ಚಾಮರಾಜನಗರ: ನಡೆದಾಡುವ ದೇವರು ಸಿದ್ಧಗಂಗೆಯ ಶ್ರೀ ಶಿವಕುಮಾರಸ್ವಾಮೀಜಿಯವರು ಶೀಘ್ರ ಗುಣಮುಖ ರಾಗಲೆಂದು ಪ್ರಾರ್ಥಿಸಿ ಅಖೀಲ ಭಾರತ ವೀರಶೈವ ಲಿಂಗಾ ಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ನಗರದ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನೂರ ಹನ್ನೊಂದು ಈಡುಗಾಯಿ ಒಡೆಯಲಾಯಿತು.
ಕೊಳದ ಗಣಪತಿ ದೇವಸ್ಥಾನದ ಬಳಿ ಸಮಾವೇಶಗೊಂಡ ನೂರಾರು ಮಂದಿ, ಸ್ವಾಮೀಜಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನೂರ ಹನ್ನೊಂದು ಈಡುಗಾಯಿ ಒಡೆದರು.
ಹಂಡ್ರಕಳ್ಳಿ ಮಠಾಧೀಶರಾದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ನಡೆದಾಡುವ ದೇವರು ಎಂದೇ ಖ್ಯಾತರಾದ ಅನ್ನದಾಸೋಹ, ಜ್ಞಾನ ದಾಸೋಹಿಗಳಾದ, ಮಹಾ ತಪಸ್ವಿ ಶ್ರೀ ಶಿವಕುಮಾರ ಸ್ವಾಮೀಜಿಯವರು ಶೀಘ್ರ ಗುಣ ಮುಖರಾಗಲಿ. ಅವರು ಸಾವಿರಾರು ಬಡ ಜನರಿಗೆ ಜ್ಞಾನ ದಾಸೋಹ, ಅನ್ನದಾಸೋಹ ನೀಡಿದ್ದಾರೆ. ಅವರು ಸದಾ ಚೆನ್ನಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಾವುದವಾಡಿ ಗುರು, ಮುಖಂಡರಾದ ಪಿ. ಮರಿಸ್ವಾಮಿ, ನಟರಾಜು, ನಟೇಶ್, ಆರ್. ಮಹದೇವಸ್ವಾಮಿ, ವೃಷಭೇಂದ್ರ, ಸಂಪತ್ತು, ಕೋಟಂಬಳ್ಳಿ ವೀರಭದ್ರಸ್ವಾಮಿ, ಡೈರಿ ಪುರುಷೋತ್ತಮ್, ಬಿರ್ಲಾ ನಾಗರಾಜು, ಇಂಚರ ಮಂಜು, ಕುಮಾರ್, ಜಿ.ಪಂ. ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ನಾಗಶ್ರೀ ಪ್ರತಾಪ್ ಮತ್ತಿತರರು ಇದ್ದರು.
ಶ್ರೀಗಳ ಆರೋಗ್ಯಕ್ಕಾಗಿ ಪಾರ್ಥನೆ, ಸೇವೆ ಚಾಮರಾಜನಗರ: ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಅವರ ಭಕ್ತ ವೃಂದದಿಂದ ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಲಾಯಿತು. ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸ್ವಾಮೀಜಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಪ್ರಾಂಗಣದಲ್ಲಿ ಉರುಳು ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಆಲೂರು ಮಲ್ಲು, ಸಿದ್ದಗಂಗಾ ಮಠವು ನಾಡಿನ ಅಕ್ಷರ, ಹಾಗೂ ಅನ್ನ ದಾಸೋಹದ ಕೇಂದ್ರವಾಗಿದ್ದು, ಶ್ರೀಗಳ ಮಾರ್ಗದರ್ಶನದಲ್ಲಿ ದಿನನಿತ್ಯ ಸಾವಿರಾರು ಮಕ್ಕಳಿಗೆ ಅಕ್ಷರ,ಅನ್ನ ದಾಸೋಹ ನಡೆಯುತ್ತಿದೆ. ಶ್ರೀಗಳು ನಡೆದಾಡುವ ದೇವರಾಗಿದ್ದು ಅವರ ಆರೋಗ್ಯವು ಸುಧಾರಣೆಯಾಗಲಿ ಎಂದು ದೇವರಿಗೆ ಪೂಜೆ ಸಲ್ಲಿಸಿ, ಉರುಳು ಸೇವೆ ಮಾಡಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದರು.