Advertisement

ಕುಣಿಗಲ್‌ನಲ್ಲಿ 949 ವರ್ಷಗಳ ಹಳೆ ದೇವಾಲಯ ನಾಪತ್ತೆ : ಸರಕಾರಕ್ಕೆ ತಮಿಳುನಾಡಿನ ಅಧಿಕಾರಿ ಪತ್ರ

08:03 AM Jul 15, 2022 | Team Udayavani |

ಬೆಂಗಳೂರು : ತುಮಕೂರು ಜಿಲ್ಲೆಯ ಕುಣಿಗಲ್‌ನ ಕೋಟೆಗಿರಿ ಗ್ರಾಮದಲ್ಲಿ ರಾಜ ರಾಜ ಚೋಳ-1 ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಾಲಯದ ಕುರುಹು ಇಲ್ಲವಾಗಿದ್ದು, ಜತೆಗೆ ವಿಗ್ರಹವೂ ನಾಪತ್ತೆಯಾಗಿದೆ ಎಂದು ತಮಿಳುನಾಡಿನ ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಅಲ್ಲಿನ ಸರಕಾರಕ್ಕೆ ಬರೆದಿರುವ ಪತ್ರ ಈಗ ಚರ್ಚೆಗೆ ಕಾರಣವಾಗಿದೆ.

Advertisement

ಈ ಪತ್ರದ ಬೆನ್ನಲ್ಲೇ ಈಗ ಇತಿಹಾಸ ತಜ್ಞರು ಈ ದೇಗುಲದ ಕುರುಹುಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ, ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆ ಬಳಿ ಈ ಕುರಿತು ಹೆಚ್ಚಿನ ಮಾಹಿತಿಗಳು ಇಲ್ಲ ಎಂದು ಹೇಳಲಾಗುತ್ತಿದೆ.

ನಾಪತ್ತೆಯಾಗಿರುವ ಈ ದೇವಾಲಯಯನ್ನು ಕರ್ನಾ ಟಕ ಸರಕಾರದ ಸಹಕಾರದೊಂದಿಗೆ ಪತ್ತೆ ಮಾಡಲು ಮುಂದಾಗಬೇಕು ಎಂದು ತಮಿಳುನಾಡಿನ ಮಾಜಿ ಇನ್‌ಸ್ಪೆಕ್ಟರ್‌ ಜನರಲ್‌ ಆಫ್ ಪೊಲೀಸ್‌ (ಐಜಿಪಿ) ಎ.ಜಿ. ಪೊನ್‌ ಮಾಣಿಕ್ಕವೆಲ್‌ ತಮಿಳುನಾಡು ಸರಕಾರವನ್ನು ಆಗ್ರಹಿಸಿದ್ದಾರೆ.

ಪತ್ರದಲ್ಲಿ, ರಾಜರಾಜ ಚೋಳ-1 ಅವರ ಮೊಮ್ಮಗ ಹಾಗೂ ರಾಜೇಂದ್ರ ಚೋಳ-1 ಅವರ ಪುತ್ರ ಉದಯರ್‌ ರಾಜಾಧಿ ರಾಜ ದೇವರು-1 ಕುಣಿಗಲ್‌ನಲ್ಲಿ “ರಾಜೇಂದ್ರ ಚೋಳಪುರಂ’ ಎಂಬ ಪಟ್ಟಣವನ್ನು ಸ್ಥಾಪಿಸಿದ್ದ. 949 ವರ್ಷಗಳ ಹಿಂದೆ ಕುಣಿಗಲ್‌ನಿಂದ 5 ಕಿ. ಮೀ. ದೂರದಲ್ಲಿರುವ ಕೋಟೆಗಿರಿ ಗ್ರಾಮದಲ್ಲಿ ತಮ್ಮ ತಂದೆಯ ನೆನಪಿಗಾಗಿ “ರಾಜೇಂದ್ರ ಚೋಳೀಶ್ವರಂ’ ಎಂಬ ದೇವಾಲಯವನ್ನು ನಿರ್ಮಿಸಿದ್ದ. ದೇವಾಲಯಕ್ಕೆ ಅಪರೂಪದ ಕಂಚಿನ ನಟರಾಜ ವಿಗ್ರಹವನ್ನು (ಈ ವಿಗ್ರಹವನ್ನು “ರಾಜಾಧಿರಾಜ ವಿಂಧಗರ್‌’ ಎಂದು ಕರೆಯುತ್ತಾರೆ) ದಾನ ಮಾಡಿದ್ದರು. ಇದು ಅಪರೂಪದ ಕಲ್ಲಿನ ವಿಗ್ರಹವಾಗಿದೆ ಎಂಬುದನ್ನು ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಪಿ.ಕೆ.ಸೇಕರ್‌ಬಾಬು ತಮ್ಮ ಲೇಖನದಲ್ಲಿ ಉಲ್ಲೇಖೀಸಿದ್ದಾರೆ. ಅವರ ಆಪ್ತ ಮೂಲಗಳು ದೇವಾಲಯದ ವಿವರಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮಾಣಿಕ್ಕವೇಲ್‌ ತಮಿಳುನಾಡು ಸರಕಾರದ ಗಮನಕ್ಕೆ ತಂದಿದ್ದಾರೆ.

