ಮಹದೇವಪುರ: ಕಲುಷಿತ ನೀರು ಕನ್ನಮಂಗಲ ಮುಳ್ಳುಕೆರೆಗೆ ಸೇರುತ್ತಿರುವ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನುಗಳು ಕೆರೆಯ ಬದಿಗೆ ಬಂದು ನಿಂತಿದ್ದು, ಕೆರೆ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ.
ಕನ್ನಮಂಗಲ ಸಮೀಪ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಶುದ್ಧೀಕರಣ ಮಾಡದೆ ನೇರವಾಗಿ ಕೆರೆಯನ್ನು ಸೇರುತ್ತಿರುವ ಕಾರಣ ಮೀನುಗಳು ಸಾಯುತ್ತಿವೆ.
ಕನ್ನಮಂಗಲ ಮುಳ್ಳು ಕೆರೆಯನ್ನು 2021ರಲ್ಲಿ ಅಭಿವೃದ್ಧಪಡಿಸಲಾಗಿದ್ದು, ಶುದ್ಧ ನೀರಿನಿಂದ ಕೂಡಿತ್ತು. ಆದರೆ, ಇತ್ತೀಚೆಗೆ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಕೆರೆ ಸೇರ್ಪಡೆಯಾಗಿ ಕಲುಷಿತಗೊಂಡು ಸಾವಿರಾರು ಜಲಚರ ಸಾವನ್ನಪ್ಪಿವೆ.
ಕೆರೆಯಲ್ಲಿ ಮೀನು ಸಾಕಾಣಿಕೆಗ ಮೂರು ವರ್ಷಗಳಿಂದ ಯಾರಿಗೂ ಗುತ್ತಿಗೆ ನೀಡಿಲ್ಲ. ಕೆರೆಯಲ್ಲಿ ಮೀನುಗಳ ಹೆಚ್ಚಾಗಿದ್ದು ಕೊಳಚೆ ಮಿಶ್ರಿತ ನೀರಿನಿಂದ ಆಮ್ಲಜನಕ ಕೊರತೆಯಾಗಿ ಮೀನುಗಳು ಮರಣಹೊಂದಿವೆ ಎನ್ನಲಾಗಿದೆ.
ಅಭಿವೃದ್ಧಿ ಹೊಂದಿದ ಕೆರೆ ಇದೀಗ ಕಲುಷಿತಗೊಂಡರೂ ಮೀನುಗಾರಿಕೆ ಇಲಾಖೆಯಾಗಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ. ಕೆರೆ ಅಭಿವೃದ್ಧಿ ಪ್ರಾಧಿಕಾರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಕನ್ನಮಂಗಲ ಕೆರೆಯಲ್ಲಿ ಮೀನುಗಳು ಮರಣ ಹೊಂದಿರುವುದರಿಂದ ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
●ಚೈತ್ರಾ ಯೋಗಾನಂದ, ಗ್ರಾಪಂ ಅಧ್ಯಕ್ಷೆ