Advertisement

“ಕ್ಯಾಚ್ ಹಿಡಿಯುವಾಗ ಕೈ ನಡುಗುತ್ತೆ” ಮತ್ತೆ ಕ್ಯಾಚ್ ಬಿಟ್ಟು ಸೋತ ಚೋಕರ್ಸ್

03:52 PM Jun 20, 2019 | keerthan |

ಲಂಡನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದು. ಪ್ರತೀ ವಿಶ್ವಕಪ್ ನಲ್ಲಿ ಕಪ್ ಗೆಲ್ಲುವ ವಿಶ್ವಾಸದಿಂದ ಕಣಕ್ಕಿಳಿಯುವ ತಂಡಕ್ಕೆ ಅದೇನಾಗುತ್ತೋ ಗೊತ್ತಿಲ್ಲ, ಮಹಾ ಸಮರದ ಮಹತ್ವದ ಪಂದ್ಯಗಳಲ್ಲಿ ಮುಗ್ಗರಿಸುತ್ತದೆ.

Advertisement

ಎಡ್ಜ್ ಬಾಸ್ಟನ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತಿತು. 242 ರನ್ ಗಳ ಸಾಧಾರಣ ಮೊತ್ತವಾದರೂ ಕಿವೀಸ್ ಪಡೆ ಚೇಸ್ ಮಾಡಲು ಹರ ಸಾಹಸವನ್ನೇ ಪಡಬೇಕಾಯಿತು. ನಾಯಕ ಕೇನ್ ವಿಲಿಯಮ್ಸನ್ ಮತ್ತು ಕಾಲಿನ್ ಡಿ ಗ್ರಾಂಡ್ ಹೋಮ್ ಸ್ಪೋಟಕ ಬ್ಯಾಟಿಂಗ್ ಸಾಹಸದಿಂದ ನ್ಯೂಜಿಲ್ಯಾಂಡ್ ಜಯ ಸಾಧಿಸಿತು.

ಕ್ಯಾಚ್ ಬಿಟ್ಟು ಮ್ಯಾಚ್ ಬಿಟ್ಟರು

ಬಲಿಷ್ಠಕ್ಷೇತ್ರ ರಕ್ಷಣೆಗೆ ಹೆಸರಾಗಿರುವ ಹರಿಣಗಳು ನಿನ್ನೆ ಮಾತ್ರ ಮೈದಾನದಲ್ಲಿ ಬಾಲ್ ಹಿಡಿಯಲು ಪರದಾಡಿದರು. ಕೈಬಿಟ್ಟ ಕೆಲವು ಕ್ಯಾಚ್ ಗಳು ಮತ್ತು ರನ್ ಔಟ್ ಅವಕಾಶದಿಂದ ಕೊನೆಗೆ ಪಂದ್ಯ ಕೈ ಚೆಲ್ಲಬೇಕಾಯಿತು. 36 ನೇಓವರ್ ನಲ್ಲಿ ಸಿಕ್ಕಿದ ರನ್ ಔಟ್ ಅವಕಾಶ ಬಳಸಿಕೊಳ್ಳದ ಮಿಲ್ಲರ್ ವಿಲಿಯಮ್ಸನ್ ಗೆ ಜೀವದಾನ ನೀಡಿದರು. 38ನೇ ಓವರ್ ನಲ್ಲಿ ಶಾರ್ಟ್ ಮಿಡ್ ನಲ್ಲಿದ್ದ ಮಿಲ್ಲರ್ ಎರಡು ಕ್ಯಾಚ್ ಗಳನ್ನು ಹಿಡಿಯುವ ಪ್ರಯತ್ನ ಮಾಡಿದರೂ ಸಫಲರಾಗಲಿಲ್ಲ. ಸ್ವಲ್ಪ ಕಷ್ಟದ ಕ್ಯಾಚ್ ಆದರೂ ಕೂಡಾ ಇಂತಹ ಕ್ಯಾಚ್ ಗಳೇ ಪಂದ್ಯದ ದಿಕ್ಕು ಬದಲಿಸುತ್ತವೆ ಎನ್ನುವುದನ್ನು ಮರೆಯುವಂತಿಲ್ಲ.

