Advertisement
ಆಟಿ ಮಾರಿಪೂಜೆಯ ಪ್ರಯುಕ್ತ ಕಾಪು ಹಳೆ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಯಮ್ಮ ದೇವಸ್ಥಾನಗಳಿಗೆ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭೇಟಿ ನೀಡಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಗದ್ದಿಗೆ ಪೂಜೆ ಸೇವೆ ಸಲ್ಲಿಕೆಯಾಗಿದೆ. ಉಳಿದಂತೆ ಎಲ್ಲ ಸೇವೆಗಳೂ ಮಾಮೂಲಿನಂತೆ ನಡೆದಿವೆಯಾದರೂ, ರಕ್ತಾಹಾರ ರೂಪದಲ್ಲಿ ಬಲಿ ನೀಡಲಾಗುವ ಕುರಿ, ಆಡು, ಕೋಳಿ ಮಾರಾಟಗಾರರು ಮಾತ್ರಾ ಹೆಚ್ಚಿನ ನಷ್ಟ ಅನುಭವಿಸು ವಂತಾಗಿದೆ.
ಸಮುದ್ರದ ಅಬ್ಬರ ಕಡಿಮೆ ಯಾಗದೇ ಇರುವುದರಿಂದ ಮತ್ತು ಕಡಲಿನಲ್ಲಿ ಮೀನುಗಾರಿಕೆಗೆ ಪೂರಕವಾಗುವ ತೂಫಾನ್ ತಡವಾಗಿ ಎದ್ದಿರುವುದರಿಂದ ಕರಾವಳಿಯಲ್ಲಿ ಬುಧವಾರವಷ್ಟೇ ನಾಡದೋಣಿ ಮೀನುಗಾರಿಕೆಗೆ ಚಾಲನೆ ದೊರಕಿದೆ. ಸಾಮಾನ್ಯ ವಾಗಿ ನಾಡದೋಣಿ ಮೀನುಗಾರರು ತಮ್ಮ ಫಂಡ್ ಮೂಲಕವಾಗಿ ಹರಕೆ ರೂಪದಲ್ಲಿ ಕುರಿ – ಆಡುಗಳನ್ನು ಮಾರಿಯಮ್ಮ ದೇವಿಗೆ ಬಲಿ ನೀಡುತ್ತಾ ಬರುತ್ತಿದ್ದು, ಈ ಬಾರಿ ಮೀನುಗಾರಿಕೆ ವಿಳಂಬವಾಗಿರುವುದರಿಂದ ಎಲ್ಲರಿಗೂ ಅಂತಹ ಹರಕೆಯನ್ನು ಸಲ್ಲಿಸಲು ಸಾಧ್ಯ ವಾಗಿಲ್ಲ ಎನ್ನುತ್ತಾರೆ ಮೀನುಗಾರ ಮುಖಂಡ ವಿಜಯ ಕರ್ಕೇರ ಪೊಲಿಪು. ಹೊಸ ಮಾರಿಗುಡಿಗೆ 40 ಸಾವಿರ ಭಕ್ತರು ಭೇಟಿ ಆಟಿ ಮಾರಿಪೂಜೆಯ ಸಂದರ್ಭ ಮಳೆ ಬಿಟ್ಟು ಬಿಸಿಲಿನ ವಾತಾವರಣ ವಿದ್ದುದರಿಂದಾಗಿ ಸುಮಾರು 30ರಿಂದ 40 ಸಾವಿರ ಭಕ್ತರು ಆಗಮಿಸಿರುವ ಸಾಧ್ಯತೆಗಳಿವೆ. ರಾತ್ರಿ ವೇಳೆ ಭಕ್ತರ ಸಂಖ್ಯೆ ಕಡಿಮೆಯಿದ್ದರೂ ಹಗಲಿನಲ್ಲಿ ಹೆಚ್ಚಿನ ಭಕ್ತರು ಆಗಮಿಸಿದ್ದಾರೆ. ಹೊಸ ಮಾರಿಗುಡಿಯಲ್ಲಿ ದೇವರಿಗೆ 15 ಸಾವಿರದಷ್ಟು ಗದ್ದಿಗೆ ಪೂಜೆ ಸಹಿತ ವಿವಿಧ ಸೇವೆಗಳು ಸಮರ್ಪಣೆಯಾಗಿವೆ ಎಂದು ಕಾಪು ಹೊಸ ಮಾರಿಗುಡಿಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
Related Articles
ಕುರಿ, ಆಡು, ಕೋಳಿ ಮಾರಾಟ ಗಾರರ ಅಭಿಪ್ರಾಯದಂತೆ ಈ ಮಾರಿಪೂಜೆ ಯಲ್ಲಿ ಹೊರಗಿನವರಿಗಿಂತಲೂ ಸ್ಥಳೀಯ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೂ, ಅವರಲ್ಲಿ ಹಣಕಾಸಿನ ಚಲಾವಣೆ ಕಡಿಮೆಯಾಗಿದ್ದರಿಂದ ನಮಗೆ ವ್ಯಾಪಾರ ತುಂಬಾ ಕಡಿಮೆಯಾಗಿದೆ. ಸಾಮಾನ್ಯವಾಗಿ ಕೃಷಿಕರು ಮತ್ತು ಮೀನುಗಾರರು ಹೆಚ್ಚಾಗಿ ಕುರಿ-ಕೋಳಿ ಬಲಿ ನೀಡುತ್ತಾ ಬರುತ್ತಿದ್ದು, ಈ ಬಾರಿ ಇನ್ನು ಕೂಡ ಮೀನುಗಾರಿಕೆಗೆ ಚಾಲನೆ ದೊರಕದೇ ಇರುವುದರಿಂದ ವ್ಯಾಪಾರ ಕಡಿಮೆಯಾಗುವಂತಾಗಿದೆ ಎನ್ನುವುದು ವ್ಯಾಪಾರಸ್ಥರ ಅಳಲು.
Advertisement
ಕೋಳಿ ವ್ಯಾಪಾರದಲ್ಲಿ ಶೇ. 20ರಷ್ಟು ಕುಸಿತ ಸುಗ್ಗಿ ಮಾರಿಪೂಜೆಗೂ ಆಟಿ ಮಾರಿಪೂಜೆಗೂ ಹೋಲಿಸಿದರೆ ಆಟಿ ಮಾರಿಪೂಜೆಯ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಮೊದಲೇ ಕಡಿಮೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆಟಿ ಮಾರಿಪೂಜೆಗೆ ಬಂದವರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಕೋಳಿ ಮಾರಾಟ ವೃದ್ಧಿಯಾದರೆ, ಈ ಬಾರಿ ಕೋಳಿ ವ್ಯಾಪಾರದಲ್ಲಿ ಶೇ. 20ರಷ್ಟು ವ್ಯವಹಾರ ಕಡಿಮೆಯಾಗಿದೆ. ಕೋಳಿಗೆ ದರ ಕಡಿಮೆಯಿದ್ದರೂ ಜನರಿಂದ ಹಿಂದಿನಷ್ಟು ಬೇಡಿಕೆ ವ್ಯಕ್ತವಾಗಿಲ್ಲ ಎಂದು ಕೋಳಿ ವ್ಯಾಪಾರಿ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಕುರಿ – ಆಡು ಮಾರಾಟ ಶೇ. 40ರಷ್ಟು ಕುಸಿತ
ಕಾಪು ಮಾರಿಯಮ್ಮ ದೇವಿಗೆ ಕುರಿ – ಆಡು ಸಮರ್ಪಣೆ ಅತ್ಯಂತ ವಿಶೇಷದ್ದಾಗಿದ್ದು, ಪ್ರತೀ ವರ್ಷ ಆಟಿ ಮಾರಿಪೂಜೆಯ ಸಂದರ್ಭ ಕನಿಷ್ಟ 100 ಕುರಿಗಳ ಮಾರಾಟವಾಗುತ್ತದೆ. ಮತ್ತು ಅದಕ್ಕಿಂತಲೂ ಹೆಚ್ಚು ಕುರಿಗಳ ಬಲಿ ನೀಡಲಾಗುತ್ತದೆ. ಆದರೆ ಕಾಪುವಿನಲ್ಲಿ ಈ ಬಾರಿ ಕೇವಲ 50-60 ಕುರಿಗಳು ಮಾರಾಟವಾಗಿದ್ದು, ವ್ಯಾಪಾರ ಶೇ. 40ರಷ್ಟು ಕುಸಿತ ಕಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಅತೀ ಕಡಿಮೆ ವ್ಯಾಪಾರವಾಗಿದೆ.
– ವಿವೇಕ್ ಕಲಾಲ್‌ಕಾಪುವಿನ ಮಟನ್ ಸ್ಟಾಲ್ ವ್ಯಾಪಾರಿ