Advertisement

ಜಿಲ್ಲೆಯಲ್ಲೂ ಜನೌಷಧ ಮಳಿಗೆಗಳಿಗೆ ಅನಾರೋಗ್ಯ

03:40 AM Jun 28, 2018 | Karthik A |

ಮಂಗಳೂರು: ಬ್ರ್ಯಾಂಡೆಡ್‌ ಔಷಧಗಳು ಕೈಗೆಟಕುವ ಬೆಲೆಯಲ್ಲಿ ಸಿಗುತ್ತವೆ ಎಂಬ ಬೋರ್ಡ್‌ ಹಾಕಲಾಗಿದೆ. ಆದರೆ ಒಳ ಹೋದರೆ ‘ಸ್ಟಾಕ್‌ ಖಾಲಿಯಾಗಿದೆ’ ಎಂಬ ಉತ್ತರ ಬರುತ್ತದೆ! ಬಡವನ ಸದೃಢ ಆರೋಗ್ಯಕ್ಕಾಗಿ ಆರಂಭವಾದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎರಡು ಜನಪ್ರಿಯ ಯೋಜನೆಗಳಾದ ಜನೌಷಧ ಪೂರೈಕೆ ಕೇಂದ್ರಗಳೇ ಈಗ ‘ಅನಾರೋಗ್ಯ’ಕ್ಕೆ ಒಳಗಾಗಿವೆ. ಬಡವರಿಗೆ ಗುಣಮಟ್ಟದ ಔಷಧಗಳು ಕಡಿಮೆ ಬೆಲೆಯಲ್ಲಿ ಸಿಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಆರಂಭಿಸಿದ ‘ಜನ ಸಂಜೀವಿನಿ ಜೆನರಿಕ್‌’ ಮತ್ತು ‘ಜನೌಷಧ’ ಕೇಂದ್ರಗಳನ್ನು ದ. ಕ. ಜಿಲ್ಲೆಯಲ್ಲಿಯೂ ತೆರೆಯಲಾಗಿದೆ. ಫಾರ್ಮಸಿಗಳಲ್ಲಿ ದೊರೆಯುವ ಎಲ್ಲ ಬ್ರ್ಯಾಂಡೆಡ್‌ ಔಷಧಗಳು ಈ ಔಷಧ ಕೇಂದ್ರಗಳಲ್ಲಿ ಕನಿಷ್ಠ ಶೇ.50 ಮತ್ತು ಗರಿಷ್ಠ ಶೇ.90ರ ವರೆಗೆ ರಿಯಾಯಿತಿಯಲ್ಲಿ ದೊರೆಯಬೇಕು. ವಿಪರ್ಯಾಸವೆಂದರೆ ಕಡಿಮೆ ಬೆಲೆಯಲ್ಲಿ ಸಿಗಬೇಕಾದ ಗುಣಮಟ್ಟದ ಔಷಧಗಳು ಈಗ ಜಿಲ್ಲೆಯ ಯಾವ ಜನೌಷಧ ಕೇಂದ್ರಗಳಲ್ಲಿಯೂ ದೊರೆಯುತ್ತಿಲ್ಲ. ಜಿಲ್ಲೆಯಾದ್ಯಂತ ಸುಮಾರು 10ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. ಯಾವುದೇ ಕೇಂದ್ರದಲ್ಲಿಯೂ ಸಮರ್ಪಕವಾಗಿ ಅಗತ್ಯ ಔಷಧಗಳು ದೊರೆಯುತ್ತಿಲ್ಲ. ಹೀಗಾಗಿ ಬಹುತೇಕ ಎಲ್ಲ ಜನೌಷಧ ಕೇಂದ್ರಗಳು ನಾಮಕೇವಾಸ್ತೆ ಎಂಬಂತಾಗಿವೆ.

Advertisement

ಗುಣಮಟ್ಟದ ಜೆನರಿಕ್‌ ಔಷಧಗಳ ವಿತರಣೆಗಾಗಿ ಕೇಂದ್ರ ಸರಕಾರದಿಂದ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರಕಾರದ ಮುಖಾಂತರ ಔಷಧಗಳು ಫ್ಯಾಕ್ಟರಿಗಳಿಂದ ನೇರವಾಗಿ ರಾಜ್ಯದ ಹುಬ್ಬಳ್ಳಿಗೆ ಪೂರೈಕೆಯಾಗಿ ಅಲ್ಲಿಂದ ಎಲ್ಲ ಜನೌಷಧ ಕೇಂದ್ರಗಳಿಗೆ ವಿತರಣೆಯಾಗುತ್ತದೆ. ಆದರೆ ಆರಂಭದ ದಿನಗಳಲ್ಲಿ ಚೆನ್ನಾಗಿದ್ದ ಪೂರೈಕೆ ಕ್ರಮೇಣ ಕಳಪೆಯಾಗಿದೆ. ಪೂರೈಕೆಯ ಬಗ್ಗೆ ವಿತರಕರನ್ನು ಜನೌಷಧ ಕೇಂದ್ರಗಳ ಸಿಬಂದಿ ಪ್ರಶ್ನಿಸಿದರೆ ಸ್ಟಾಕ್‌ ಖಾಲಿಯಾಗಿದೆ ಎಂಬ ಉತ್ತರ ಲಭಿಸುತ್ತದೆ. ಕೇಂದ್ರಗಳ ಸಿಬಂದಿ ಗ್ರಾಹಕರಿಗೂ ಅದೇ ಉತ್ತರವನ್ನು ನೀಡುತ್ತಿದ್ದಾರೆ.