Advertisement

ಇನ್ನಿಂಗ್ಸ್ ನ 44ನೇ ಓವರ್ ನಲ್ಲಿ ಫೈನ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಲುಂಗಿ ನಿಗಿಡಿ, ವಿಲಿಯಮ್ಸನ್ ನೀಡಿದ ಸುಲಭ ಕ್ಯಾಚನ್ನು ನೆಲಕ್ಕೆ ಚೆಲ್ಲಿದರು. ಆದರೆ ಅದೃಷ್ಟಶವಾತ್ ಅದು ನೋ ಬಾಲ್ ಆಗಿತ್ತು. ಕ್ಯಾಚ್ ಹಿಡಿದಿದ್ದರೂ ವಿಲಿಯಮ್ಸನ್ ಔಟ್ ಆಗುತ್ತಿರಲಿಲ್ಲ. 46ನೇ ಓವರ್ ನಲ್ಲಿ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದ ಕಾಲಿನ್ ಡಿ ಗ್ರಾಂಡ್ ಹೋಮ್,  ಡಿಪ್ ಮಿಡ್ ವಿಕೆಟ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಿಲ್ಲರ್ ಗೆ ಕ್ಯಾಚ್ ನೀಡಿದರು. ಆದರೆ ಈ ಬಾರಿಯೂ ಮಿಲ್ಲರ್ ಕೈಯಲ್ಲಿ ಕ್ಯಾಚ್ ನಿಲ್ಲಲೇ ಇಲ್ಲ.

ಬೇಗನೇ ಔಟಾಗ ಬೇಕಿದ್ದ ವಿಲಿಯಮ್ಸನ್ ಮತ್ತು ಗ್ರಾಂಡ್ ಹೋಮ್ ಆಫ್ರಿಕಾ ಆಟಗಾರರ ಕೃಪೆಯಿಂದ ಪಂದ್ಯವನ್ನು ಕಿವೀಸ್ ಪರ ತಿರುಗಿಸಿದರು. ಅಜೇಯವಾಗುಳಿದ ನಾಯಕ ಕೇನ್ ವಿಲಿಯಮ್ಸನ್ ಶತಕ ಬಾರಿಸಿದರು.

2015ರ ವಿಶ್ವಕಪ್ ಸೆಮಿ ಫೈನಲ್ ನೆನಪು


2015ರಲ್ಲಿ ಆಕ್ಲಂಡ್ ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ನಲ್ಲಿ ದ.ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೂಡಾ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಹರಿಣಗಳು ಕೊನೆಯ ಕ್ಷಣದಲ್ಲಿ ವಿಚಲಿತರಾಗಿ ಕೆಲವು ಕ್ಯಾಚ್ ಗಳು ಮತ್ತು ರನ್ ಔಟ್ ಅವಕಾಶ ಕಳೆದುಕೊಂಡು ಪಂದ್ಯ ಸೋತಿದ್ದರು. ಎರಡು ಎಸೆತಗಳಲ್ಲಿ ಐದು ರನ್ ಬೆಕಾದಾಗ ಗ್ರ್ಯಾಂಟ್ ಏಲಿಯಟ್ ಬಾರಿಸಿದ ಸಿಕ್ಸರ್,  ಡಿವಿಲಿಯರ್ಸ್ ಬಳಗದ ಮೊದಲ ವಿಶ್ವಕಪ್ ಫೈನಲ್ ಕನಸನ್ನು ಭಗ್ನಗೊಳಿಸಿತ್ತು .

Advertisement

Udayavani is now on Telegram. Click here to join our channel and stay updated with the latest news.

Next