ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನೂತನ ಚಿತ್ರ ಪೊನ್ನಿಯಿನ್ ಸೆಲ್ವನ್: ಭಾಗ 1 ಭರ್ಜರಿ ಯಶಸ್ಸು ಕಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿರುವ ದಕ್ಷಿಣದ ಚಿತ್ರ ಈಗ ವಿಶ್ವದಾದ್ಯಂತ 350 ಕೋಟಿ ರೂಪಾಯಿಗಳ ಗಡಿಯತ್ತ ಹೆಜ್ಜೆ ಹಾಕಿದೆ.
ಟ್ರೇಡ್ ರಿಪೋರ್ಟ್ ಗಳ ಪ್ರಕಾರ, ಪೊನ್ನಿಯಿನ್ ಸೆಲ್ವನ್ ವಾರದ ದಿನಗಳಲ್ಲಿಯೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರವು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸೆ. 30 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಪೊನ್ನಿಯಿನ್ ಸೆಲ್ವನ್: 1 ಚಿತ್ರವು ತನ್ನ ಮೊದಲ ವಾರದಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 325 ಕೋಟಿಗೂ ಹೆಚ್ಚು ಗಳಿಸಿದೆ ಎಂದು ವ್ಯಾಪಾರ ವಿಶ್ಲೇಷಕ ತ್ರಿನಾಥ್ ಖಚಿತಪಡಿಸಿದ್ದಾರೆ. 2.0, ಎಂಥಿರನ್, ಕಬಾಲಿ, ಬಿಗಿಲ್ ಮತ್ತು ವಿಕ್ರಮ್ ಸಿನಿಮಾಗಳ ನಂತರ 300 ಕೋಟಿ ಕ್ಲಬ್ ಸೇರಿದ ಆರನೇ ತಮಿಳು ಚಿತ್ರ ಇದಾಗಿದೆ ಎಂದು ತ್ರಿನಾಥ್ ಹೇಳಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಪೊನ್ನಿಯಿನ್ ಸೆಲ್ವನ್ ಚಿತ್ರವು ಕಬಾಲಿ ಮತ್ತು ಎಂಥಿರನ್ ಕಲೆಕ್ಷನ್‌ಗಳನ್ನು ಹಿಂದಿಕ್ಕಿದೆ. ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಚಿತ್ರಗಳಲ್ಲಿ 2.0 ಮತ್ತು ವಿಕ್ರಮ್ ಮೊದಲೆರಡು ಸ್ಥಾನದಲ್ಲಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ ಗೆ ಭಾರತ ತಂಡದೊಂದಿಗೆ ಹೊರಟ ಇಬ್ಬರು ಎಡಗೈ ವೇಗಿಗಳು
ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಪೊನ್ನಿಯನ್ ಸೆಲ್ವನ್ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಶಾ, ಕಾರ್ತಿ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಕಾಶ್ ರಾಜ್, ಜಯರಾಮ್, ಐಶ್ವರ್ಯ ಲಕ್ಷ್ಮಿ, ಸೋಭಿತಾ ಧೂಳಿಪಾಲ, ಪ್ರಭು, ಲಾಲ್ ಮತ್ತು ವಿಕ್ರಮ್ ಪ್ರಭು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.