ಕುಣಿಗಲ್‌ನ ಕೋಟೆಗಿರಿಯಲ್ಲಿ ದೇವಾಲಯ ಮತ್ತು ವಿಗ್ರಹಗಳು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು, ದೇವಾಲಯ ಇರುವ ಪ್ರದೇಶವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಕು, ತಮಿಳುನಾಡಿನ ಅಧಿಕಾರಿಗಳು ಶಿಲಾ ಶಾಸನಗಳನ್ನು ವಾಪಸ್‌ ಪಡೆಯಬೇಕು ಎಂದು ಮಾಣಿಕ್ಕವೇಲ್‌ ಪತ್ರದಲ್ಲಿ ಆಗ್ರಹಿಸಿದ್ದಾರೆ.

Advertisement

ಈ ವಿಚಾರ ತಿಳಿದ ಬಳಿಕ ಖ್ಯಾತ ಇತಿಹಾಸ ತಜ್ಞ ಡಾ| ಎಚ್‌.ಎಸ್‌. ಗೋಪಾಲ್‌ ರಾವ್‌ ನೇತೃತ್ವದ ತಂಡವು ಶುಕ್ರವಾರ ಕೋಟೆಗಿರಿಗೆ ತೆರಳಿ ದೇವಾಲಯದ ಕುರುಹು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಅಷ್ಟು ಪುರಾತನ ದೇವಾಲಯಗಳು ಬಹುತೇಕವಾಗಿ ಇರುವುದಿಲ್ಲ. ಕೋಟೆಗಿರಿ ಗ್ರಾಮದಲ್ಲಿ ಬಹಳಷ್ಟು ವರ್ಷಗಳ ಹಿಂದೆ ವೀರಗಲ್ಲು ಪತ್ತೆಯಾಗಿದ್ದು, ಅದರಲ್ಲಿ ದೇವಾಲಯದ ಕುರಿತು ಉಲ್ಲೇಖಗಳಿರುವ ಸಾಧ್ಯತೆಗಳಿವೆ. ವೀರಗಲ್ಲು ಪತ್ತೆಯಾದ ಸಂದರ್ಭದಲ್ಲೂ ಅಲ್ಲಿ ದೇವಾಲಯ ಇರಲಿಲ್ಲ. ಚೋಳರು ಬಹುತೇಕ ಕಡೆ ಗಂಗರ ಜತೆ ಸೇರಿ ತಮಿಳು ಶಾಸನಗಳನ್ನು ಹಾಕಿಸಿದ್ದಾರೆ. ಪತ್ತೆಯಾಗಿರುವ ವೀರಗಲ್ಲುಗಳು ಸುರಕ್ಷಿತವಾಗಿವೆ. ಆದರೆ ದೇವಾಲಯ ನಶಿಸಿ ಹೋಗಿರುವ ಸಾಧ್ಯತೆಗಳಿವೆ. ಕುಣಿಗಲ್‌ ಬಳಿ ತಮಿಳು ಶಾಸನ, ವಿಷ್ಣುವರ್ಧನನ ಶಾಸನ ಹಾಗೂ ಬಸದಿಗೆ ಸಂಬಂಧಿಸಿದ ಶಾಸನಗಳು ಸಿಕ್ಕಿವೆ. ಮಾಣಿಕ್ಕವೇಲ್‌ ಯಾವುದಾದರೂ ದಾಖಲೆ ಒದಗಿಸಿದರೆ ದೇವಾಲಯ ಇದ್ದ ಬಗ್ಗೆ ಕುರುಹುಗಳು ಸಿಗುತ್ತವೆಯೇ ಎಂದು ಪರಿಶೀಲಿಸಬಹುದು.

