Advertisement

Protest: ಕಳಪೆ ಆಹಾರ; ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

09:53 AM Jun 04, 2024 | Team Udayavani |

ಬೆಂಗಳೂರು: ಬೆಂಗಳೂರು ವಿವಿಯ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿರುವ ಬಿಸಿಎಂ ಹಾಸ್ಟೆಲ್‌ ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ದಿಢೀರನೇ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಈ ಹಾಸ್ಟೆಲ್‌ನಲ್ಲಿ ವಿಷಪೂರಿತ ಆಹಾರ ಸೇವಿಸಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಕ್ಯಾಂಪಸ್‌ನ ಆವರಣದಲ್ಲಿರುವ ಮುಖ್ಯ ರಸ್ತೆ ತಡೆ ಹಿಡಿದು ಪ್ರತಿಭಟಿಸಿದರು.

Advertisement

ವಿದ್ಯಾರ್ಥಿಗಳು ರಸ್ತೆಯಲ್ಲಿ ಮಲಗಿ ಸಂಚಾರ ತಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜ್ಞಾನ ಭಾರತಿ ಠಾಣೆಯ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ಪರಿಸ್ಥಿತಿ ನಿಭಾಯಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಹಾಸ್ಟೆಲ್‌ನಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಪ್ರತಿ ದಿನ ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ವರೆಗೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಪ್ಪಿಟ್ಟಲ್ಲಿ ಹುಳ ತೋರಿಸಿದರೂ ವಾರ್ಡನ್‌ ಆಗಲಿ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರದ ಸಮಸ್ಯೆಯಿಂದ ಹಲವು ವಿದ್ಯಾರ್ಥಿಗಳು ಹಾಸ್ಟೆಲ್‌ ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಊರಿಗೆ ಹೋಗಿದ್ದಾರೆ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಚಿತ್ರನಟಿ, ಕಾಂಗ್ರೆಸ್‌ ನಾಯಕಿಭಾವನಾ ರಸ್ತೆ ತಡೆ ಕೈ ಬಿಡುವಂತೆ ಮನವಿ ಮಾಡಿಕೊಂಡರು. ಆದರೆ ವಿದ್ಯಾರ್ಥಿಗಳು ಅವರ ಮನವಿಗೆ ಸೊಪ್ಪು ಹಾಕದೇ ಪ್ರತಿಭಟನೆ ಮುಂದುವರಿಸಿದರು.

ಈ ಮಧ್ಯೆ ಬೆಂಗಳೂರು ವಿವಿಯು, ತನಗೂ ಈ ಹಾಸ್ಟೆಲ್‌ಗ‌ೂ ಸಂಬಂಧವಿಲ್ಲ. ಈ ಹಾಸ್ಟೆಲ್‌ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂದು ಸ್ಪಷ್ಟನೆ ನೀಡಿದೆ. ಒಂದು ತಿಂಗಳ ಹಿಂದೆ ವಿವಿಯ ಲೇಡಿಸ್‌ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next