ರಾಜ್ಯ ಮತ್ತು ಕೇಂದ್ರದ ಸಹಯೋಗದಲ್ಲಿ ನಡೆಯುತ್ತಿರುವ ಜನ ಸಂಜೀವಿನಿ ಮಳಿಗೆಗಳಲ್ಲಿ ಕಡಿಮೆ ಬೆಲೆಯಲ್ಲಿ ಬ್ರ್ಯಾಂಡೆಡ್‌ ಜನರಿಕ್‌ ಔಷಧಗಳು ದೊರೆಯುವುದರಿಂದ ಇಲ್ಲಿಯೂ ಬೇಡಿಕೆ ಹೆಚ್ಚಿದೆ. ಆದರೆ ಕಳೆದೆರಡು ತಿಂಗಳಿನಿಂದ ಪೂರೈಕೆ ತೀರಾ ಕಡಿಮೆ ಇದೆ ಎನ್ನುತ್ತಾರೆ ಲೇಡಿಗೋಷನ್‌ ಜನರಿಕ್‌ ಔಷಧ ಕೇಂದ್ರದ ಮೇಲ್ವಿಚಾರಕ ನವೀನ್‌ಚಂದ್ರ.

ಶೇ. 50ಕ್ಕೂ ಹೆಚ್ಚು ರಿಯಾಯಿತಿ
ರಕ್ತದೊತ್ತಡ, ಮಧುಮೇಹ, ಆಸ್ತಮಾ, ಗಾಸ್ಟ್ರಿಕ್‌ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಗಳಿಗೆ ಬೇಡಿಕೆ ಹೆಚ್ಚಿದೆ. ರಕ್ತದೊತ್ತಡದ ಮಾತ್ರೆ ಪ್ಯಾಕೆಟೊಂದಕ್ಕೆ ಬೇರೆಡೆ 135 ರೂ. ಇದ್ದರೆ, ಈ ಮಳಿಗೆಗಳಲ್ಲಿ 30 ರೂ.ಗೆ ಸಿಗುತ್ತದೆ. 450 ರೂ. ಗಳಿರುವ ಕ್ಯಾನ್ಸರ್‌ ಮಾತ್ರೆಗೆ 137 ರೂ., 185 ರೂ.ಗಳಿರುವ ಬಿಪಿ ಮಾತ್ರೆಗೆ 30 ರೂ., 1,500 ರೂ.ಗಳ ಬಿಪಿ ಪರೀಕ್ಷಿಸುವ ಕಿಟ್‌ 450 ರೂ.ಗೆ ಸಿಗು ತ್ತದೆ. ಜನ ಸಂಜೀವಿನಿಯಲ್ಲಿಯೂ ಕನಿಷ್ಠ ಶೇ.50 ರಿಯಾಯಿತಿಯಲ್ಲಿ ಔಷಧಿಗಳು ಲಭ್ಯವಿವೆ. ಇಲ್ಲಿ ಬಿಪಿ ಮಾತ್ರೆ 100 ರೂ.ಗಳದ್ದು 8 ರೂ.ಗಳಿಗೆ, ಕೊಲೆಸ್ಟ್ರಾಲ್‌ ಔಷಧ ಶೇ. 50-90 ರಿಯಾಯಿತಿ ಸೇರಿದಂತೆ ಎಲ್ಲ ಔಷಧಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ.

ಔಷಧ ಕೇಂದ್ರ ನಡೆಸುವುದೇ ಕಷ್ಟ
ಜನ ಔಷಧಿ ಕೇಂದ್ರ ನಡೆಸುವವರಿಗೆ ಕಮಿಷನ್‌ ಆಧಾರದಲ್ಲಿ ಹಣ ಪಾವತಿ ಮಾಡಲಾಗುತ್ತದೆ. ಬೇರೆ ಔಷಧ ಕೇಂದ್ರಗಳಲ್ಲಿ ಸುಮಾರು ಶೇ. 35 ರೂ. ಕಮಿಷನ್‌ ದೊರೆತರೆ, ಜನ ಔಷಧ ಕೇಂದ್ರಗಳಲ್ಲಿ ಕೇವಲ ಶೇ.20 ರೂ. ಕಮಿಷನ್‌ ಸಿಗುತ್ತದೆ. ಔಷಧ ಸರಿಯಾಗಿ ವಿತರಣೆಯಾಗದೆ ಇದ್ದಲ್ಲಿ ಕಮಿಷನ್‌ ಕೂಡ ಸರಿಯಾಗಿ ಲಭ್ಯವಾಗದೆ ಅಂಗಡಿ ನಡೆಸುವುದೇ ಕಷ್ಟವಾಗುತ್ತದೆ ಎನ್ನುತ್ತಾರೆ ಜಿಲ್ಲೆಯ ಜನೌಷಧ ಕೇಂದ್ರಗಳ ಪ್ರಮುಖರು.

