ಚಿಕ್ಕೋಡಿ: ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಾಂತರ ಅನುದಾನ ಖರ್ಚು ಮಾಡುತ್ತಿದೆ. ಆದರೆ ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಗಳಿಗೆ ಸಮರ್ಪಕ ಕೊಠಡಿ ನಿರ್ಮಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2082 ಕೊಠಡಿಗಳ ಕೊರತೆಯಿಂದ ಪ್ರಾಥಮಿಕ ಶಾಲೆಗಳ ಸ್ಥಿತಿ ಅಯೋಮಯವಾಗಿದ್ದು, ಪ್ರಾಥಮಿಕ ಶಾಲೆಗಳು ಮುಚ್ಚುವ ಸ್ಥಿತಿ ಗಡಿ ಭಾಗದಲ್ಲಿ ನಿರ್ಮಾಣವಾಗಿದೆ. ಭೌಗೋಳಿಕವಾಗಿ ದೊಡ್ಡ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಹೊಂದಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬಹುತೇಕ ಶಾಲಾ ಕೊಠಡಿಗಳು ಶಿಥಿಲಾವಸ್ಥೆ ಕಂಡಿದ್ದು, ಮಕ್ಕಳು ಜೀವ ಭಯದಲ್ಲಿ ಅಧ್ಯಯನ ಮಾಡುವ ಪ್ರಸಂಗ ಎದುರಾಗಿದೆ.
ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿ, ಅಥಣಿ, ನಿಪ್ಪಾಣಿ, ಕಾಗವಾಡ, ರಾಯಬಾಗ,ಹುಕ್ಕೇರಿ, ಮೂಡಲಗಿ ಮತ್ತು ಗೋಕಾಕ ವಲಯಗಳ ವ್ಯಾಪ್ತಿಯಲ್ಲಿ 1158 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ಕಂಡಿವೆ. ಅವುಗಳನ್ನು ನೆಲಸಮಗೊಳಿಸಿ ಮರು ನಿರ್ಮಾಣದ ಬೇಡಿಕೆ ಸರ್ಕಾರದ ಮುಂದಿದೆ. ಮಕ್ಕಳು ಸಂಖ್ಯೆ ಹೆಚ್ಚಿರುವ ಶಾಲೆಗಳಲ್ಲಿ 924 ಬೋಧನೆಗಾಗಿ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣ ಮಾಡುವ ಬೇಡಿಕೆ ಇದೆ. ಅದರಂತೆ ಶೈಕ್ಷಣಿಕ ಜಿಲ್ಲೆಯ 1337 ಶಾಲಾ ಕೊಠಡಿಗಳು ದುರಸ್ತಿಗೆ ಒಳಪಟ್ಟಿವೆ.
ಎಲ್ಲೆಲ್ಲಿ ಎಷ್ಟು ಕೊಠಡಿ: ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿ ವಲಯ ವ್ಯಾಪ್ತಿಯಲ್ಲಿ 215 ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿ ನಿರ್ಮಾಣ ಮಾಡುವುದು ಮತ್ತು 180 ಹೆಚ್ಚುವರಿ ಶಾಲಾ ಕೊಠಡಿ ಸೇರಿ 395 ಶಾಲಾ ಕೊಠಡಿ ನಿರ್ಮಾಣದ ಅವಶ್ಯಕವಿದೆ. ಕಾಗವಾಡ ವಲಯದಲ್ಲಿ 100 ಕೊಠಡಿ, ನಿಪ್ಪಾಣಿ ವಲಯದಲ್ಲಿ 175 ಕೊಠಡಿ, ಗೋಕಾಕ ವಲಯದಲ್ಲಿ 209 ಕೊಠಡಿ, ಮೂಡಲಗಿ ವಲಯದಲ್ಲಿ 437 ಕೊಠಡಿ, ರಾಯಬಾಗ ವಲಯದಲ್ಲಿ 362 ಕೊಠಡಿ, ಅಥಣಿ ವಲಯದಲ್ಲಿ 69 ಕೊಠಡಿ ನಿರ್ಮಾಣವಾಗುವುದು ಅವಶ್ಯಕವಾಗಿದೆ.
ಗಡಿ ಭಾಗದಲ್ಲಿ ಕನ್ನಡ ಶಾಲೆಗಳಿಗೆ ಕುತ್ತು: ಶೈಕ್ಷಣಿಕ ಜಿಲ್ಲೆಯು ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿದ್ದು, ಗಡಿ ಭಾಗದಲ್ಲಿ ಮರಾಠಿ ಅಳಿಸಿ ಕನ್ನಡ ಗಟ್ಟಿತನವಾಗಲು ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಗಳನ್ನು ತೆರೆದಿದೆ. ಲಕ್ಷಾಂತರ ಮಕ್ಕಳು ಕನ್ನಡ ಶಾಲೆಯಲ್ಲಿ ಅಧ್ಯಯನ ಮಾಡಲು ದಾಖಲಾತಿ ಪಡೆದುಕೊಂಡಿದ್ದಾರೆ. ಆದರೆ ಸಮರ್ಪಕ ಶಾಲಾ ಕೊಠಡಿ ಇಲ್ಲದೆ ಕನ್ನಡ ಪ್ರಾಥಮಿಕ ಶಾಲೆಗಳು ಸೊರಗುತ್ತಿವೆ.
ಖಾಸಗಿ ಶಾಲೆಗಳತ್ತ ಮಕ್ಕಳ ಮುಖ: ಮೂಲಸೌಲಭ್ಯಗಳಿಂದ ವಂಚಿತವಾಗುತ್ತಿರುವ ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಮಕ್ಕಳು ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವೇ ನಿರ್ಲಕ್ಷ ಭಾವನೆ ತೋರುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆ ಸೇರುತ್ತಿರುವುದು ಅನಿವಾರ್ಯವಾಗಿದೆ.
ಜನಪ್ರತಿನಿಧಿಗಳ ನಿರಾಸಕ್ತಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲೆಗಳಿಗೆ 2082 ಶಾಲಾ ಕೊಠಡಿ ಅವಶ್ಯಕವಾಗಿ ಬೇಕಾಗಿದ್ದರೂ, ಕೂಡಾ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮುಂದೆ ಪ್ರಸ್ತಾವಣೆ ಇಟ್ಟು ಮಂಜೂರು ಪಡೆಯಲು ಯಾವ ಜನಪ್ರತಿನಿಧಿಯು ಮನಸ್ಸು ಮಾಡದಿರುವುದು ದುರ್ದೈವದ ಸಂಗತಿ.
•ಮಹಾದೇವ ಪೂಜೇರಿ