ಗಂಗಾವತಿ: ಬೇಸಿಗೆಯಲ್ಲಿ ಭತ್ತ ನಾಟಿ ಮಾಡಲು ರೈತರು ಈಗಾಗಾಗಲೇ ಭತ್ತದ ಸಸಿ ಮಡಿ ಹಾಕುವ ಕಾರ್ಯ ಆರಂಭಿಸಿದ್ದಾರೆ. ಸಾಣಾಪೂರ, ಆನೆಗೊಂದಿ, ಬಸಾಪೂರ ಸೇರಿ ಆನೆಗೊಂದಿ, ವಿಜಯನಗರ ಕಾಲುವೆ ಪ್ರದೇಶ ರೈತರು ಖಾಸಗಿ ಕಂಪನಿಯಿಂದ ಭತ್ತದ ಬೀಜ ಖರೀದಿ ಮಾಡಿದ್ದು, ಸಸಿ ಮಡಿ ಮೊಳಕೆ ಒಡೆಯದೇ ರೈತರು ಆತಂಕಗೊಂಡಿದ್ದಾರೆ.
ಬೀಜ ಪೂರೈಕೆ ಮಾಡಿದ ಕಂಪನಿ ರೈತರಿಗೆ ಮೋಸ ಮಾಡಿದ್ದು ಕೃಷಿ ಇಲಾಖೆಯ ಗಮನಕ್ಕಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬೇಸಿಗೆ ಹಂಗಾಮಿನಲ್ಲಿ 100-120 ದಿನಗಳ ಒಳಗೆ ಕಟಾವಿಗೆ ಬರುವ ಭತ್ತವನ್ನು ರೈತರು ಪ್ರತಿ ವರ್ಷ ನಾಟಿ ಮಾಡುತ್ತಾರೆ. ಕಳೆದ ನಾಲ್ಕೆ ದು ವರ್ಷಗಳಿಂದ ಬೇಸಿಗೆಯಲ್ಲಿ ಭತ್ತ ಬೆಳೆದಿಲ್ಲವಾದ್ದರಿಂದ ರೈತರ ಹತ್ತಿರ ಬೇಸಿಗೆ ಭತ್ತದ ಬೀಜದ ಕೊರತೆಯಾಗಿದೆ.
ಇದನ್ನು ಮನಗಂಡ ಹೊಸ್ಕೇರಾ ಕ್ಯಾಂಪಿನ ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಮಾಲೀಕತ್ವದ ಕಂಪನಿ ಬೇಸಿಗೆ ಭತ್ತದ ಬೀಜ ಪೂರೈಕೆ ಮಾಡಿದೆ. ಈ ಬೀಜಗಳು ಯಾವುದೇ ಬೀಜೋಪಚಾರಗಳಿಲ್ಲದೇ ಇರುವುದರಿಂದ ಸಸಿ ಮಡಿ ಹಾಕಿ ಹಲವು ದಿನಗಳಾದರೂ ಮೊಳಕೆ ಒಡೆದಿಲ್ಲ. ಸಸಿ ಮಡಿ ಹಾಕಲು ಪ್ರತಿ ಎಕರೆಗೆ ಸುಮಾರು 8ರಿಂದ 10 ಸಾವಿರ ರೂ. ಖರ್ಚು ಮಾಡಿದ ರೈತರು ಇದೀಗ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ. ಸಾಣಾಪೂರ, ಜಂಗ್ಲಿ ರಂಗಾಪೂರ, ತಿರುಮಲಾಪೂರ, ವಿರೂಪಾಪೂರಗಡ್ಡಿ, ಹನುಮನಹಳ್ಳಿ, ಗೂಗಿಬಂಡಿ ಸೇರಿ ಮುಂಗಾರಿನ ಭತ್ತ ಕಟಾವು ಮಾಡಿದ ಪ್ರದೇಶದ ರೈತರು ಖಾಸಗಿ ಕಂಪನಿಯ ಬೀಜ ಖರೀದಿ ಮಾಡಿದ್ದಾರೆ.
ಈ ಕಂಪನಿ 20 ಕೆಜಿ ತೂಕದ 1 ಲಕ್ಷ ಪ್ಯಾಕೆಟ್ ಬೀಜ ತಯಾರಿಸಿದ್ದು, ದಾವಣಗೆರೆ, ಹರಿಹರ, ಹಗರಿಬೊಮ್ಮನಹಳ್ಳಿ, ಕಂಪ್ಲಿ, ಸಿರಗುಪ್ಪಾ, ಹೊಸಪೇಟೆ ಭಾಗದ ಡೀಲರ್‌ಗಳಿಗೆ ಬೀಜ ಪೂರೈಕೆ ಮಾಡಿದೆ. ಅಲ್ಲಿಯೂ ಸಸಿ ಮಡಿ ಮೊಳಕೆ ಒಡೆಯದಿರುವ ಕುರಿತು ಮಾಹಿತಿ ಇದೆ. ರೈತರಿಗೆ ಸರಿಯಾಗಿ ರಶೀದಿ ನೀಡಿದೇ ಬಿಳಿ ಪಟ್ಟಿಯಲ್ಲಿ ಬೀಜ ಮಾರಾಟ ಬಿಲ್ ನೀಡಿ ವಂಚನೆ ಮಾಡಲಾಗಿದೆ ಎನ್ನಲಾಗುತ್ತಿದೆ. ರೈತರು ಕೃಷಿ ಇಲಾಖೆಯ ಕೇಂದ್ರಗಳಲ್ಲಿ ಬೀಜ ಇಲ್ಲ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದಾರೆ.
ಖಾಸಗಿ ಕಂಪನಿಗಳ ಬೀಜ ಖರೀದಿ ಮಾಡಿ ರೈತರು ಮೋಸ ಹೋಗಿದ್ದಾರೆ. ಆದರೂ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿಲ್ಲ. ಸದ್ಯ ನಕಲಿ ಬೀಜ ಪೂರೈಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತ್ತಿದ್ದಾರೆ. ರೈತರು ತಮ್ಮ ಕಷ್ಟವನ್ನು ಯಾರು ಹತ್ತಿರ ಹೇಳಿಕೊಳ್ಳಲಾಗುತ್ತಿಲ್ಲ.
-ಕೆ. ನಿಂಗಜ್ಜ