವರು ಪಿಯುಸಿ ವರೆಗೆ ಓದಿದ್ದು ತಮ್ಮ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪೂಜಾ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೂ ಸಹಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದಾಳೆ. ಅಲ್ಲಿನ ಪರಿಸರ, ಉತ್ತಮ ಗುಣಮಟ್ಟದ ಶಿಕ್ಷಣ, ಗುರುಗಳ ವಿಶೇಷ ಕಾಳಜಿಯಿಂದ ತಾನು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಯಿತು ಎಂಬುದು ಆಕೆಯ ಹೇಳಿಕೆ.
ಧಾರವಾಡದ ಕಟ್ಟಿಮನಿ ಪ್ರತಿಷ್ಠಾನದಿಂದ ಈಕೆಗೆ 3 ವರ್ಷ ಅಮೂಲ್ಯವಾದ ಪುಸಕ್ತಗಳು ದೊರೆತಿವೆ. ಪಿಯುಸಿಯಲ್ಲಿ ವಿಜ್ಞಾನ ಅಧ್ಯಯನ ಮಾಡಿ, ಮುಂದೆ ವೈದ್ಯಳಾಗುವ ಕನಸನ್ನು ಹೊಂದಿದ್ದಾಳೆ. ವಿದ್ಯಾಪೋಷಕ ಪರೀಕ್ಷೆ ಬರೆದಿದ್ದು ಸಹಾಯ ಸಿಗುವ ಭರವಸೆ ಇದೆ. ಹಾಗೆಯೇ ಆಕೆಯ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ದೊರೆತರೆ ಅನುಕೂಲವಾಗಲಿದೆ ಎನ್ನುತ್ತಾರೆ ನಾಗಲಿಂಗಪ್ಪ.