ಹೊಸದಿಲ್ಲಿ: ಪೂಜಾ ಘಾಟ್ಕರ್ ವನಿತೆಯರ 10 ಮೀ. ಏರ್ ರೈಫಲ್‌ನಲ್ಲಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಇಂಟರ್‌ನ್ಯಾಶನಲ್ ಶೂಟಿಂಗ್ ನ್ಪೋರ್ಟ್ಸ್ ಫೆಡರೇಶನ್ (ಐಎಸ್‌ಎಸ್‌ಎಫ್) ವಿಶ್ವಕಪ್ ಕೂಟದಲ್ಲಿ ಭಾರತವು ಪದಕ ಖಾತೆ ತೆರೆಯಿತು.
ತನ್ನ ಚೊಚ್ಚಲ ವಿಶ್ವಕಪ್‌ನಲ್ಲಿ ಆಡಿದ ದೀಪಕ್ ಕುಮಾರ್ ಪುರುಷರ 10 ಮೀ. ಏರ್ ರೈಫಲ್ ಫೈನಲ್‌ನಲ್ಲಿ 185.4 ಅಂಕ ಗಳಿಸುವ ಮೂಲಕ ಐದನೇ ಸ್ಥಾನ ಪಡೆದರು. ಫೈನಲ್ ಹಂತಕ್ಕೇರಿದ್ದ ರವಿ ಕುಮಾರ್ ಅಂತಿಮವಾಗಿ ಎಂಟನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
ವನಿತೆಯರ ಟ್ರ್ಯಾಪ್ ವಿಭಾಗದಲ್ಲಿ ರಾಜೇಶ್ವರಿ ಕುಮಾರಿ 17ನೇ, ಸೀಮಾ ತೋಮರ್ (22ನೇ) ಮತ್ತು ಮನೀಷಾ ಖೀರ್ 29ನೇ ಸ್ಥಾನ ಪಡೆದರು. ಇದರಿಂದಾಗಿ ಅರ್ಹತಾ ಸುತ್ತು ದಾಟಲು ವಿಫಲರಾದರು.
ಭಾರತದ ಪಾಲಿಗೆ ದಿನದ ಗೌರವವನ್ನು 27ರ ಹರೆಯದ ಘಾಟ್ಕರ್ ಪಡೆದರು. ಅಮೋಘ ನಿರ್ವಹಣೆ ನೀಡಿದ ಅವರು ಪದಕವೊಂದನ್ನು ಗೆಲ್ಲಲು ಯಶಸ್ವಿಯಾದರು. ಚಿಕ್ಕ ಪ್ರಾಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಘಾಟ್ಕರ್ ಅವರಿಗೆ ಶೂಟಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಲು ಅಮ್ಮ ಬಹಳಷ್ಟು ಪ್ರೋತ್ಸಾಹ ನೀಡಿದ್ದರು. ಅಮ್ಮನ ಅವಿರತ ಪ್ರಯತ್ನದ ಫಲದಿಂದಾಗಿ ಘಾಟ್ಕರ್ ಇದೀಗ ಶೂಟಿಂಗ್‌ನಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ.
ಈ ಹಿಂದೆ ಎರಡು ಬಾರಿ ಫೈನಲ್‌ನಲ್ಲಿ ಆಡಿದ್ದ ಮಾಜಿ ಏಶ್ಯನ್ ಚಾಂಪಿಯನ್ ಪೂಜಾ 228.8 ಅಂಕ ಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡರು. ಇದು ವಿಶ್ವಕಪ್‌ನಲ್ಲಿ ಅವರಿಗೆ ಲಭಿಸಿದ ಮೊದಲ ಪದಕವಾಗಿದೆ.