ಸಿಂಧನೂರು: ಜಂಗಮ ಸಮಾಜದಲ್ಲೂ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳಿದ್ದು, ಎಲ್ಲರಿಗೂ ಅನುಕೂಲ ಕಲ್ಪಿಸುವುದಕ್ಕಾಗಿ ಶಿವದೀಕ್ಷಾ ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ ಎಂದು ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಆರ್.ಕೆ.ಹಿರೇಮಠ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಗಮ ಸಮಾಜದ ಪರಂಪರೆಯ ಪ್ರಕಾರ 8 ವರ್ಷದ ತುಂಬಿದ ಮಕ್ಕಳಿಗೆ ಅಯ್ನಾಚಾರ ಕೊಡಿಸುವುದು ಪದ್ಧತಿ. ಇಂತಹ ಕಾರ್ಯಕ್ರಮ ಆಯೋಜಿಸಬೇಕಾದರೆ, 25ರಿಂದ 30 ಸಾವಿರ ರೂ. ಬೇಕಾಗುತ್ತದೆ. ಜಂಗಮ ಸಮಾಜದಲ್ಲಿ ಬಹುತೇಕರು ಬಡವರಿದ್ದಾರೆ. ಆ ಎಲ್ಲರಿಗೂ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅ.31ರಂದು ಅಯ್ನಾಚಾರ ದೀಕ್ಷೆ ಕೊಡಿಸಲಾಗುತ್ತಿದ್ದು, 151 ವಟುಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಎರಡು ದಿನ ವಿಶೇಷ ಉಪನ್ಯಾಸ
ಸಂಘ ಕಳೆದ 25 ವರ್ಷಗಳಿಂದ ನೋಂದಣಿಯಾಗಿರಲಿಲ್ಲ. ಇದೀಗ ನೋಂದಣಿಯಾಗಿದೆ. ಆ ಬಳಿಕ ಸಮಾಜಕ್ಕಾಗಿ ಏನನ್ನಾದರೂ ಕಾರ್ಯಕ್ರಮ ಮಾಡಲು ನಿರ್ಧರಿಸಿದಾಗ ವಟುಗಳಿಗೆ ದೀಕ್ಷೆ ನೀಡುವುದಕ್ಕೆ ವೇದಿಕೆ ರಚನೆಯಾಯಿತು. ವಟುಗಳು ಧಾರ್ಮಿಕ ಬಿಕ್ಷಾಟನೆ ನಡೆಸಿ, ಮಠಗಳಿಗೆ ಬಡವರು ಬಂದಾಗ ಅವರ ಹಸಿವು ನೀಗಿಸುವ ದಾಸೋಹಕ್ಕೆ ಹಣ ವಿನಿಯೋಗಿಸುತ್ತಾರೆ. ದವಸ-ಧಾನ್ಯಗಳನ್ನು ಸ್ವೀಕರಿಸುವ ಪದ್ಧತಿ ಈಗಲೂ ಇದೆ. ಧರ್ಮದ ಬಿಕ್ಷಾಟನೆಯೊಂದಿಗೆ ದಾಸೋಹ ಪರಂಪರೆಯನ್ನು ಸಾರಿದ ಹಿರಿಮೆ ಜಂಗಮರಿಗೆ ಇದೆ. ಇದನ್ನು ತಿಳಿಸುವ ಉದ್ದೇಶದೊಂದಿಗೆ ಅ.29 ಮತ್ತು 30 ರಂದು ವಿಚಾರಗೋಷ್ಠಿ-ಉಪನ್ಯಾಸ ನಡೆಯಲಿವೆ. ಜಂಗಮ ಪರಂಪರೆ, ದಾಸೋಹದ ಮಹತ್ವ, ಧರ್ಮ ಬಿಕ್ಷಾಟನೆಯ ಹಿನ್ನೆಲೆಯನ್ನು ತಿಳಿಸಲಾಗುತ್ತದೆ. ಅಕ್ಟೋಬರ್ 31ರಂದು ಬೃಹತ್ ಮೆರವಣಿಗೆಯನ್ನು ಕೂಡ ಆಯೋಜಿಸಲಾಗಿದೆ ಎಂದರು.
ಜಂಗಮ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆದಿ ಬಸವರಾಜ್, ಕೋಶಾಧ್ಯಾಕ್ಷ ಬಸವರಾಜ್ ಹಿರೇಮಠ ಬಾದರ್ಲಿ, ಜಂಗಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಹಿರೇಮಠ ಸೇರಿದಂತೆ ಇತರರು ಇದ್ದರು.