Advertisement

ಔಷಧಿ ಕೇಂದ್ರ ಇಲ್ಲಿವೆ
ಮಂಗಳೂರಿನ ಅತ್ತಾವರ, ದೇರಳಕಟ್ಟೆ ಕೆ.ಎಸ್‌. ಆಸ್ಪತ್ರೆ ಬಳಿ, ತೊಕ್ಕೊಟ್ಟು, ಪುತ್ತೂರು ಸರಕಾರಿ ಆಸ್ಪತ್ರೆ ಆವರಣ, ಪ್ರಗತಿ ಆಸ್ಪತ್ರೆ ಆವರಣ, ಕಬಕ, ಸುಳ್ಯ, ಬೆಳ್ತಂಗಡಿ, ಬಂಟ್ವಾಳಗಳಲ್ಲಿ ಈಗಾಗಲೇ ಜನ ಔಷಧ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಎಲ್ಲ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಜನ ಔಷಧ ಮಳಿಗೆಗಳಿವೆ. ಆದರೆ ಜನ ಸಂಜೀವಿನಿ ಮಳಿಗೆಗಳು ಜಿಲ್ಲೆಯಲ್ಲಿ ಲೇಡಿಗೋಶನ್‌ ಆಸ್ಪತ್ರೆ ಮತ್ತು ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಬೇರೆ ಮಳಿಗೆ ಗತಿ
ಜನ ಔಷಧ ಕೇಂದ್ರ ಮತ್ತು ಜನ ಸಂಜೀವಿನಿ ಕೇಂದ್ರಗಳ ವಾಸ್ತವಾಂಶವನ್ನು ತಿಳಿದುಕೊಳ್ಳಲು ‘ಉದಯವಾಣಿ’ಯು ನಗರದ ಕೆಲವು ಮಳಿಗೆಗಳಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿದೆ. ಈ ವೇಳೆ ಬಹುತೇಕ ಗ್ರಾಹಕರಿಗೆ ‘ಸ್ಟಾಕ್‌ ಖಾಲಿಯಾಗಿದೆ’ ಎಂಬ ಉತ್ತರವೇ ಲಭ್ಯವಾಗುತ್ತಿತ್ತು. ಈ ವೇಳೆ ಮಾತನಾಡಿದ ಗ್ರಾಹಕ, ಫಳ್ನೀರ್‌ ನ ಕೃಷ್ಣಮೂರ್ತಿ ಅವರು, ಕಡಿಮೆ ಬೆಲೆಗೆ ಔಷಧ ಪಡೆಯಲು ಬಂದರೆ ಇಲ್ಲಿ  ಔಷಧಗಳೇ ಇರುವುದಿಲ್ಲ. ಇದರಿಂದ ನಾವು ಬೇರೆ ಔಷಧ ಅಂಗಡಿಗಳನ್ನೇ ಆಶ್ರಯಿಸಬೇಕಾಗಿದೆ ಎಂದರು. 

ಔಷಧ ನೀಡುತ್ತಿಲ್ಲ
ಇತ್ತೀಚೆಗೆ ಜನರಲ್ಲಿ ಜೆನರಿಕ್‌ ಔಷಧಗಳ ಬಗ್ಗೆ  ಜಾಗೃತಿ ಮೂಡಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಔಷಧಗಳು ದೊರೆಯುತ್ತಿರುವುದರಿಂದ ಜನರಿಕ್‌ ಕೇಂದ್ರಗಳ ಕಡೆಗೆ ಜನ ಬರುತ್ತಿದ್ದಾರೆ. ಆದರೆ ನಮಗೆ ಔಷಧ ಪೂರೈಕೆ ಕಡಿಮೆಯಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ.
– ಚಂದ್ರಮೋಹನ್‌, ಅತ್ತಾವರ ಜನ ಔಷಧ ಕೇಂದ್ರ

ಸ್ಟಾಕ್‌ ಇಲ್ಲ
ಸ್ಟಾಕ್‌ ಖಾಲಿಯಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ವಿತರಕರ ಬಳಿ ವಿಚಾರಿಸಿದರೆ ಸ್ಟಾಕ್‌ ಇಲ್ಲ ಎನ್ನುತ್ತಾರೆ. ಸರಿಯಾಗಿ ಔಷಧ ಪೂರೈಕೆಯಾದರೆ ಇದು ಒಂದು ಅತ್ಯುತ್ತಮ ಯೋಜನೆ.
– ರಾಮಕೃಷ್ಣ, ಪುತ್ತೂರು ಜನೌಷಧ ಕೇಂದ್ರ.

— ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next