Advertisement

ಕಳಪೆ ಫೀಲ್ಡಿಂಗ್‌: ಕ್ಯಾಪ್ಟನ್‌ ಕೊಹ್ಲಿಗೆ ಚಿಂತೆ

09:52 AM Dec 10, 2019 | Team Udayavani |

ತಿರುವನಂತಪುರ: ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಸೋಲಲು ಕಳಪೆ ಫೀಲ್ಡಿಂಗ್‌ ಮುಖ್ಯ ಕಾರಣ ಎಂಬುದಾಗಿ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಜತೆಗೆ ಸಾಕಷ್ಟು ರನ್‌ ಪೇರಿಸದೆ ಹಿನ್ನಡೆ ಕಾಣಬೇಕಾಯಿತು ಎಂದರು.

Advertisement

ಆರಂಭಕಾರ ಲೆಂಡ್ಲ್ ಸಿಮನ್ಸ್‌ ಅವರ ಅಜೇಯ ಬ್ಯಾಟಿಂಗ್‌ ವೆಸ್ಟ್‌ ಇಂಡೀಸ್‌ ಜಯದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಆದರೆ ಈ ಹಾದಿಯಲ್ಲಿ ಅವರಿಗೆ 2 ಜೀವದಾನ ಲಭಿಸಿತ್ತು, ಅದೂ ಸತತ ಎಸೆತಗಳಲ್ಲಿ. ಭುವನೇಶ್ವರ್‌ ಕುಮಾರ್‌ ಓವರ್‌ನಲ್ಲಿ ಮಿಡ್‌-ಆಫ್ನಲ್ಲಿದ್ದ ವಾಷಿಂಗ್ಟನ್‌ ಸುಂದರ್‌ ಮತ್ತು ಕೀಪರ್‌ ರಿಷಭ್‌ ಪಂತ್‌ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಕೊನೆಯಲ್ಲಿ ಭಾರತ ಇದಕ್ಕೆ ತಕ್ಕ ಬೆಲೆ ತೆರಬೇಕಾಯಿತು.

ಮುಂಬಯಿಯಲ್ಲಿ ಎಚ್ಚೆತ್ತುಕೊಳ್ಳಬೇಕು
“ನಾವು ಇದೇ ರೀತಿಯ ಕಳಪೆ ಫೀಲ್ಡಿಂಗ್‌ ಮುಂದುವರಿಸಿದರೆ ಸ್ಕೋರ್‌ಬೋರ್ಡ್‌ನಲ್ಲಿ ಎಷ್ಟೇ ರನ್‌ ಗಳಿಸಿದರೂ ಸಾಕಾಗದು. ಎರಡೂ ಪಂದ್ಯಗಳಲ್ಲಿ ನಮ್ಮ ಕ್ಷೇತ್ರರಕ್ಷಣೆ ಅತ್ಯಂತ ಕಳಪೆಯಾಗಿತ್ತು. ಸತತ ಎಸೆತಗಳಲ್ಲಿ ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದೆವು. ಒಂದು ವೇಳೆ ಈ ಕ್ಯಾಚ್‌ ಪಡೆದು 2 ವಿಕೆಟ್‌ ಉರುಳಿದ್ದೇ ಆದಲ್ಲಿ ಆಗ ನಾವು ವಿಂಡೀಸ್‌ ಮೇಲೆ ಒತ್ತಡ ಹೇರಬಹುದಿತ್ತು…’ ಎಂದು ಕೊಹ್ಲಿ ಹೇಳಿದರು.

“ಮುಂಬಯಿಯಲ್ಲಿ ಮಾಡು-ಮಡಿ ಪಂದ್ಯ ನಡೆಯಲಿದೆ. ಎಲ್ಲರೂ ಎಚ್ಚೆತ್ತುಕೊಂಡು ಅಮೋಘ ಫೀಲ್ಡಿಂಗ್‌ ನಡೆಸಬೇಕಾದ ಅಗತ್ಯವಿದೆ’ ಎಂದು ಕೊಹ್ಲಿ ಎಚ್ಚರಿಸಿದರು.

“ನಮ್ಮ ಬ್ಯಾಟಿಂಗ್‌ ಕೂಡ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಫೈನಲ್‌ ಓವರ್‌ಗಳಲ್ಲಿ ಸಿಡಿದದ್ದೇ ಆದಲ್ಲಿ ಇನ್ನೂ 15-20 ರನ್‌ ಪೇರಿಸಬಹುದಿತ್ತು. ಆಗ ಪಂದ್ಯ ಹೆಚ್ಚು ಪೈಪೋಟಿಯಿಂದ ಕೂಡಿರುತ್ತಿತ್ತು’ ಎಂದೂ ಕೊಹ್ಲಿ ಅಭಿಪ್ರಾಯಪಟ್ಟರು.

Advertisement

ಕೈಕೊಟ್ಟ ಕೊನೆಯ 5 ಓವರ್‌
ಭಾರತ ಮೊದಲು ಬ್ಯಾಟಿಂಗ್‌ ನಡೆಸಿದ ಕಳೆದ 15 ಟಿ20 ಪಂದ್ಯಗಳಲ್ಲಿ ಏಳನ್ನು ಸೋತಂತಾಯಿತು. ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, “ಅಂಕಿಅಂಶಗಳು ಬಹಳಷ್ಟು ಹೇಳುತ್ತವೆ. ಆದರೆ ಮೊದಲ 16 ಓವರ್‌ಗಳಲ್ಲಿ ನಮ್ಮ ಸ್ಕೋರ್‌ ಉತ್ತಮವಾಗಿಯೇ ಇತ್ತು. ಆಗ 4 ವಿಕೆಟಿಗೆ 140 ರನ್‌ ಗಳಿಸಿದ್ದೆವು. ಕೊನೆಯ 4 ಓವರ್‌ಗಳಲ್ಲಿ 40-45 ರನ್‌ ಬಾರಿಸಬೇಕಿತ್ತು.

ಆದರೆ ನಾವು ಗಳಿಸಿದ್ದು 30 ರನ್‌ ಮಾತ್ರ. ಕೊನೆಯ 5 ಓವರ್‌ಗಳಲ್ಲಿ ಒಟ್ಟುಗೂಡಿದ್ದು ಬರೀ 38 ರನ್‌. ದುಬೆ ಬ್ಯಾಟಿಂಗ್‌ ಸಾಹಸದಿಂದ ನಮ್ಮ ಸ್ಕೋರ್‌ 170ರ ಗಡಿ ತಲುಪಿತು’ ಎಂದರು.

3ನೇ ಕ್ರಮಾಂಕದಲ್ಲಿ ದುಬೆ
ಶಿವಂ ದುಬೆ ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿದ ಬಗ್ಗೆಯೂ ಪ್ರಶ್ನೆ ಎದುರಾಯಿತು. “ವಿಂಡೀಸ್‌ ಬಹಳ ಬೇಗ ಸ್ಪಿನ್‌ ದಾಳಿ ನಡೆಸುವುದು ನಮಗೆ ತಿಳಿದಿತ್ತು. ಹೀಗಾಗಿ ಶಿವಂ ದುಬೆ ಅವರ ಸಾಮರ್ಥ್ಯವನ್ನೇಕೆ ಇಲ್ಲಿ ಬಳಸಿಕೊಳ್ಳಬಾರದು ಎಂಬ ತೀರ್ಮಾನಕ್ಕೆ ಬಂದೆವು. ಈ ಪ್ರಯೋಗ ಯಶಸ್ಸು ಕಂಡಿತು’ ಎಂಬುದಾಗಿ ಕೊಹ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next