Advertisement

Delhi: ಮಾಲಿನ್ಯ ವಿಷ 30 ಸಿಗರೇಟ್‌ಗೆ ಸಮ!-ಆರೋಗ್ಯ ತುರ್ತು ಪರಿಸ್ಥಿತಿಯ ಹೊಸ್ತಿಲಲ್ಲಿ ದೆಹಲಿ

10:45 PM Nov 04, 2023 | Pranav MS |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು “ವಿಷಗಾಳಿಯ ಪರದೆ”ಯೊಳಗೆ ಸಿಲುಕಿ ನಲುಗಲಾರಂಭಿಸಿವೆ. ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, “ಆರೋಗ್ಯ ತುರ್ತು ಪರಿಸ್ಥಿತಿ” ಘೋಷಿಸಬೇಕಾದ ಅನಿವಾರ್ಯತೆ ಉಂಟಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಶನಿವಾರ ರಾಜಧಾನಿ ಪ್ರದೇಶದ ವಾಯುಮಾಲಿನ್ಯ ಸೂಚ್ಯಂಕ (ಎಕ್ಯೂಐ) 413 ಆಗಿದೆ. ವಿಷಯುಕ್ತ ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ 2.5) ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಮಿತಿಗಿಂತ 80 ಪಟ್ಟು ಹೆಚ್ಚಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಶುಕ್ರವಾರ ಮತ್ತು ಶನಿವಾರ ಇಲ್ಲಿನ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು. ಪರಿಸ್ಥಿತಿಯ ಭೀಕರತೆಯನ್ನು ವಿವರಿಸಿರುವ ಮೇದಾಂತ ಆಸ್ಪತ್ರೆಯ ಹಿರಿಯ ಶ್ವಾಸಕೋಶ ತಜ್ಞ ಡಾ.ಅರವಿಂದ ಕುಮಾರ್‌, “ದಿನಕ್ಕೆ 25-30 ಸಿಗರೇಟು ಸೇದುವುದು ನಮ್ಮ ದೇಹದ ಮೇಲೆ ಎಂಥ ದುಷ್ಪರಿಣಾಮ ಬೀರುತ್ತದೋ, ಅಷ್ಟೇ ದುಷ್ಪರಿಣಾಮವನ್ನು ದೆಹಲಿಯ ಜನರ ಮೇಲೆ ವಾಯುಮಾಲಿನ್ಯವು ಬೀರುತ್ತಿದೆ’ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಇನ್ನೂ ಜನ್ಮ ತಾಳದಿರುವ ಮಗುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲಾ ವಯೋಮಾನದವರ ಆರೋಗ್ಯದ ಮೇಲೆ ಮಾಲಿನ್ಯವು ಪ್ರತಿಕೂಲ ಪರಿಣಾಮ ಬೀರುತ್ತಿದೆ. ತಾಯಿಯು ಮಾಲಿನ್ಯಯುಕ್ತ ಗಾಳಿಯನ್ನು ಉಸಿರಾಡುವುದರಿಂದ ಗರ್ಭದಲ್ಲಿರುವ ಶಿಶುವಿಗೂ ತೊಂದರೆ ಆಗುತ್ತಿದೆ ಎಂಬ ಆಘಾತಕಾರಿ ವಿಚಾರವನ್ನೂ ಅವರು ಬಹಿರಂಗಪಡಿಸಿದ್ದಾರೆ. ಮಾಲಿನ್ಯಯುಕ್ತ ಅಂಶಗಳು ತಾಯಿಯ ಶ್ವಾಸಕೋಶ, ರಕ್ತಕ್ಕೆ ಸೇರುತ್ತದೆ. ಹೊಕ್ಕುಳಬಳ್ಳಿಯ ಮೂಲಕ ಶಿಶುವಿನ ದೇಹವನ್ನು ಅವು ಸೇರಿಕೊಳ್ಳುತ್ತವೆ. ಗರ್ಭದಲ್ಲಿರುವ ಶಿಶುವು 30 ಸಿಗರೇಟಿಗೆ ಸಮನಾದ ಮಾಲಿನ್ಯಕಾರಿ ಅಂಶಗಳನ್ನು ಸೇವಿಸಿದರೆ ಮುಂದೇನಾಗಬಹುದು ಯೋಚಿಸಿ ಎಂದಿದ್ದಾರೆ ಡಾ.ಅರವಿಂದ ಕುಮಾರ್‌.

