Advertisement

ಬಡವನ ಭಾಗ್ಯ ಹರಿಕಥಾ ಕಲಾಕ್ಷೇಪ

10:15 AM Mar 20, 2020 | mahesh |

ಶ್ರೀ ಕೃಷ್ಣನ ಬಾಲ್ಯದ ಗೆಳೆಯ ಸುಧಾಮನ ಕಥೆಯಾಧಾರಿತ “ಬಡವನ ಭಾಗ್ಯ’ ಎಂಬ ಹರಿಕಥಾ ಪ್ರಸಂಗ ಕಾರ್ಕಳದ ಹರಿಕಥಾ ಕೀರ್ತನಾಗ್ರೇಸರ ವೈ. ಅನಂತಪದ್ಮನಾಭ ಭಟ್‌ರವರಿಂದ ಯಶಸ್ವಿಯಾಗಿ ಸಾಕಾರಗೊಂಡಿತು.

Advertisement

ಬಡತನದಿಂದ ಬೆಂದು ಬೆಂಡಾಗಿದ್ದ ಶ್ರೀಕೃಷ್ಣನ ಬಾಲ್ಯ ಸ್ನೇಹಿತ ಸುಧಾಮ ಪತ್ನಿಯು ಕೃಷ್ಣನಲ್ಲಿ ಸಹಾಯ ಯಾಚಿಸುವಂತೆ ಮಾಡಿದ ಒತ್ತಾಸೆಯ ಮೇರೆಗೆ ಕಷ್ಟದಿಂದ ಸಂಪಾದಿಸಿದ ಒಂದು ಹಿಡಿ ಅವಲಕ್ಕಿಯನ್ನು ಹರಕು ಬಟ್ಟೆಯಲ್ಲಿ ಕಟ್ಟಿಕೊಂಡು ದ್ವಾರಕೆಗೆ ಬರುತ್ತಾನೆ.ಅರಮನೆಯ ದ್ವಾರದಲ್ಲಿ ದ್ವಾರಪಾಲಕರಿಂದ ದಬ್ಬಿಸಿ ಹೊರಹಾಕಲ್ಪಟ್ಟ ಸುಧಾಮನ ಆರ್ತನಾದ ಕೃಷ್ಣನಿಗೆ ತಲುಪುತ್ತದೆ.ಕೃಷ್ಣನ ಆಜ್ಞಾ ಪ್ರಕಾರ ಸೇವಕರು ಸುಧಾಮನನ್ನು ಚಿನ್ನದ ಪಲ್ಲಕಿಯಲ್ಲಿ ಹೊತ್ತು ತಂದ ಸಂದರ್ಭ,ಕೃಷ್ಣನ ಅರಮನೆಯ ವೈಭವ,ರಾಜ ಸಭೆಯನ್ನು ಕಂಡು ಬೆರಗಾದ ಸುಧಾಮ ತನ್ನನ್ನು ಗುರುತಿಸಿ ಸಿಂಹಾಸನದಿಂದ ಕೆಳಗಿಳಿದು ಓಡೋಡಿ ಬಂದ ಶ್ರೀಕೃಷ್ಣನನ್ನು ಅಪ್ಪಿ ಆಲಿಂಗಿಸುತ್ತಾನೆ. ಶ್ರೀಕೃಷ್ಣನ ಪ್ರೀತಿಯಲ್ಲಿ ಕಳೆದ ಸುಧಾಮ ಬಂದ ಉದ್ದೇಶವನ್ನು ಮರೆತು ವಾಪಾಸಾಗುತ್ತಾನೆ.

ಆದರೆ ತನ್ನ ಗುಡಿಸಲ್ಲಿದ್ದ ಸ್ಥಳದಲ್ಲಿ ಅರಮನೆ,ಮೈ ತುಂಬಾ ಆಭರಣಗಳಿಂದ ಕಂಗೊಳಿಸಿ ರೇಷ್ಮೆ ಸೀರೆಯನ್ನುಟ್ಟು ತನ್ನನ್ನು ಸ್ವಾಗತಿಸಿದ ಪತ್ನಿ,ಸಂತುಷ್ಟಿ, ಸಂತೃಪ್ತಿ ಯಿಂದ ಕುಣಿದಾಡುತ್ತಿರುವ ತನ್ನ ಮಕ್ಕಳನ್ನು ನೋಡಿದಾಗ ಇವೆಲ್ಲ ಶ್ರೀಕೃಷ್ಣ ಲೀಲೆ ಎಂದು ಸ್ಪಷ್ಟವಾಗಿ ಸುಧಾಮನಿಗೆ ಅರಿವಾಗುತ್ತದೆ. ನಿಷ್ಕಲ್ಮಶ ಸ್ನೇಹಕ್ಕೆ ಶ್ರೀಕೃಷ್ಣ ಸುಧಾಮರು ಮಾದರಿ ಎಂಬುದು ಈ ಕಥಾನಕದ ತಾತ್ಪರ್ಯ.

ಮನೋಜ್ಞವಾಗಿ ಕುಚೇಲನ ಕಥೆಯನ್ನು ಸಾದರ ಪಡಿಸಿದ ಹರಿದಾಸ ವೈ. ಅನಂತಪದ್ಮನಾಭ ಭಟ್ಟರ ನಿರೂಪಣೆ ಶ್ಲಾಘನೀಯ.ಶ್ರೀಕೃಷ್ಣನು ಅವಲಕ್ಕಿಯನ್ನು ತಾನೂ ತಿಂದದ್ದಲ್ಲದೆ ಅಲ್ಲಿದ್ದ ಇತರರಿಗೂ ನೀಡಿದ್ದು,ಈ ಸಹಕಾರಿ ತತ್ವ ನಮ್ಮ ಪುರಾಣ ಕಾಲದಲ್ಲೇ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ಸಮಪಾಲು ಸಮಬಾಳ್ವೆಯ ಚಿಂತನೆ ಪರಮಾತ್ಮನಿಂದಲೇ ನಮಗೆ ಮಾದರಿಯಾದದ್ದು ಎನ್ನುವ ಹರಿದಾಸರ ನುಡಿ ಮನಮುಟ್ಟಿಸುವ ಚಿಂತನೆಯಾದದ್ದು ಪ್ರಸಂಶನೀಯ.

Advertisement

ಎಂ.ರಾಘವೇಂದ್ರ ಭಂಡಾರ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next