ಮುಂಬೈ : ಟಿಕ್ ಟಾಕ್ ಸ್ಟಾರ್ ಪೂಜಾ ಚವ್ಹಾಣ್ ಆತ್ಮಹತ್ಯೆಯ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಆರೋಪದ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರದ ಅರಣ್ಯ ಸಚಿವ ಶಿವಸೇನೆಯ ಸಂಜಯ್ ರಾಥೋಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು (ಫೆ.28) ಮಧ್ಯಾಹ್ನ ತಮ್ಮ ಪತ್ನಿ ಜತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ಮಾಡಿದ ಸಚಿವರು, ಕೆಲ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಬಳಿಕ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿ, ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ರಾಜೀನಾಮೆ ಅಂಗೀಕರಿಸದಂತೆ ಮನವಿ ಮಾಡಿದರು.
ಏನಿದು ಪ್ರಕರಣ ?
ಫೆ.8 ರಂದು 22 ವರ್ಷದ ಪೂಜಾ ಚವ್ಹಾಣ್ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಳು. ಬೀಡ್ ಜಿಲ್ಲೆಯ ಪರ್ಲಿ ಗ್ರಾಮದ ಈಕೆ ಶಿಕ್ಷಣ ಪಡೆಯಲೆಂದು ಪುಣೆಯಲ್ಲಿ ತಂಗಿದ್ದರು. ಟಿಕ್ ಟಾಕ್ ನಲ್ಲಿ ಸ್ಟಾರ್ ಪಟ್ಟ ಪಡೆದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ರಹಸ್ಯವಾಗಿಯೇ ಉಳಿದಿದೆ. ಆದರೆ, ಪೂಜಾ ಆತ್ಮಹತ್ಯೆಯ ಪ್ರಕರಣದಲ್ಲಿ ಸಚಿವ ಸಂಜಯ್ ರಾಥೋಡ್ ಅವರ ಹೆಸರು ತಳುಕು ಹಾಕಿಕೊಂಡಿದೆ.
ಆತ್ಮಹತ್ಯೆ ಘಟನೆ ನಂತರ ರಾಥೋಡ್ ಜತೆಗಿನ ಪೂಜಾಳ ಕೆಲ ಖಾಸಗಿ ಫೋಟೊಗಳು ಹಾಗೂ ಆಡಿಯೋ ಕ್ಲಿಪ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆತ್ಮಹತ್ಯೆಗೆ ಮುನ್ನ ಪೂಜಾಳಿಗೆ ಸಚಿವ ಸಂಜಯ್ ಹಲವು ಬಾರಿ ಕರೆ ಮಾಡಿದ್ದ. ಅವಳ ಸಾವಿನಲ್ಲಿ ಸಂಜಯ್ ಪಾತ್ರವಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ಕೂಡ ನಡೆಸಿತ್ತು.
ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಂಜಯ್ ರಾಥೋಡ್ ಅವರ ರಾಜೀನಾಮೆ ಪಡೆದಿದ್ದಾರೆ.