ಆಕ್ಲಂಡ್: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ವನಿತೆಯರು ಸೋಲನುಭವಿಸಿದ್ದಾರೆ. 277 ರನ್ ಗಳಿಸಿದರೂ ಆಸೀಸ್ ಬ್ಯಾಟರ್ ಗಳನ್ನು ನಿಯಂತ್ರಿಸಲಾಗದೆ ಭಾರತ ವನಿತೆಯರ ತಂಡ ಆರು ವಿಕೆಟ್ ಅಂತರದ ಸೋಲನುಭವಿಸಿದೆ.
ಭಾರತ ತಂಡದ ಪರವಾಗಿ ಪೂಜಾ ವಸ್ತ್ರಾಕರ್ ಆಲ್ ರೌಂಡ್ ಪ್ರದರ್ಶನದ ಮೂಲಕ ಮಿಂಚಿದರು. ಬ್ಯಾಟಿಂಗ್ ವೇಳೆ 28 ಎಸೆತದಲ್ಲಿ 34 ರನ್ ಬಾರಿಸಿದ ಪೂಜಾ, ಬೌಲಿಂಗ್ ವೇಳೆ ಎರಡು ವಿಕೆಟ್ ಕಿತ್ತರು.
ಹರ್ಮನ್ ಪ್ರೀತ್ ಕೌರ್ ಜೊತೆ ಉಪಯುಕ್ತ ಜೊತೆಯಾಟ ನಡೆಸಿದ ಪೂಜಾ ವಸ್ತ್ರಾಕರ್ ತಂಡದ ಮೊತ್ತ 250 ರನ್ ಗಡಿ ದಾಟುವಂತೆ ಮಾಡಿದರು. ಇದೇ ವೇಳೆ ಪೂಜಾ ಈ ಬಾರಿಯ ವನಿತಾ ವಿಶ್ವಕಪ್ ನ ಅತೀ ದೊಡ್ಡ ಸಿಕ್ಸರ್ ಬಾರಿಸಿ ಮಿಂಚಿದರು.
ಇದನ್ನೂ ಓದಿ:ಏಕದಿನ ಪಂದ್ಯ : ದಕ್ಷಿಣ ಆಫ್ರಿಕಾವನ್ನು ಸೋಲಿಸಿ ದಾಖಲೆ ಬರೆದ ಬಾಂಗ್ಲಾ
49ನೇ ಓವರ್ ನಲ್ಲಿ ಆಸೀಸ್ ವೇಗಿ ಮೇಗನ್ ಶಟ್ ಎಸೆತನ್ನು ಲಾಂಗ್ ಆನ್ ಬೌಂಡರಿಗೆ ಅಟ್ಟಿದ ಪೂಜಾ 81 ಮೀಟರ್ ದೂರದ ಭರ್ಜರಿ ಸಿಕ್ಸರ್ ಬಾರಿಸಿದರು. ಇದು ವನಿತಾ ಏಕದಿನ ವಿಶ್ವಕಪ್ 2022ರ ಅತೀ ದೊಡ್ಡ ಸಿಕ್ಸರ್ ಆಗಿದೆ. ಈ ಮೂಲಕ ಸ್ಮೃತಿ ಮಂಧನಾ ಮತ್ತು ಕ್ಲಾಯ್ ಟೈರಾನ್ ಅವರ ದಾಖಲೆ ಮುರಿಯಿತು.
ಮಂಧನಾ ಮತ್ತು ಟೈರಾನ್ ಇಬ್ಬರೂ 80 ಮೀಟರ್ ಸಿಕ್ಸರ್ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಟೈರಾನ್ ಅವರು ಬಾಂಗ್ಲಾದೇಶ ವಿರುದ್ಧ ಈ ದಾಖಲೆ ಬರೆದಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧದ ಹ್ಯಾಮಿಲ್ಟನ್ ಪಂದ್ಯದಲ್ಲಿ ಸ್ಮೃತಿ ಮಂಧನಾ ಈ ದಾಖಲೆಯನ್ನು ಸರಿಗಟ್ಟಿದ್ದರು.
ಕೂಟದ ನಾಲ್ಕನೇ ಅತೀ ದೊಡ್ಡ ಸಿಕ್ಸರ್ ಬಾರಿಸಿದ್ದು ಪಾಕಿಸ್ಥಾನದ ನಿದಾ ದರ್ (79 ಮೀಟರ್). ವೆಸ್ಟ್ ಇಂಡೀಸ್ ನ ಹೆಯ್ಲಿ ಮ್ಯಾಥ್ಯೂ ಇಂಗ್ಲೆಂಡ್ ವಿರುದ್ಧ 77 ಮೀಟರ್ ದೂರದ ಸಿಕ್ಸರ್ ಬಾರಿಸಿದ್ದರು.