ಕಡಬ: ಮರ್ದಾಳದ ಪಾಲೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಜಯ ಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಸ್ಮಾಟ್ ಕ್ಲಾಸ್ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಬೆಳ್ಳಿಪ್ಪಾಡಿ ಮಾತನಾಡಿ, ಪ್ರತಿಷ್ಠಾನದ ವತಿಯಿಂದ ನಮ್ಮ ಈ ಭಾಗಕ್ಕೆ ಅನೇಕ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಮರ್ದಾಳ ವಲಯದಲ್ಲಿ ಸಮಿತಿಯ ಪದಾಧಿಕಾರಿಗಳ ಸಹಕಾರದಿಂದ ಹೆಚ್ಚಿನ ನೆರವನ್ನು ಒದಗಿಸಲಾಗಿದೆ ಎಂದರು.
ಪ್ರತಿಷ್ಠಾನದ ಮರ್ದಾಳ ವಲಯ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಕೈಕುರೆ ಮಾತನಾಡಿ, ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಅವರು ನಮ್ಮೂರಿನವರೇ ಆಗಿರುವುದರಿಂದ ಮರ್ದಾಳಕ್ಕೆ ಹೆಚ್ಚಿನ ಸೌಲಭ್ಯಗಳು ಲಭಿಸಿವೆ. ಪಾಲೆತ್ತಡ್ಕ ಶಾಲೆಗೆ 80 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಕ್ಲಾಸ್ ಪರಿಕರಗಳನ್ನು ಒದಗಿಸಿಕೊಟ್ಟಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಸೆಲ್ಕೊ ಸೋಲಾರ್‌ನ ಪುತ್ತೂರು ಶಾಖಾ ಮಾರಾಟ ಮೇಲ್ವಿಚಾರಕ ಚಿದಾನಂದ ಎ.ಎಸ್. ಅವರು ಸ್ಮಾರ್ಟ್ ಕ್ಲಾಸ್ ಪರಿಕರ ಹಸ್ತಾಂತರಿಸಿ, 1994ರಲ್ಲಿ ಪ್ರಾಂಭಗೊಂಡ ಸೆಲ್ಕೋ ಸೋಲಾರ್ ಸಂಸ್ಥೆ ಮನೆ ಮನೆಗೆ ಬೆಳಕನ್ನು ನೀಡುವುದರೊಂದಿಗೆ ಬೇರೆ ಬೇರೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸ್ವ ಉದ್ಯೋಗಕ್ಕೆ ಪೂರಕವಾಗಿ ಸೋಲಾರ್ ಜೆರಾಕ್ಸ್ ಮಿಷನ್, ಸೋಲಾರ್ ಟೇಲರಿಂಗ್ ಮಿಷನ್, ಮಿಲ್ಕಿಂಗ್ ಮಿಷನ್ ಹಾಗೂ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಸಲುವಾಗಿ ಸ್ಮಾಟ್ ಕ್ಲಾಸ್ ಪರಿಕರಗಳನ್ನು ಮಿತ ದರದಲ್ಲಿ ಒದಗಿಸುತ್ತಿದೆ ಎಂದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶರೀಫ್ ಸಿ.ಎಂ. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಶಾಲಾ ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ರೈ ಮುಂಡ್ರಾಡಿ, ಮರ್ದಾಳ ಗ್ರಾ.ಪಂ. ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ರೇಖಾ ಸ್ವಾಗತಿಸಿದರು. ಶಿಕ್ಷಕ ಪ್ರವೀಣ ಎಸ್.ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.