3ರಲ್ಲಿ ಒಬ್ಬರಿಗೆ:
ದೆಹಲಿಯ ಮೂರರಲ್ಲಿ ಒಂದು ಮಗು ವಾಯುಮಾಲಿನ್ಯದಿಂದ ಅಸ್ತಮಾ ಸಮಸ್ಯೆ ಎದುರಿಸುತ್ತಿದೆ. 1,100 ಮಕ್ಕಳ ಅಧ್ಯಯನದಿಂದ ಇದು ದೃಢಪಟ್ಟಿದೆ. ಮಾಲಿನ್ಯದಿಂದಾಗಿ ತಲೆಯಿಂದ ಕಾಲ ತುದಿಯವರೆಗೆ ಬಾಧೆಗೆ ಒಳಗಾಗದ ಅಂಗಗಳೇ ಇಲ್ಲ. ಕೆಲವರಿಗೆ ಬೊಜ್ಜು ಹೆಚ್ಚಾಗಿದೆ, ಮತ್ತೆ ಕೆಲವರಿಗೆ ಶ್ವಾಸಕೋಶ ಸಮಸ್ಯೆ ತಲೆದೋರಿದೆ ಎಂದೂ ಅರವಿಂದ್‌ ಹೇಳಿದ್ದಾರೆ.

ಹಕ್ಕಿಗಳಿಗೂ ತೊಂದರೆ:
ವಾಯುಮಾಲಿನ್ಯದ ದುಷ್ಪರಿಣಾಮ ಮಾನವರಿಗೆ ಮಾತ್ರವಲ್ಲದೆ ಪಕ್ಷಿಗಳಿಗೂ ತಟ್ಟಿದ್ದು, “ಪ್ರತಿ ದಿನ ಕನಿಷ್ಠ 50 ವಿವಿಧ ತಳಿಯ ಹಕ್ಕಿಗಳು ಅನಾರೋಗ್ಯ ಪೀಡಿತವಾಗುತ್ತಿವೆ. ಈ ಪೈಕಿ ಹೆಚ್ಚಿನವುಗಳು ಪಾರಿವಾಳಗಳು’ ಎಂದು ವೈದ್ಯರು ತಿಳಿಸಿದ್ದಾರೆ.

Advertisement

ಆತಂಕದ ಛಾಯೆ
– ದೆಹಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಮಿತಿಗಿಂತ 80 ಪಟ್ಟು ಹೆಚ್ಚಾದ ವಿಷಯುಕ್ತ ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ 2.5) ಪ್ರಮಾಣ.
– ಮುಂದಿನ 4-5 ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದ ಪರಿಸರ ತಜ್ಞರು
– ದೆಹಲಿ, ಹರ್ಯಾಣ, ಪಂಜಾಬ್‌, ಉ.ಪ್ರದೇಶ ಸರ್ಕಾರದೊಂದಿಗೆ ತುರ್ತು ಸಭೆ ನಡೆಸುವಂತೆ ಪ್ರಧಾನಿ ಮೋದಿಗೆ ಛೇಂಬರ್‌ ಆಫ್ ಟ್ರೇಡ್‌ ಆ್ಯಂಡ್‌ ಇಂಡಸ್ಟ್ರಿ(ಸಿಟಿಐ) ಮನವಿ.
– ವಾಯುಮಾಲಿನ್ಯದಿಂದ ಮುಕ್ತರಾಗಲು ಹಿಮಾಚಲದತ್ತ ಪ್ರವಾಸ ಹೊರಟ ರಾಜಧಾನಿ ನಿವಾಸಿಗಳು
– ದೆಹಲಿ ಮಾತ್ರವಲ್ಲದೇ ಉತ್ತರಪ್ರದೇಶದಲ್ಲೂ ಗಂಭೀರ ಸ್ಥಿತಿ ತಲುಪಿದ ವಾಯುಮಾಲಿನ್ಯ ಮಟ್ಟ

Advertisement

Udayavani is now on Telegram. Click here to join our channel and stay updated with the latest news.

Next