ರಬಕವಿ-ಬನಹಟ್ಟಿ : ಬಡತನದ ನಡುವೆ ಎಸ್‌ಆರ್‌ಎ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನೆರೆಹೊರೆಯವರ ಆಸರೆಯಲ್ಲಿ ಕಲಿತ ಬನಹಟ್ಟಿಯ ಪೂಜಾ ಉದಯ ಕೊಣ್ಣೂರ ಎಂಬ ವಿದ್ಯಾರ್ಥಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ 600 ಕ್ಕೆ 586 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮೆರೆದಿದ್ದಾಳೆ.
ತಂದೆಯನ್ನು ಕಳೆದುಕೊಂಡ ವಿದ್ಯಾರ್ಥಿಗೆ ಪೂಜಾಳಿಗೆ ತಾಯಿಯೇ ಆಸರೆ. ಹುಟ್ಟಿನಿಂದಲೂ ಕಡುಬಡತನ ಹಾಸಿ ಹೊಚ್ಚಿ ಮಲಗಿದೆ. ಕಳೆದ ಮೂರು ವರ್ಷಗಳಿಂದ ತಂದೆಯ ನಿಧನದಿಂದ ಮತ್ತಷ್ಟು ಜರ್ಜಿತಗೊಂಡಿರುವ ಕುಟುಂಬಕ್ಕೆ ಈತಳ ತಾಯಿ ಕವಿತಾ ದಿನಂಪ್ರತಿ ಹೊಲದಲ್ಲಿ ಕಸ ತೆಗೆಯುವ ಕಾಯಕದಿಂದಲೇ ತನ್ನ ಮೂರು ಮಕ್ಕಳ ಶಿಕ್ಷಣ ಹಾಗು ಕುಟುಂಬದ ಜವಾಬ್ದಾರಿಯಾಗಿದೆ.
ದಿನಂಪ್ರತಿ ಹೊಲ ಕೆಲಸದಿಂದ ಬರುವ 160 ರಿಂದ 200 ರೂ.ಗಳ ಆದಾಯವೇ ಮುಖ್ಯವಾಗಿರುವ ಕಾರಣ ಶಿಕ್ಷಣ ಕಲಿಯುತ್ತ ಸಾಧನೆ ಮಾಡಿದ ವಿದ್ಯಾರ್ಥಿ ಪೂಜಾ ಖಾಲಿ ಸಮಯದಲ್ಲಿ ಹೂ ಪೋಣಿಸುವ ಮೂಲಕ ಹೂವಿನ ಹಾರ ಮಾಡುವ ಕಾಯಕದಲ್ಲಿ ತೊಡಗಿ ಉಳಿದಷ್ಟು ಸಮಯದಲ್ಲಿ ಶಿಕ್ಷಣದ ವಿದ್ಯಾಭಾಸಕ್ಕೆ ಒತ್ತು ನೀಡಿ ಶೇ.97.67 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದು ವಿಶೇಷ.
ಇದನ್ನೂ ಓದಿ : ಭಟ್ಕಳ : ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ : ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ
ಕನಸು: ಸದ್ಯ ಪಿಯುದಲ್ಲಿ ಸಾಧನೆ ಮಾಡಿರೋ ಪೂಜಾಗೆ ಮುಂದೆ ಎಂಜಿನಿಯರಿಂಗ್ ಮಾಡುವಾಸೆ. ನನ್ನ ಕುಟುಂಬದ ಕಷ್ಟ ನೋಡಲಾಗುತ್ತಿಲ್ಲ. ಊಟದ ಪರಿವೇ ಇಲ್ಲದೆ ನನ್ನ ತಾಯಿ ನಮ್ಮನ್ನೆಲ್ಲ ಸಾಕುವ ಸ್ಥಿತಿಯನ್ನು ಕಂಡು ನೋವಿನಿಂದ ಹೇಳುತ್ತ, ಮೊದಲು ನನ್ನ ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡುವ ಮಹಾದಾಸೆಯೆಂದಳು. ಆರ್ಥಿಕ ಸಹಾಯ ಮಾಡಲಿಚ್ಛಿಸುವವರು 87922-55688 ಸಂಪರ್ಕಿಸಬಹುದು.
ಕನ್ನಡ-98, ಇಂಗ್ಲೀಷ್- 95, ಗಣಿತ -100, ಜೀವಶಾಸ್ತ್ರ- 98, ಭೌತಶಾಸ್ತ್ರ -96, ರಸಾಯನ ಶಾಸ್ತ್ರ -93 ಅಂಕಗಳನ್ನು ಪಡೆದು ಪೂಜಾ ಮಾತನಾಡಿ, ಇಷ್ಟೊಂದು ಅಂಕಗಳಿಕೆಗೆ ಉಪನ್ಯಾಸಕರಾದ ಕೆ.ಎಚ್. ಸಿನ್ನೂರ, ನಾಗರಾಜ, ಎಸ್.ಬಿ. ಚಾಂಗ್ಲೇರಿ, ಮಂಜು ಆಲಗೂರ, ಮೀನಾಕ್ಷಿ, ಶಿಲ್ಪಾ ಅಗಡಿಯವರ ಪ್ರೋತ್ಸಾಹ ಕಾರಣವಾಗಿದೆ ಎಂದಳು.