Advertisement

ಹಳ್ಳ ಹಿಡಿದ ಶುದ್ಧ ನೀರು ಯೋಜನೆ

11:53 AM Aug 10, 2018 | Team Udayavani |

ಹಟ್ಟಿ ಚಿನ್ನದ ಗಣಿ: ಸಮೀಪದ ಯಲಗಟ್ಟಾ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಜಿಲ್ಲಾ ಪಂಚಾಯ್ತಿಯಿಂದ ಕೈಗೊಂಡ ಕಾಮಗಾರಿ ಅರೆಬರೆಯಾಗಿದ್ದು, ಯೋಜನೆಗೆ ಅಳವಡಿಸಲು ತಂದ ಫಿಲ್ಟರ್‌ ಟ್ಯಾಂಕ್‌ ಸಾಮಗ್ರಿಗಳು 5 ವರ್ಷಗಳಿಂದ ಗುಡ್ಡದಲ್ಲಿ ಅನಾಥವಾಗಿ ಬಿದ್ದಿದೆ.

Advertisement

2011-12ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ಯಲಗಟ್ಟಾ ಗ್ರಾಮಕ್ಕೆ ನೀರು ಸರಬರಾಜಿಗಾಗಿ 3 ಕಿ.ಮೀ. ಅಂತರದಲ್ಲಿರುವ ಎನ್ನಾರಿಸಿ ಮುಖ್ಯ ನಾಲೆಯಿಂದ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳಲಾಗಿತ್ತು. ಮುಖ್ಯ ನಾಲೆಯಿಂದ ನೇರವಾಗಿ ಪೈಪ್‌ಲೈನ್‌ ಮೂಲಕ ಸರಬರಾಜಾದ ನೀರು ಕುಡಿದು ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡವು.

ಇದರಿಂದಾಗಿ ಗ್ರಾಮಸ್ಥರು ನೀರು ಶುದ್ಧೀಕರಿಸಿ ಪೂರೈಸಲು ಒತ್ತಾಯಿಸಿದರು. ಹೀಗಾಗಿ ಜಿಲ್ಲಾ ಪಂಚಾಯತಿ ಮತ್ತೇ 10
ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ, ಗ್ರಾಮದ ಎತ್ತರದ ಪ್ರದೇಶವಾದ ಗುಡ್ಡದಲ್ಲಿ ಫಿಲ್ಟರ್‌ ಟ್ಯಾಂಕ್‌ ಅಳವಡಿಸಿ ಶುದ್ಧ
ನೀರು ಪೂರೈಸಲು ಯೋಜನೆ ರೂಪಿಸಿತ್ತು.

ನನೆಗುದಿಗೆ: ಯಲಗಟ್ಟಾ ಗ್ರಾಮದ ಹೊರವಲಯದ ಬಂಡೇಬಾವಿ ರಸ್ತೆ ಪಕ್ಕದಲ್ಲಿ ವಾಟರ್‌ ಫಿಲ್ಟರ್‌ ಟ್ಯಾಂಕ್‌
ಅಳವಡಿಸಲು ಜಾಗೆ ಗುರುತಿಸಲಾಗಿತ್ತು. ಅದಕ್ಕಾಗಿ ರೈತರೊಬ್ಬರು ತಮ್ಮ ಜಮೀನು ಸಹ ಬಿಟ್ಟುಕೊಟ್ಟಿದ್ದಾರೆ. ಆದರೆ ಫಿಲ್ಟರ್‌ ಟ್ಯಾಂಕ್‌ ಅಳವಡಿಕೆ ಕಾಮಗಾರಿ ಪಡೆದ ಗುತ್ತಿಗೆದಾರರು, ಎಂಜಿನೀಯರ್‌ಗಳ ನಿರ್ಲಕ್ಷ್ಯದಿಂದ ಕಾಮಗಾರಿ ಅರೆಬರೆಯಾಗಿ ಐದು ವರ್ಷದಿಂದ ನನೆಗುದಿಗೆ ಬಿದ್ದಿದೆ.

ಪರಿಣಾಮ ಈಗಲೂ ಮುಖ್ಯನಾಲೆಯ ನೀರು ನೇರವಾಗಿ ಗ್ರಾಮಕ್ಕೆ ಪೂರೈಕೆ ಆಗುತ್ತಿದೆ. ಗ್ರಾಮದಲ್ಲಿ ತಂದು ಬಿಸಾಡಿ ಹೋಗಿರುವ ಫಿಲ್ಟರ್‌ ಟ್ಯಾಂಕ್‌ನ್ನು ಅಳವಡಿಸಿ, ಕಾಮಗಾರಿ ಪೂರ್ಣಗೊಳಿಸಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಕಾಮಗಾರಿ ನಡೆಯುತ್ತಿಲ್ಲ. 

Advertisement

ಯಲಗಟ್ಟಾ ಗ್ರಾಮದಲ್ಲಿ ಕೈಗೊಂಡಿರುವ ನೀರು ಪೂರೈಕೆ ಕಾಮಗಾರಿ ಗುತ್ತಿಗೆದಾರ ಹಾಗೂ ಎಂಜಿನೀಯರ್‌ಗಳ ನಿರ್ಲಕ್ಷ್ಯದಿಂದ ಯೋಜನೆ ಹಳ್ಳ ಹಿಡಿದಿದೆ. ಯೋಜನೆಯ ಸಾಮಾಗ್ರಿಗಳು ಹಾಳಾಗುತ್ತಿವೆ. ಕೂಡಲೆ ಕಾಮಗಾರಿ ಪುನಾರಂಭಿಸಿ ತ್ವರಿತವಾಗಿ ಮುಗಿಸಿ ಶುದ್ಧ ನೀರು ಪೂರೈಸಬೇಕು.
 ಅಣ್ಣಯ್ಯ ಗ್ರಾಮಸ್ಥ. ಯಲಗಟ್ಟಾ.

ಕಳೆದ ನಾಲ್ಕು ವರ್ಷಗಳ ಹಿಂದೆ ಮುಖ್ಯನಾಲೆಯಿಂದ ಯಲಗಟ್ಟಾ ಗ್ರಾಮಕ್ಕೆ ಪೂರೈಕೆಯಾಗುವ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲು ಫಿಲ್ಟರ್‌ ಟ್ಯಾಂಕ ತಂದಿದ್ದಾರೆ. ಆದರೆ ಅದನ್ನು ಅಳವಡಿಸುವ ಬಗ್ಗೆ ತಾಪಂ ಕಾ.ನಿ. ಅಧಿಕಾರಿ, ಜಿಪಂ ಎಂಜಿನೀಯರ್‌ಗಳ ಜತೆ ಚರ್ಚಿಸಿದರೂ ಯಾರಿಂದಲೂ ಸಮರ್ಪಕ ಸ್ಪಂದನೆ ಸಿಗುತ್ತಿಲ್ಲ.
 ದ್ಯಾವಪ್ಪ, ಅಧ್ಯಕ್ಷ, ಗ್ರಾ.ಪಂ. ರೋಡಲಬಂಡಾ (ತ).

Advertisement

Udayavani is now on Telegram. Click here to join our channel and stay updated with the latest news.

Next