ಸದ್ಯ ಕೋಟೆಗಿರಿಯಲ್ಲಿ ಈಶ್ವರ ದೇವಾಲಯವೊಂದು ಇರುವುದು ಗೊತ್ತಾಗಿದ್ದು, ಅಲ್ಲಿಗೆ ಭೇಟಿ ನೀಡುತ್ತೇವೆ. ಅಲ್ಲಿ ಶಿಲ್ಪಕಲೆಗಳಿದ್ದರೆ ಅವುಗಳನ್ನು ಪರಿಶೀಲಿಸಿ, ಮಾಣಿಕ್ಕವೇಲ್‌ ಹೇಳಿರುವ ದೇಗುಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಡಾ| ಗೋಪಾಲ್‌ ರಾವ್‌ ಅವರು ಉದಯವಾಣಿಗೆ ತಿಳಿಸಿದ್ದಾರೆ.

ಡಾ| ಕೆ. ರೇವಣಸಿದ್ದಯ್ಯ ಅವರು ಬರೆದಿರುವ ಕುಣಿಗಲ್‌ ಶೋಧ ಸಂಶೋಧನ ಕೃತಿಯಲ್ಲೂ ಕುಣಿಗಲ್‌ ಪ್ರದೇಶದಲ್ಲಿ ದೊರೆತಿರುವ ಕನ್ನಡ ಮತ್ತು ತಮಿಳು ಭಾಷೆಯ ಶಿಲಾ ಶಾಸನಗಳಲ್ಲಿ ಕುಣಿಗಲ್‌ ನಾಡು ಕುಣಿಂಗಿಲ್‌ ನಾಟ್ಟು ರಾಜೇಂದ್ರಚೋಳಪುರಂ ಕುಣಿಗಲ್‌ ದೇಶ ಕುಣಿಗಿಲು, ಕುಣಿಗಲ್‌ ಸೀಮೆ, ಕುಣಿಗಲ್‌ ಸ್ಥಳ ಎಂದು ಕರೆಯಲ್ಪಡುತ್ತಿತ್ತು ಎಂದು ಉಲ್ಲೇಖೀಸಲಾಗಿದೆ.

ಯಾರು ಈ ಮಾಣಿಕ್ಕವೇಲ್‌
ಮಾಣಿಕ್ಕವೇಲ್‌ ಈ ಹಿಂದೆ ಐಡಲ್‌ ವಿಂಗ್‌ನಲ್ಲಿ (ವಿಗ್ರಹ ವಿಭಾಗ) ಐಜಿಪಿಯಾಗಿದ್ದರು. ತಮಿಳುನಾಡಿನ ದೇವಾಲಯಗಳಿಂದ ವಿಗ್ರಹಗಳು ಮತ್ತು ಕಲಾಕೃತಿಗಳ ಕಳ್ಳತನಕ್ಕೆ ಸಂಬಂಧಿಸಿ ಹಲವಾರು ಪ್ರಕರಣಗಳನ್ನು ಭೇದಿಸಿದ್ದರು. ಹೈಕೋರ್ಟ್‌ ನೇಮಿಸಿದ ತನಿಖಾ ತಂಡದ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪುರಾತನ ವಿಗ್ರಹ ಹಾಗೂ ರಾಜ ಮಹಾರಾಜರ ಕಾಲದ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next